ಫೆಬ್ರವರಿ 16ರಂದು ಕಾವೇರಿ ವಿವಾದದ ಅಂತಿಮ ತೀರ್ಪು
ಬೆಂಗಳೂರು, ಫೆಬ್ರವರಿ 15: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತ ಸುಪ್ರೀಂಕೋರ್ಟ್‌ನ ಅಂತಿಮ ತೀರ್ಪು ನಾಳೆ (ಫೆ.16) ಅಥವಾ ಫೆಬ್ರವರಿ 23ರೊಳಗೆ ಪ್ರಕಟವಾಗುವ ಸಾಧ್ಯತೆಯಿದೆ.
ರಾಜ್ಯದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ನೀರಾವರಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರುಗಳೇ ಈ ವಿಷಯ ಸ್ಪಷ್ಟಪಡಿಸಿದ್ದು, ಕಾವೇರಿ ತೀರ್ಪು ಫೆಬ್ರವರಿ 23ರೊಳಗೆ ಹೊರಬೀಳಲಿದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಫೆ.23ರೊಳಗೆ ಕಾವೇರಿ ವಿವಾದದ ಕುರಿತ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಹೊರಬೀಳಲಿದ್ದು, ರಾಜ್ಯದ ಪರ ತೀರ್ಪು ಬರುವ ವಿಶ್ವಾಸವಿದೆ ಎಂದಿದ್ದಾರೆ.

ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿ, ಕಾವೇರಿ ನದಿ ಪಾತ್ರದ ಕೃಷಿ ಇಳುವರಿ, ಬೆಳೆ ಪದ್ಧತಿಗಳನ್ನು ಪರಿಗಣಿಸಬೇಕಾಗಿ ನಮ್ಮ ವಕೀಲರ ತಂಡ ವಾದ ಸುಪ್ರಿಂನಲ್ಲಿ ಮಂಡಿಸಿದ್ದು, ರಾಜ್ಯದ ಪರವಾದ ತೀರ್ಪು ಬರುವ ವಿಶ್ವಾಸವಿದೆ ಎಂದಿದ್ದಾರೆ.
ಕಾನೂನು ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಕಾವೇರಿ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರಿಂಕೋರ್ಟ್ ನ ವಿಭಾಗೀಯ ಪೀಠದ ನ್ಯಾಯಮೂರ್ತಿಯೊಬ್ಬರು ನಿವೃತ್ತಿ ಆಗುತ್ತಿದ್ದು, ಫೆಬ್ರವರಿ 23ರಂದು ಅಂತಿಮ ತೀರ್ಪು ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಇದೇ ವಿಷಯವನ್ನು ಹೇಳಿದ್ದು, ರಾಜ್ಯದ ಪರವಾಗಿಯೇ ತೀರ್ಪು ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆಯ ಕುರಿತು 2007ರ ಹೈಕೋರ್ಟ್ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು, ಕೇರಳ ರಾಜ್ಯಗಳು ಮೇಲ್ಮನವಿ ಸಲ್ಲಿಸಿದ್ದು, ಸುಪ್ರಿಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಪ್ರಕರಣದ ವಿಚಾರಣೆ ನಡೆಸಿದ್ದು, ಫೆಬ್ರವರಿ 23ರೊಳಗೆ ತೀರ್ಪು ನೀಡಲಿದೆ.
ಮಹಾದಾಯಿ ನ್ಯಾಯಾಧಿಕರಣಕ್ಕೆ ಭೇಟಿ
ನವಲಗುಂದ ಶಾಸಕ ಎನ್.ಕೆ.ಕೋನರೆಡ್ಡಿ ಅವರು ಮಹದಾಯಿ ನ್ಯಾಯಾಧಿಕರಣದ ಕಲಾಪದಲ್ಲಿ ಭಾಗವಹಿಸಿ ಕಲಾಪ ವೀಕ್ಷಿಸಿದರು. ರಾಜ್ಯದ ಪರ ಮಹದಾಯಿ ನ್ಯಾಯಾಧಿಕರಣದಲ್ಲಿ ವಕಾಲತ್ ವಹಿಸಿರುವ ಮೋಹನ್ ಕಾತರ್ಕಿ ಮತ್ತು ಸೋಮಪ್ಪನೂರ್ ಅವರನ್ನು ಭೇಟಿ ಮಾಡಿ ಪ್ರಕರಣದ ಗತಿಯ ಬಗ್ಗೆ ಮಹಿತಿ ಪಡೆದರು.












Click it and Unblock the Notifications