ಬೆಂಗಳೂರಿನ ಚಾಲುಕ್ಯ ವೃತ್ತಕ್ಕೆ ಕೆಲವೇ ದಿನದಲ್ಲಿ ಹೊಸ ವಿನ್ಯಾಸ
ಬೆಂಗಳೂರು, ಮೇ 26 : ಸದಾ ವಾಹನಗಳ ದಟ್ಟಣೆಯಿಂದ ಕೂಡಿರುವುದು ಬೆಂಗಳೂರಿನ ಚಾಲುಕ್ಯ ವೃತ್ತ. ವೃತ್ತದಲ್ಲಿ ಅಶ್ವಾರೂಢ ಬಸವಣ್ಣನವರ ಪ್ರತಿಮೆ ಇದೆ. ಕೆಲವೇ ದಿನಗಳಲ್ಲಿ ವೃತ್ತದಲ್ಲಿ ಹೊಸ ವಿನ್ಯಾಸದಲ್ಲಿ ಪ್ರತಿಮೆ ಕಂಗೊಳಿಸಲಿದೆ.
Recommended Video
ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ಜೈನ್ ಚಾಲುಕ್ಯ ವೃತ್ತಕ್ಕೆ ಮಂಗಳವಾರ ಭೇಟಿ ನೀಡಿದರು. ಅಶ್ವಾರೂಢ ಬಸವಣ್ಣನವರ ಪ್ರತಿಮೆಯ ಸುತ್ತಲು ಅನುಭವ ಮಂಟಪ ಪರಿಕಲ್ಪನೆಯಡಿ ಮರು ವಿನ್ಯಾಸಗೊಳಿಸುವ ಕಾಮಗಾರಿ ವೀಕ್ಷಣೆ ಮಾಡಿದರು.
ಬಸವಣ್ಣನವರ ತತ್ವಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲು ಚಾಲುಕ್ಯ ವೃತ್ತದಲ್ಲಿರುವ ಬಸವಣ್ಣನವರ ಪ್ರತಿಮೆಯ ಅರ್ಧ ಚಂದ್ರಕೃತಿಯ ಬೃಹತ್ ಗೋಡೆ ನಿರ್ಮಾಣ ಮಾಡಲಾಗುತ್ತಿದೆ. ಈ ಕಾಮಗಾರಿಯನ್ನು ಮೇಯರ್ ಇಂದು ವೀಕ್ಷಿಸಿದರು.

ಪ್ರತಿಮೆ ಹಿಂದೆ ಗೋಡೆ ನಿರ್ಮಾಣ ಮಾಡಿದ ಬಳಿಕ ಅಲಂಕಾರಿಕ ವಿದ್ಯುತ್ ದೀಪಗಳು, ಶಿಲಾ ಸ್ತಂಭಗಳನ್ನು ಅಳವಡಿಸಲಾಗುತ್ತಿದೆ. ಅಂತಿಮ ಹಂತದ ಕಾಮಗಾರಿ ನಡೆಯುತ್ತಿದ್ದು, ಶೀಘ್ರವೇ ಹೊಸ ವಿನ್ಯಾಸ ಉದ್ಘಾಟನೆಯಾಗಲಿದೆ.
ಕಿಮ್ಸ್ ಆಸ್ಪತ್ರೆ ಬಳಿ ನಾಡಪ್ರಭು ಕೆಂಪೇಗೌಡರ ಅಶ್ವರೂಢ ಪ್ರತಿಮೆ ಇದೆ. ಅದರ ಸುತ್ತಲೂ ಕೋಟೆಯ ಮಾದರಿಯಲ್ಲಿ ವಿನ್ಯಾಸವನ್ನು ನಿರ್ಮಿಸಲಾಗಿದೆ. ಈಗ ಚಾಲುಕ್ಯ ವೃತ್ತದಲ್ಲಿ ಅನುಭವ ಮಂಟಪದ ಮಾದರಿ ವಿನ್ಯಾಸ ರಚನೆಯಾಗಲಿದೆ.

ನಗರದ ಚಾಲುಕ್ಯ ವೃತ್ತದಿಂದ ಹೆಬ್ಬಾಳ ತನಕ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿತ್ತು. ಆಗ ಚಾಲುಕ್ಯ ವೃತ್ತ ಬಹಳ ಚರ್ಚೆಯಲ್ಲಿತ್ತು. ವಿಧಾನಸೌಧ, ರಾಜಭವನಕ್ಕೆ ಚಾಲುಕ್ಯ ವೃತ್ತ ಹತ್ತಿರದಲ್ಲಿದೆ.












Click it and Unblock the Notifications