ಟ್ರಾಫಿಕ್ ಸಮಸ್ಯೆ: ಬೆಂಗಳೂರಿನಲ್ಲಿ 5 ಹೊಸ ಮೇಲ್ಸೇತುವೆ ನಿರ್ಮಾಣ, ಎಲ್ಲೆಲ್ಲಿ? ಅಂದಾಜು ವೆಚ್ಚ ಎಷ್ಟು? ಅಂಕಿ ಅಂಶ ತಿಳಿಯಿರಿ
ಬೆಂಗಳೂರು, ಮಾರ್ಚ್ 28: ಸಿಲಿಕಾನ್ ಸಿಟಿ, ಕರ್ನಾಟಕದ ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ದಿನೇ ದಿನೆ ಸಂಚಾರ ದಟ್ಟಣೆ ಸಮಸ್ಯೆ ಹೆಚ್ಚುತ್ತಿದೆ. ಅದರ ನಿವಾರಣೆಗೆ ಹೊಸ ಮಾಸ್ಟರ್ ಪ್ಲಾನ್ ವೊಂದು ರಾಜ್ಯ ಸರ್ಕಾರ ರೂಪಿಸಿದೆ.
ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ ವಿಚಾರವಾಗಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ರಾಜ್ಯ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹರಸಾಹ ಪಡುತ್ತಲೆ ಇದೆ. ಇದೀಗ ಮತ್ತೊಂದು ಹೊಸ ಯೋಜನೆ ರೂಪಿಸಿದೆ.

ಈ ಹೊಸ ಯೋಜನೆ ಪ್ರಕಾರ, ಬೆಂಗಳೂರು ಸಂಚಾರ ದಟ್ಟಣೆಯ ಪರಿಹಾರಾರ್ಥವಾಗಿ ಒಟ್ಟು ಸುಮಾರು ಐದು ಹೊಸ ಮೇಲ್ಸೇತುವೆ (New Flyovers) ತಲೆ ಎತ್ತಲಿವೆ.
ಉದ್ಯಾನ ನಗರದಲ್ಲಿ ಜನಸಂಖ್ಯೆ ಜೊತೆಗೆ ವಾಹನಗಳ ಬಳಕೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಈ ಕುಖ್ಯಾತಿಯಿಂದ ಹೊರಬರಲು ಸರ್ಕಾರ ಮತ್ತು ಬಿಬಿಎಂಪಿ ರಸ್ತೆಗಳ ಅಭಿವೃದ್ಧಿ, ರಸ್ತೆಗಳ ಅಗಲೀಕರಣ, ಅಲ್ಲದೇ ಮೇಲ್ಸೇತುವೆ ನಿರ್ಮಾಣದಂತಹ ಯೋಜನೆ ಕೈಗೊಳ್ಳುತ್ತಲೇ ಇದೆ.
ಇದರ ಮುಂದುವರಿದ ಭಾಗವಾಗೇ ಮತ್ತೆ ಐದು ಹೊಸ ಮೇಲ್ಸೇತುವೆ ನಿರ್ಮಾಣ ಮಾಡಲು ಸರ್ಕಾರ ಸಜ್ಜಾಗಿದೆ ಎನ್ನಲಾಗಿದೆ. ಬಿಬಿಎಂಪಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಶತ ಪ್ರಯತ್ನ ಮತ್ತೆ ಮುಂದೆವರಿಯಲಿದೆ. ರಾಜ್ಯ ಸರ್ಕಾರ ಪ್ರಸಕ್ತ ವರ್ಷದ ಆಯವ್ಯಯ-2023 ದಲ್ಲಿ ಹೊಸದಾಗಿ ಐದು ಫ್ಲೈಓವರ್‌ಗಳ ನಿರ್ಮಾಣಕ್ಕೆ ತೀರ್ಮಾನಿಸಿದೆ. ಈ ಯೋಜನೆಗಾಗೇ ಸರ್ಕಾರ 200 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಮೀಸಲಿಟ್ಟಿದೆ.

ಎಲ್ಲೆಲ್ಲಿ ಮೇಲ್ಸೇತುವೆ ನಿರ್ಮಾಣವಾಗುತ್ತವೆ?
ಬೆಂಗಳೂರು ನಗರದ ಪಶ್ಚಿಮ ವಲಯ, ದಾಸರಹಳ್ಳಿ ವಲಯ ಮತ್ತು ಯಲಹಂಕ ವಲಯಗಳಲ್ಲಿ ಹೆಚ್ಚು ಸಂಚಾರ ದಟ್ಟಣೆ ಕಂಡು ಬರುತ್ತಿದೆ. ಎಲ್ಲೆಲ್ಲಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತದೆಯೋ ಆ ಸ್ಥಳಗಳನ್ನು ಸರ್ಕಾರ ಗುರುತಿಸಿದೆ. ಅಲ್ಲೆಲ್ಲ ಈ ಹೊಸ ಮೇಲ್ಸೇತುವೆಗಳು ನಿರ್ಮಾಣಗೊಳ್ಳಲಿವೆ ಎಂದು ಹೇಳಲಾಗುತ್ತಿದೆ.
* ಮೇಖ್ರಿ ಸರ್ಕಲ್ ಅಂಡರ್ ಪಾಸ್‌ನಿಂದ ಜಯಮಹಲ್ ರಸ್ತೆಯವರೆಗಿನ 65 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಸದಾಶಿವನಗರ ಪೊಲೀಸ್ ಸ್ಟೇಷನ್ ಸರ್ಕಲ್ ಸಮೀಪ 40 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಮತ್ತಿಕೆರೆ ತಿರುವಿನ ಗೋಕುಲ್ ರಸ್ತೆಯಲ್ಲಿ 40 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಜಾಲಹಳ್ಳಿ ಬಳಿಯ ಓಆರ್‌ಆರ್‌ಆರ್ ಪೈಪ್‌ಲೈನ್ ಬಳಿ 40 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ನಿರ್ಮಾಣ
* ಯಲಹಂಕ ರೈತ ಸಂತೆ ಬಳಿ ಅಂಡರ್ ಪಾಸ್
ಇಷ್ಟು ಪ್ರದೇಶಗಳಲ್ಲಿ ಐದು ಮೇಲ್ಸೇತುವೆ ನಿರ್ಮಿಸಲು ನಿರ್ಧರಿಸಿರುವ ರಾಜ್ಯ ಸರ್ಕಾರ ಒಂದೇ ವರ್ಷದಲ್ಲಿ ಕಾಮಗಾರಿ ಆರಂಭ ಮಾಡಿ ತ್ವರತಿಗತಿಯಲ್ಲಿ ಮುಗಿಸು ಚಿಂತನೆಯಲ್ಲಿದೆ. ಇಷ್ಟು ಫ್ಲೈಒವರ್‌ಗಳು ಅಂದುಕೊಂಡಂತೆ ನಿರ್ಮಾಣ ಆಗುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.
ಮೇಲ್ಸೇತುವೆ ಕಾಮಗಾರಿ ತಡ:ಜನಾಕ್ರೋಶ
ಬಿಬಿಎಂಪಿ ನೇತೃತ್ವದಲ್ಲಿ ಈ ಹಿಂದೆ ನಗರದ ಶಿವಾನಂದ ವೃತ್ತದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕೆಲಸ ಅಂದುಕೊಂಡಂತಾಗಲಿಲ್ಲ. ಸುಮಾರು ಒಂದೂವರೆ ವರ್ಷದ ಯೋಜನೆ ನಾಲ್ಕು ವರ್ಷಕ್ಕೂ ಅಧಿಕ ಸಮಯ ಹಿಡಿಯಿತಿ. ಇನ್ನು ಕೋರಮಂಗಲ ಬಳಿಯಿರುವ ಈಜಿಪುರ ಮೇಲ್ಸೇತುವೆ ಅರ್ಧಕ್ಕೆ ನಿಂತು ವರ್ಷಗಳೇ ಕಳೆದಿವೆ. ಮರು ಟೆಂಡರ್ ಕರೆಯುವುದಾಗಿ ಹೇಳಿದ್ದ ಬಿಬಿಎಂಪಿ ಮಾತು ತಪ್ಪಿದೆ. ಇಂತಹ ಘಟನೆಗಳಿಂದ ಕಾಮಗಾರಿ ಸುತ್ತಮುತ್ತಲಿನ ಜನರು, ವಾಹನ ಸವಾರರು ದಿನನಿತ್ಯ ವರ್ಷವೀಡಿ ಸಂಕಷ್ಟ, ಸಂಚಾರ ದಟ್ಟಣೆ ಮತ್ತು ಧೂಳಿನಿಂದ ಆರೋಗ್ಯ ಸಮಸ್ಯೆ ಎದುರಿಸವಂತಾಗಿದೆ. ಈ ಬಾರಿಯಾದರೂ ಸರ್ಕಾರ ಉದ್ದೇಶದಂತೆ ಸೂಕ್ತ ರೀತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬುದು ಬೆಂಗಳೂರಿಗರ ಒತ್ತಾಯವಾಗಿದೆ.












Click it and Unblock the Notifications