Bengaluru Tunnel Road: ಬೆಂಗಳೂರಿನಲ್ಲಿ 30 ಕಿ.ಮೀ. ಸುರಂಗ ಮಾರ್ಗ, 50 ಸಾವಿರ ಕೋಟಿ ವೆಚ್ಚ
ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ಸರ್ಕಾರ ಗಂಭೀರವಾಗಿ ಚಿಂತನೆ ನಡೆಸುತ್ತಿದೆ. ಇದರ ಭಾಗವಾಗಿ ನಗರದಲ್ಲಿ 30 ಕಿ.ಮೀ ಉದ್ದದ ಸುರಂಗ ರಸ್ತೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದ್ದು, ಇದಕ್ಕೆ ಸುಮಾರು 50 ಸಾವಿರ ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಸದ್ಯ ಯೋಜನೆ ರೂಪಿಸುತ್ತಿದ್ದು, ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಮತ್ತು ಹಳೆ ಮದ್ರಾಸ್ ರಸ್ತೆ ಮೂಲಕ 30 ಕಿಮೀ ಉದ್ದದ ಸುರಂಗದ ಮೂಲಕ ಸಂಪರ್ಕಿಸುವ ಯೋಜನೆ ಇದಾಗಿರಲಿದೆ. ಈ ಸುರಂಗ ನಿರ್ಮಾಣವಾದ ಬಳಿಕ ನಗರದ ಪ್ರಮುಖ 5 ರಸ್ತೆಗಳ ನಡುವಿನ ಪ್ರಯಾಣದ ಸಮಯ ಕೇವಲ 20 ನಿಮಿಷವಾಗಿರಲಿದೆ.

ಪ್ರಸ್ತುತ ಬೆಂಗಳೂರು ನಗರದ 62 ಕಿಲೋ ಮೀಟರ್ ಹೊರ ವರ್ತುಲ ರಸ್ತೆಯ ಮೂಲಕ ಸಂಪರ್ಕ ಸಾಧಿಸುತ್ತವೆ. ಈ ಎಲ್ಲಾ ರಸ್ತೆಗಳು ನಗರದೊಳಗೆ ಸಾಗುತ್ತಿದ್ದು ಸಾಕಷ್ಟು ಟ್ರಾಫಿಕ್ ಸಮಸ್ಯೆಗೆ ಕಾರಣವಾಗಿದೆ. ಟ್ರಾಫಿಕ್ ಕಾರಣದಿಂದ ಬೆಂಗಳೂರು ನಗರದ ಹೆಸರು ಹಾಳಾಗುತ್ತಿದ್ದು, ಇದನ್ನು ತಪ್ಪಿಸಲು ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲೇಬೇಕಿದೆ.
ಸುರಂಗ ರಸ್ತೆಗಳೇ ಸಮಸ್ಯೆಗೆ ಪರಿಹಾರ!
ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರು ನಗರದ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಸುರಂಗ ರಸ್ತೆಗಳನ್ನು ನಿರ್ಮಿಸುವುದು ಇಂದೇ ಪರಿಹಾರವಾಗಿದೆ. ಪರ್ಯಾಯ ಮಾರ್ಗಗಳನ್ನು ನಿರ್ಮಿಸಲು ಹಲವು ಅಡೆತಡೆಗಳು ಇವೆ. ಮೆಟ್ರೋ ಲೈನ್, ಫ್ಲೈ ಓವರ್, ಮಂದಿರ, ಮಸೀದಿಗಳಿದ್ದು ರಸ್ತೆಗಳನ್ನು ನಿರ್ಮಿಸಲು ಅಡ್ಡಿಯಾಗಿವೆ. ಆದ್ದರಿಂದ ಸುರಂಗ ಮಾರ್ಗದಲ್ಲಿ ರಸ್ತೆಗಳನ್ನು ನಿರ್ಮಿಸಿದರೆ ಇದೆಲ್ಲಾ ಸಮಸ್ಯೆಗಳು ಇರುವುದಿಲ್ಲ ಎನ್ನುವುದು ಅಧಿಕಾರಿಗಳ ಯೋಜನೆಯಾಗಿದೆ.
ರಾಜ್ಯ ಸರ್ಕಾರದ ಹಣ
ಈ ಯೋಜನೆಗೆ ರಾಜ್ಯ ಸರ್ಕಾರವೇ ಹಣ ಹೊಂದಿಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೈಬ್ರಿಡ್ ವರ್ಷಾಶನ ಮಾದರಿಯನ್ನು ಅಳವಡಿಸಿಕೊಂಡಿದೆ. ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣದ ಮೂಲಕ ಎನ್‌ಹೆಚ್‌ಎಐ 40 ಪ್ರತಿಶತ ವೆಚ್ಚವನ್ನು ನೀಡುತ್ತದೆ. ಗುತ್ತಿಗೆದಾರರು ಉಳಿದ ಮೊತ್ತವನ್ನು ಬಿಒಟಿ ಮಾದರಿಯಲ್ಲಿ ಒದಗಿಸುತ್ತಾರೆ.
ಎನ್‌ಎಚ್‌ಎಐ ಸುರಂಗದ ಜೋಡಣೆಯ ಉದ್ದಕ್ಕೂ ಸರ್ಕಾರಿ ಭೂಮಿಯನ್ನು ಹುಡುಕುತ್ತಿದೆ. ಹೌಸಿಂಗ್ ಸೊಸೈಟಿಗಳು, ಅಪಾರ್ಟ್‌ಮೆಂಟ್ ಸಂಕೀರ್ಣಗಳು ಮತ್ತು ಶಾಪಿಂಗ್ ಮಾಲ್‌ಗಳಿಗೆ ಅಪ್ ಮತ್ತು ಡೌನ್ ರಾಂಪ್‌ಗಳ ಮೂಲಕ ಸುರಂಗಕ್ಕೆ ನೇರ ಪ್ರವೇಶವನ್ನು ನೀಡಲಾಗುವುದು ಎಂದು ಎನ್‌ಎಚ್‌ಎಐ ತಿಳಿಸಿದೆ.
ಹಳೆ ಮದ್ರಾಸ್ ರಸ್ತೆ ಮತ್ತು ಬಳ್ಳಾರಿ ರಸ್ತೆ ಮೂಲಕ ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕಿಸುವ 74-ಕಿಮೀ ಪೆರಿಫೆರಲ್ ರಿಂಗ್ ರಸ್ತೆಯ ದಶಕದ ಹಳೆಯ ಯೋಜನೆಯು ಭಾರಿ ಭೂ ವೆಚ್ಚದ ಕಾರಣದಿಂದ ಕಾರ್ಯರೂಪಕ್ಕೆ ಬಂದಿಲ್ಲ. ಸುರಂಗ ಮಾರ್ಗವು ಕಾರ್ಯರೂಪಕ್ಕೆ ಬಂದರೆ ಈ ಯೋಜನೆಯನ್ನು ಕೈಬಿಡುತ್ತಾರಾ ಎನ್ನುವ ಬಗ್ಗೆ ಸ್ಪಷ್ಟವಾಗಿಲ್ಲ.
ಅಧ್ಯಯನಕ್ಕೆ ಸಿಂಗಾಪುರಕ್ಕೆ ಭೇಟಿ?
ಇನ್ನು ಸುರಂಗ ರಸ್ತೆಗಳ ಬಗ್ಗೆ ಅಧ್ಯಯನ ಮಾಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಅಧಿಕಾರಿಗಳ ತಂಡ ಸಿಂಗಾಪುರಕ್ಕೆ ತೆರಳಲಿದೆ ಎಂದು ಹೇಳಲಾಗಿದೆ. ಸುರಂಗ ಮಾರ್ಗ ನಿರ್ಮಾಣದ ಹೊಸ ತಂತ್ರಜ್ಞಾನ, ನಿರ್ವಹಣೆ, ವೆಚ್ಚಗಳ ಬಗ್ಗೆ ಅಧ್ಯಯನ ಮಾಡಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications