ಏಪ್ರಿಲ್ 1 ರಿಂದ ರಾಜ್ಯಾದ್ಯಂತ ಓಮ್ನಿ ಆಂಬುಲೆನ್ಸ್ ನಿಷೇಧ
ಬೆಂಗಳೂರು, ಜನವರಿ 17: ರಾಜ್ಯದಲ್ಲಿ ಏ.1 ರ ಬಳಿಕ ಓಮ್ನಿ ಆಂಬುಲೆನ್ಸ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಸಾರಿಗೆ ಇಲಾಖೆ ಸಿದ್ಧತೆ ನಡೆಸಿದೆ.
ಈ ವಾಹನಗಳಲ್ಲಿ ಆಂಬುಲೆನ್ಸ್ ನಲ್ಲಿ ಇರಬೇಕಾದ ಸೌಲಭ್ಯಗಳು ಇಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅಪಘಾತ ಸಂಭವಿಸಿದರೆ ರೋಗಿ ಸೇರಿದಂತೆ ಜೊತೆಗಿರುವವರ ಪ್ರಾಣಕ್ಕೂ ಅಪಾಯವಾಗುವ ಸಾಧ್ಯತೆಗಳಿವೆ. ಹಾಗಾಗಿ ಈ ಮಾದರಿಯ ಆಂಬುಲೆನ್ಸ್ ಗಳನ್ನು ತಕ್ಷಣದಿಂದ ನಿರ್ಬಂಧಿಸುವಂತೆ ಆರೋಗ್ಯ ಇಲಾಖೆಯೂ ಕಳೆದ ವರ್ಷ ಸಾರಿಗೆ ಇಲಾಖೆಗೆ ಮನವಿ ಮಾಡಿತ್ತು.
ಅದರಂತೆ ಸಾರಿಗೆ ಓಮ್ನಿ ಆಂಬುಲೆನ್ಸ್ ಗಳನ್ನು ನಿರ್ಬಂಧಿಸಿತ್ತು. ಏಕಾಏಕಿ ನಿಷೇಧಿಸಿದ್ದಕ್ಕೆ ತಡೆ ನೀಡಿದ್ದ ಹೈಕೋರ್ಟ್, 2018 ರ ಏ.1 ಬಳಿಕ ನಿಷೇಧಿಸುವಂತೆ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಏ.1ರ ಬಳಿಕ ಓಮ್ನಿ ಆಂಬುಲೆನ್ಸ್ ನಿಷೇಧಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಈ ಪ್ರಕಾರ ಏ.1 ರ ಬಳಿಕ ಓಮ್ನಿ ವಾಹನಗಳನ್ನು ಆಂಬುಲೆನ್ಸ್ ಗಳಾಗಿ ನೋಂದಣಿ ಮಾಡುವ ಹಾಗಿಲ್ಲ. ಜತೆಗೆ ಈಗಾಗಲೇ ನೋಂದಣಿಯಾಗಿರುವ ಓಮ್ನಿ ವಾಹನಗಳ ಅನುಮತಿಯನ್ನೂ ಕೂಡ ಹಿಂಪಡೆಯಲಾಗುತ್ತದೆ.
ಸಾರಿಗೆ ಇಲಾಖೆ ಮೂಲಗಳ ಪ್ರಕಾರ ರಾಜ್ಯದಲ್ಲಿ70 ಓಮ್ನಿ ಆಂಬುಲೆನ್ಸ್ ಗಳಿದ್ದು, ಈ ಪೈಕಿ ಬೆಂಗಳೂರು ನಗರದಲ್ಲಿ 11 ಓಮ್ನಿ ಆಂಬುಲೆನ್ಸ್ ಗಳಿವೆ ಎಂದು ಸಾರಿಗೆ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.











Click it and Unblock the Notifications