Karnataka rain: ಇನ್ನೂ 3 ದಿನ ಮಳೆಯಾರ್ಭಟ, ನಂತರ ಇಳಿಕೆ, ಬಿಸಿಲಿನ ದರ್ಶನ ಸಾಧ್ಯತೆ
ಬೆಂಗಳೂರು, ಜುಲೈ 27: ನಿರಂತರ ಮಳೆಗೆ ತತ್ತರಿಸಿರುವ ಕರ್ನಾಟಕ ರಾಜ್ಯದ ಜನರಿಗೆ ಸಿಹಿ ಸುದ್ದಿಯೊಂದು ಲಭಿಸಿದ್ದು, ಇನ್ನೂ ಮೂರು ದಿನ ಮಳೆ ಹೀಗೆ ಮುಂದುವರಿಯಲಿದೆ. ನಂತರ ಮಳೆ ಕ್ಷೀಣಿಸಲಿದ್ದು ಬಿಸಿಲಿನ ದರ್ಶನವಾಗಲಿದೆ. ವಾತಾವರಣ ಸಹಜ ಸ್ಥಿತಿಗೆ ಮರಳುವ ಸಾಧ್ಯತೆಗಳು ಇವೆ ಎಂದು ಹವಾಮಾನ ಇಲಾಖೆ ಮುನ್ಸೂಚನಾ ವರದಿ ಮಾಹಿತಿ ನೀಡಿದೆ.
ಕರ್ನಾಟಕ ಕರಾವಳಿ ಜಿಲ್ಲೆಗಳಿಗೆ ಇಂದು ಸಹ ಎಡೆಬಿಡದೆ ಭಾರೀ ಮಳೆ ಸುರಿಯಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ನಾಳೆ ಶುಕ್ರವಾರ ಆರೆಂಜ್ ಅಲರ್ಟ್ ಹಾಗೂ ಶನಿವಾರ ಸಾಧಾರಣದಿಂದ ತುಸು ಜೋರು ಮಳೆ ಸುರಿಯಲಿದ್ದು, ಅಂದು ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

ಈ ವರದಿ ಗಮನಿಸಿದರೆ, ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಮಳೆ ಕಂಡಿದ್ದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ವರುಣಾತಂಕದಿಂದ ಬಿಡುವು ಸಿಗಲಿದೆ. ರಾಜ್ಯದ ಗರಿಷ್ಠ ಮಳೆ ಕಂಡಿದ್ದ ಕೋಸ್ಟ್ ಜಿಲ್ಲೆಗಳು ಮತ್ತೆ ಸಾಮಾನ್ಯ ಸ್ಥಿತಿಗೆ ಮರಳಲಿವೆ. ಮೀನುಗಾರರು ಬದುಕು ಮತ್ತೆ ಎಂದಿನಂತೆ ಮುಂದುವರಿಯಲಿದೆ.
ಬೆಳಗಾವಿ ಇಂದು ಸಹ ವರುಣಾರ್ಭಟ
ಇನ್ನೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ 10 ದಿನಗಳಿಂದ ದಿನದ 24 ಗಂಟೆಯು ಸುರಿಯುತ್ತಿರುವ ಮಳೆಯು ಶನಿವಾರ ಅಂತ್ಯ ಕಾಣುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಬೆಳಗಾವಿಗೆ ಧಾರಾಕಾರ ಮಳೆ ಸುರಿಯುವುದರಿಂದ ಇಂದು ಆರೆಂಜ್ ಅಲರ್ಟ್ ನೀಡಲಾಗಿದೆ.

ಇಂದು ಮತ್ತು ನಾಳೆ ಶುಕ್ರವಾರವರೆಗೆ ಬೀದರ್, ಗದಗ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಿಗೆ ಜೋರು ಮಳೆ ಆಗುವ ಸಾಧ್ಯತೆಗಳು ಇವೆ. ಹೀಗಾಗಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಇನ್ನುಳಿದ ಎಲ್ಲ ಜಿಲ್ಲೆಗಳಲ್ಲಿ ಸಹ ಹಗುರದಿಂದ ಸಾಧಾರಣವಾಗಿ ಮಳೆ ಬರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಜಮೀನುಗಳಲ್ಲಿ ಕಾಲಿಡದಂತೆ ಸ್ಥಿತಿ ನಿರ್ಮಾಣ
ಉತ್ತರ ಕರ್ನಾಟಕದಲ್ಲಿ ವಾರಕ್ಕೂ ಹೆಚ್ಚು ಕಾಲ ಸುರಿದ ವ್ಯಾಪಕ ಮಳೆಗೆ ನದಿಗಳೆಲ್ಲ ತುಂಬಿವೆ. ಜಮೀನುಗಳಲ್ಲಿ ಕಾಲಿಡದಂತೆ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ತಾತ್ಕಾಲಿಕವಾಗಿ ಕೃಷಿ ಚಟುವಟಿಕೆಗಳು ನಿಂತಿವೆ. ಮಳೆ ನಿರೀಕ್ಷೆಯಲ್ಲಿದ್ದ ರೈತರು ಇದೀಗ ಈ ಮಳೆ ಕೆಲವು ದಿನ ಬರದಿದ್ದರೆ ಸಾಕು ಎಂದು ಹೇಳುತ್ತಿದ್ದಾರೆ.
ಮುಂಗಾರು ಮಳೆ ನಿಧಾನವಾಗಿ ದಕ್ಷಿಣ ಒಳನಾಡಿನತ್ತ ಮುಖ ಮಾಡಿದೆ. ಈಗಾಗಲೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲಿ ಸುರಿಯುತ್ತಿದೆ. ಇದು ಈ ಭಾಗದ ಇತರ ಜಿಲ್ಲೆಗಳಿಗೂ ವ್ಯಾಪಿಸಲಿದೆ.
ಕಳೆದ 24 ಗಂಟೆಯಲ್ಲಿ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಡುಪಿ, ಉತ್ತರ ಕನ್ನಡಜಿಲ್ಲೆಗಳ ವ್ಯಾಪ್ತಿಯಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಶಿವಮೊಗ್ಗದ ಲಿಂಗನಮಕ್ಕಿ, ದಕ್ಷಿಣ ಕನ್ನಡದ ಮುಲ್ಕಿ, ಉಡುಪಿಯ ಸಿದ್ದಾಪುರ, ತಾಳಗುಪ್ಪ, ಚಿಕ್ಕಮಗಳೂರು, ಮಂಗಳೂರು ನಗರ, ಮಂಗಳೂರು ವಿಮಾನ ನಿಲ್ದಾಣ, ಬೆಳಗಾವಿ, ಹಾಸನ, ಕೊಡಗು, ಹಾವೇರಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಭಾರೀ ಮಳೆ ದಾಖಲಾಗಿದೆ. ಇದು ಇನ್ನೆರಡು ದಿನ ಮುಂದುವರಿದ ನಂತರ ಕಡಿಮೆ ಆಗುವ ಸಾಧ್ಯತೆಗಳು ಇವೆ.












Click it and Unblock the Notifications