Whitefield-KR Puram metro : ಮಾ. 25ಕ್ಕೆ ಕೆಆರ್‌ಪುರ-ವೈಟ್‌ಫೀಲ್ಡ್ ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆ
ಕೆಆರ್ ಪುರ-ವೈಟ್‌ಫೀಲ್ಡ್ ನಡುವಿನ ನಮ್ಮ ಮೆಟ್ರೋ ಮಾರ್ಗದಿಂದ ಸಾವಿರಾರು ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ಮಾರ್ಚ್ 25ರಂದು ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಲಿದ್ದಾರೆ.
ಬೆಂಗಳೂರು, ಮಾರ್ಚ್ 17; ಬೆಂಗಳೂರು ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಮಾರ್ಗವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ಉದ್ಘಾಟನೆ ಮಾಡಲಿದ್ದಾರೆ. ಕೆಆರ್ ಪುರ-ವೈಟ್‌ಫೀಲ್ಡ್ ನಡುವಿನ ಮಾರ್ಗದಿಂದ ಸಾವಿರಾರು ಐಟಿ ಉದ್ಯೋಗಿಗಳಿಗೆ ಸಹಾಯಕವಾಗಲಿದೆ. ನಗರದ ಸಂಚಾರ ದಟ್ಟಣೆ ಕಡಿಮೆ ಮಾಡುವಲ್ಲಿ ಈ ಮಾರ್ಗ ಪ್ರಮುಖ ಪಾತ್ರ ವಹಿಸಲಿದೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ಚುನಾವಣಾ ದಿನಾಂಕ ಘೋಷಣೆಗೆ ಮೊದಲು ಮಾರ್ಚ್ 25ರಂದು ಮೋದಿ ರಾಜ್ಯಕ್ಕೆ ಆಗಮಿಸಲಿದ್ದಾರೆ. ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಕೆಆರ್ ಪುರ-ವೈಟ್‌ಫೀಲ್ಡ್ ನಡುವಿನ ನಮ್ಮ ಮೆಟ್ರೋ ಮಾರ್ಗದ ಉದ್ಘಾಟನೆಯೂ ಸೇರಿದೆ.

ಬೈಯಪ್ಪನಹಳ್ಳಿ-ವೈಟ್‌ಫೀಲ್ಡ್ ನಡುವಿನ 15.50 ಕಿ. ಮೀ. ಉದ್ದದ ನಮ್ಮ ಮೆಟ್ರೋ ಯೋಜನೆಯ ಭಾಗವಾಗಿದೆ. ಕೆಆರ್ ಪುರ-ವೈಟ್‌ಫೀಲ್ಡ್ ನಡುವಿನ ನಮ್ಮ ಮೆಟ್ರೋ ನೇರಳೆ ಮಾರ್ಗ. ಈ ಯೋಜನೆಯನ್ನು ಎರಡು ಹಂತದಲ್ಲಿ ಲೋಕಾರ್ಪಣೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿದೆ. ಮೊದಲ ಹಂತದಲ್ಲಿ ಕೆಆರ್ ಪುರ-ವೈಟ್‌ಫೀಲ್ಡ್ ಮಾರ್ಗ ಲೋಕಾರ್ಪಣೆಯಾಗಲಿದೆ. 2023ರಲ್ಲಿ ಆರಂಭಗೊಳ್ಳುತ್ತಿರುವ ನಮ್ಮ ಮೆಟ್ರೋದ ಮೊದಲ ಮಾರ್ಗವಿದು.
ಎರಡನೇ ಹಂತದಲ್ಲಿ ಇದೇ ಮಾರ್ಗದಲ್ಲಿ ಕೆಆರ್ ಪುರ-ಬೈಯಪ್ಪನಹಳ್ಳಿ ನಡುವೆ ನಮ್ಮ ಮೆಟ್ರೋ ಸಂಚಾರ ನಡೆಸಲಿದೆ. ಬೆನ್ನಿಗಾನಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಬಳಿ ಕಾಮಗಾರಿ ಕೊಂಚ ವಿಳಂಬವಾಗಿರುವ ಕಾರಣ ಈ ಮಾರ್ಗ 2023ರ ಜೂನ್ ಅಥವ ಜುಲೈ ವೇಳೆಗೆ ಲೋಕಾರ್ಪಣೆಗೊಳ್ಳಲಿದೆ. ಈ ಮಾರ್ಗ ನಮ್ಮ ಮೆಟ್ರೋ ಮೊದಲ ಹಂತದ ಯೋಜನೆಯ ವಿಸ್ತರಿತ ಭಾಗವಾಗಿದೆ. ಕೆಂಗೇರಿಯಲ್ಲಿ ಮೆಟ್ರೋ ರೈಲು ಹತ್ತಿದರೆ ಕೆಆರ್ ಪುರ ತನಕ ಸಾಗಬಹುದಾಗಿದೆ.

ನಿಲ್ದಾಣಗಳು; ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ವೈಟ್‌ಫೀಲ್ಡ್, ಚನ್ನಸಂದ್ರ, ಕಾಡುಗೋಡಿ, ಪಟ್ಟಂದೂರು ಅಗ್ರಹಾರ, ಶ್ರೀ ಸತ್ಯಸಾಯಿ ಆಸ್ಪತ್ರೆ, ನಲ್ಲೂರುಹಳ್ಳಿ, ಕುಂದಲಹಳ್ಳಿ, ಸೀತಾರಾಮಪಾಳ್ಯ, ಹೂಡಿ ಜಂಕ್ಷನ್, ಗರುಡಾಚಾರ್‌ಪಾಳ್ಯ, ಮಹದೇವಪುರ ಕೆಆರ್ ಪುರ ಮತ್ತು ಬೆನ್ನಿಗಾನಹಳ್ಳಿ ನಿಲ್ದಾಣಗಳಿವೆ. ಮಾರ್ಚ್ 25ರಂದು ಮಾರ್ಗ ಉದ್ಘಾಟನೆಯಾದರೆ ಕೆಆರ್‌ಪುರ ತನಕ ರೈಲು ಸಂಚಾರ ನಡೆಸಲಿದೆ.
ಬಿಎಂಆರ್‌ಸಿಎಲ್ ಕೆಆರ್ ಪುರ-ವೈಟ್‌ಫೀಲ್ಡ್ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳ ಪ್ರಾಯೋಗಿಕ ಸಂಚಾರವನ್ನು ಈ ವರ್ಷದ ಜನವರಿಯಲ್ಲಿ ಆರಂಭ ಮಾಡಿತ್ತು. ಬಳಿಕ ಫೆಬ್ರವರಿ ತಿಂಗಳಿನಲ್ಲಿ ಮೆಟ್ರೊ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್) ಪರಿಶೀಲನೆ ನಡೆಸಿತ್ತು. ಮಾರ್ಚ್ 15ರಂದು ಮಾರ್ಗ ಉದ್ಘಾಟನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು. ಮಾರ್ಚ್ 25ಕ್ಕೆ ಈಗ ವಾಣಿಜ್ಯ ಸಂಚಾರಕ್ಕೆ ಮುಕ್ತವಾಗುತ್ತಿದೆ.
ಈ ಮಾರ್ಗದಲ್ಲಿ ಗಂಟೆಗೆ 80 ಕಿ. ಮೀ. ವೇಗದಲ್ಲಿ ನಮ್ಮ ಮೆಟ್ರೋ ರೈಲುಗಳನ್ನು ಓಡಿಸಿ ಪರೀಕ್ಷೆ ನಡೆಸಲಾಗಿದೆ. 13 ಕಿ. ಮೀ. ಮಾರ್ಗವನ್ನು 12 ನಿಮಿಷಗಳಲ್ಲಿ ರೈಲು ಕ್ರಮಿಸಿದೆ (ಯಾವುದೇ ನಿಲ್ದಾಣವಿಲ್ಲದೆ). ವಾಣಿಜ್ಯ ಸಂಚಾರ ಆರಂಭವಾದ ಬಳಿಕ ಪೀಕ್ ಹವರ್ ಅಲ್ಲದ ಸಮಯದಲ್ಲಿ ಪ್ರತಿ 10 ನಿಮಿಷಕ್ಕೆ ಒಂದು ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಅಲ್ಲದೇ ಬಿಎಂಟಿಸಿ ಸಹ ಮೆಟ್ರೋ ನಿಲ್ದಾಣದಿಂದ ವಿವಿಧ ಪ್ರದೇಶಗಳಿಗೆ ಬಸ್ ಸೇವೆಯನ್ನು ಒದಗಿಸಲಿದೆ.
ಸದ್ಯ ಬೆಂಗಳೂರು ನಗರದಲ್ಲಿ 56 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲುಗಳು ಸಂಚಾರ ನಡೆಸುತ್ತಿವೆ. ನೇರಳೆ, ಹಸಿರು ಮಾರ್ಗದಲ್ಲಿ ಮಾತ್ರ ಮೆಟ್ರೋ ಸಂಚಾರ ನಡೆಸುತ್ತಿದೆ. 2023ರಲ್ಲಿ 38.09 ಕಿ. ಮೀ. ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಓಡಿಸುವ ಗುರಿಯನ್ನು ಬಿಎಂಆರ್‌ಸಿಎಲ್ ಹೊಂದಿದೆ. ಇದರಿಂದಾಗಿ ನಮ್ಮ ಮೆಟ್ರೋ ಜಾಲ 94.09 ಕಿ. ಮೀ.ಗೆ ವಿಸ್ತರಣೆಯಾಗಲಿದೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ ಸಿಟಿ ಸೇರಿ ಎರಡು ಟೆಕ್ ಹಬ್‌ಗಳನ್ನು 2023ರಲ್ಲಿ ನಮ್ಮ ಮೆಟ್ರೋ ಸಂಪರ್ಕಿಸಲಿದೆ.
ಬೆಂಗಳೂರು ನಗರದ ಮತ್ತೊಂದು ಮಹತ್ವದ ನಮ್ಮ ಮೆಟ್ರೋ ಮಾರ್ಗವಾದ 18.82 ಕಿ. ಮೀ. ಉದ್ದದ ಆರ್. ವಿ. ರಸ್ತೆ-ಬೊಮ್ಮಸಂದ್ರ (ಹಳದಿ ಮಾರ್ಗ) ಈ ವರ್ಷದ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳುವ ನಿರೀಕ್ಷೆ ಇದೆ. ಇದೇ ಮಾರ್ಗದಲ್ಲಿ ರಾಗಿಗುಡ್ಡದಿಂದ ಸಿಲ್ಕ್ ಬೋರ್ಡ್ ತನಕ ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ಇದೆ. ಡಬಲ್ ಡೆಕ್ಕರ್ ಕಾರಿಡಾರ್ ಇರುವ ಬೆಂಗಳೂರು ನಗರದ ಮೊದಲ ಮೆಟ್ರೋ ಮಾರ್ಗವಿದು.












Click it and Unblock the Notifications