ಬೆಂಗಳೂರಿನ ಪಶ್ಚಿಮ ಭಾಗದಲ್ಲಿ ಶನಿವಾರ ನೀರಿಲ್ಲ
ಬೆಂಗಳೂರು, ಆ.8 : ಬೆಂಗಳೂರಿನ ಪಶ್ಚಿಮ ಭಾಗದ ಬಡಾವಣೆಗಳಲ್ಲಿ ಆ.8 ಮತ್ತು 9ರಂದು ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಕೆಂಗೇರಿ ಬಳಿ ಶುಕ್ರವಾರ ಬೆಳಗ್ಗೆ ನೀರು ಪೂರೈಕೆ ಮಾಡುವ ಪೈಪ್ ಒಡೆದಿರುವುದರಿಂದ ವ್ಯತ್ಯಯ ಉಂಟಾಗಲಿದೆ.
ಕಾವೇರಿ ಎರಡನೇ ಹಂತದ ಯೋಜನೆಗೆ ನೀರು ಪೂರೈಕೆ ಮಾಡುವ ಪೈಪ್ ಲೈನ್ ಕೆಂಗೇರಿಯ ಕೊಮ್ಮಘಟ್ಟ ಬಳಿ ಶುಕ್ರವಾರ ಒಡೆದು ಹೋಗಿದ್ದು ಕಾವೇರಿ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ಮತ್ತು ಶನಿವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಎಲ್ಲಿ ನೀರು ಪೂರೈಕೆ ಇಲ್ಲ : ಏರ್ ಪೋರ್ಟ್ ರಸ್ತೆ, ಕೆಂಗೇರಿ, ರಾಜರಾಜೇಶ್ವರಿ ನಗರ, ಗೋವಿಂದರಾಜನಗರ, ವಿಜಯನಗರ, ಮಹಾಲಕ್ಷ್ಮೀಪುರ ಮುಂತಾದ ಬೆಂಗಳೂರಿನ ಪಶ್ಚಿಮ ಭಾಗದ ಬಡಾವಣೆಗಳಲ್ಲಿ ಶುಕ್ರವಾರ ಸಂಜೆ ಮತ್ತು ಶನಿವಾರ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ಮೇಕೆದಾಟುವಿನಿಂದ ಬೆಂಗಳೂರಿಗೆ ಕಾವೇರಿ ನೀರು]
ರಸ್ತೆ ಮೇಲೆ ಹರಿಯುತ್ತಿದೆ ನೀರು : ಶುಕ್ರವಾರ ಮಧ್ಯಾಹ್ನ 12.30ರ ಸುಮಾರಿಗೆ ಕೊಮ್ಮಘಟ್ಟ ಬಳಿ ಕಾವೇರಿ ನೀರು ಪೂರೈಕೆ ಮಾಡುವ ಪೈಪ್ ಒಡೆದು ಹೋಗಿದ್ದು ರಸ್ತೆಯ ಮೇಲೆ ನೀರು ಹರಿಯುತ್ತಿದೆ. ರಸ್ತೆಯ ಮೇಲೆ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಕೃತಕ ಪ್ರವಾಹ ಸೃಷ್ಠಿಯಾಗಿದೆ.
ನೀರಿನ ಹರಿವು ಸಂಪೂರ್ಣವಾಗಿನಿಂತ ಬಳಿಕ ಪೈಪ್ ಲೈನ್ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಜಲಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಪೈಪ್ ಲೈನ್ ದುರಸ್ತಿ ಕಾರ್ಯ ಮುಗಿಯುವ ತನಕ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications