Bengaluru Metro: ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣಿಕರ ದಟ್ಟಣೆ ನಿವಾರಣೆಗೆ ಬಿಎಂಆರ್‌ಸಿಎಲ್ ಪ್ಲಾನ್
ಬೆಂಗಳೂರು: ಬೆಂಗಳೂರು ನಮ್ಮ ಮೆಟ್ರೋ ಅವಲಂಬಿತ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಂಬಂಧ ಹೊಸ ಪ್ಲಾನ್ ಮಾಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಚೀನಾ ಕಂಪನಿಯಿಂದ ಪೂರೈಕೆ ಆಗಲಿರುವ ಹೊಸ ಮೆಟ್ರೋಗಳನ್ನು ಹಸಿರು ಮಾರ್ಗದಲ್ಲಿ ನಿಯೋಜಿಸಲಿದೆ. ಇದರಿಂದ ನೇರಳೆ ಹಾಗೂ ಹಸಿರು ಮಾರ್ಗದಲ್ಲಿನ ಜನದಟ್ಟಣೆ ಕಡಿಮೆ ಆಗಲಿದೆ. ಜೊತೆಗೆ ಒಂದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಮೆಟ್ರೋ ಸಾರಿಗೆ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಹಾಗೂ ಪ್ರಯಾಣಿಕ ಸ್ನೇಹಿಯಾಗಿ ರೂಪಿಸುವ ಉದ್ದೇಶದಿಂದ ರೈಲುಗಳ ಸಂಖ್ಯೆ ಹೆಚ್ಚಿಸಲಿದೆ. ಈ ಹೊಸ ಯೋಜನೆಯಡಿ ಚೀನಾದ ಸಿಆರ್ಆರ್‌ಸಿ ಕಂಪನಿಯು ಮೆಟ್ರೋಗೆ ಪೂರೈಕೆ ಮಾಡುವ ಆರು ಬೋಗಿಗಳ ಒಂದು ರೈಲಿನಂತೆ ಒಟ್ಟು 21 ಹೊಸ ಮೆಟ್ರೋಗಳನ್ನು ಮಾದಾವರ-ರೆಷ್ಮೆ ಸಂಸ್ಥೆವರೆಗಿನ ಹಸಿರು ಮಾರ್ಗದಲ್ಲಿ ಓಡಿಸಲು ತಿರ್ಮಾನಿಸಿದೆ.

ಹೆಚ್ಚುವರಿ ರೈಲುಗಳ ಸಂಚಾರದಿಂದಾಗಿ ಒಂದು ಮತ್ತು ಎರಡನೇ ಮೆಟ್ರೋ ಮಾರ್ಗದಲ್ಲಿನ ಪ್ರಯಾಣಿಕ ದಟ್ಟಣೆ, ನಿಲ್ದಾಣಗಳಲ್ಲಿ ಕಾಯುವಿಕೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಪೀಕ್ ಹವರ್‌ನಲ್ಲಿ ಸುಗಮ ಸಂಚಾರ ಸಾಧ್ಯವಾಗುತ್ತದೆ. ಅಲ್ಲದೇ ನೇರಳೆ ಮಾರ್ಗದ ಪ್ರಯಾಣಿಕರಿಗೆ ತ್ವರಿತ ಹಸಿರು ಮಾರ್ಗದ ರೈಲು ಸೇವೆ ಲಭ್ಯವಾಗುತ್ತದೆ. ಇನ್ನೂ ದಶಕದಿಂದ ಓಡಾಡುತ್ತಿರುವ ರೈಲುಗಳಲ್ಲಿ ಸಮಸ್ಯೆ ಆದಾಗ ಸಂಚಾರ ಅಸ್ತವ್ಯಸ್ತವಾಗುತ್ತಿತ್ತು. ರೈಲಿಗೆ ಕಾಯುವ ಸಮಯ ಹೆಚ್ಚುತ್ತಿತ್ತು. ಅದು ಸಹ ತಪ್ಪುವ ನಿರೀಕ್ಷೆ ಇದೆ.
ಚೀನಾ ಪ್ರೋಟೋಟೈಪ್ ರೈಲುಗಳ ಪರೀಕ್ಷೆ
ಈಗಾಗಲೇ 2025ರ ಜನವರಿಯಲ್ಲಿ ಚೀನಾ ಕಂಪನಿಯಿಂದ ಪೂರೈಕೆಯಾದ ಮೊದಲ ಪ್ರೋಟೋಟೈಪ್ ಆರು ಬೋಗಿಯ ರೈಲಿನ ಪರೀಕ್ಷೆ ನಡೆಯುತ್ತಿದೆ. ರೈಲಿನ ಕಾರ್ಯಕ್ಷಮತೆ, ಸಿಗ್ನಲಿಂಗ್ ಹಾಗೂ ಅಗತ್ಯ ಎಲ್ಲ ಕಠಿಣ ಪರೀಕ್ಷೆಗಳ ಕಾರ್ಯ ಪ್ರಗತಿಯಲ್ಲಿದೆ. ಜಾಲಹಳ್ಳಿ ಮತ್ತು ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆ ನಿಲ್ದಾಣಗಳ ಮಧ್ಯ ಪರೀಕ್ಷೆ ನಡೆಸಲಾಗುತ್ತಿದೆ. ಈ ಎಲ್ಲ ಪರೀಕ್ಷೆಗಳು ಇನ್ನೊಂದು ತಿಂಗಳಲ್ಲಿ ಮುಗಿಯಲಿವೆ. ನಂತರ ಮೆಟ್ರೋ ರೈಲು ಭದ್ರತಾ ಆಯುಕ್ತರು, ಸುರಕ್ಷತಾ ಮುಖ್ಯ ಆಯುಕ್ತರು ಹಾಗೂ ರೈಲ್ವೆ ಮಂಡಳಿ ಅಧಿಕಾರಿಗಳು ಪರಿಶೀಲಿಸಿ ಅನುಮೋದನೆ ನೀಡುತ್ತದೆ. 2026ರ ಮಾರ್ಚ್ ಹೊತ್ತಿಗೆ ಹೊಸ ರೈಲುಗಳ ಸೇವೆ ಲಭ್ಯವಾಗಲಿದೆ.
ನೇರಳೆ ಮಾರ್ಗದಲ್ಲಿ ಹೆಚ್ಚುವರಿ ರೈಲುಗಳು
ಈ ಪುನರ್ ವ್ಯವಸ್ಥೆಯ ಭಾಗವಾಗಿ ಹಸಿರು ಮಾರ್ಗದಿಂದ ವರ್ಗಾಯಿಸಲ್ಪಡುವ ಸುಮಾರು 17 ಹಂತ 1 ಮೆಟ್ರೋ ರೈಲುಗಳು ಪರ್ಪಲ್ ಲೈನ್‌ಗೆ ಸೇರಲಿವೆ. ಇದರಿಂದ ನಗರದಲ್ಲೇ ಅತ್ಯಂತ ಬ್ಯುಸಿ ಮಾರ್ಗವಾಗಿರುವ ಪರ್ಪಲ್ ಲೈನ್‌ನಲ್ಲಿ ಸೇವಾ ನಂಬಿಕೆ ಹೆಚ್ಚಾಗಲಿದೆ ಮತ್ತು ರೈಲುಗಳ ನಡುವಿನ ಅಂತರ ಕಡಿಮೆಯಾಗುವ ನಿರೀಕ್ಷೆಯಿದೆ.
ಈಗಾಗಲೇ ಬೆಂಗಳೂರು ಮೆಟ್ರೋದಲ್ಲಿ ಒಟ್ಟು 57 ರೈಲುಗಳು ಸಂಚರಿಸುತ್ತಿವೆ. 3-4 ನಿಮಿಷಗಳ ಅವಧಿಯಲ್ಲಿ ರೈಲು ಸೇವೆ ನೀಡಲು ಇನ್ನಷ್ಟು ರೈಲುಗಳ ಅಗತ್ಯವಿದೆ. ದಿನನಿತ್ಯ ಸುಮಾರು 10 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಮೆಟ್ರೋ ಬಳಸುತ್ತಿದ್ದಾರೆ. ವೈಟ್‌ಫೀಲ್ಡ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಭಾಗಗಳಿಗೆ ಸಂಪರ್ಕ ಸುಧಾರಣೆಯಾದ ಬಳಿಕ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಾಗಿದೆ. ಇದೆಲ್ಲದರ ನಿರ್ವಹಣೆಗೆ ರೈಲುಗಳ ಹೆಚ್ಚಿಸಲು, ನಿಯೋಜಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ. ಹೊಸ ವರ್ಷ ಪ್ರಯಾಣಿಕರ ಸಂಚಾರ ಸರಾಗವಾಗಲಿದೆ ಎಂಬ ವಿಶ್ವಾಸ ಮೂಡಿದೆ.












Click it and Unblock the Notifications