Namma Metro: ಕಾಮಗಾರಿ ವೇಳೆ ನಡೆದ ದುರಂತಗಳು, ಕಾರ್ಮಿಕರು-ನಾಗರಿಕರ ಸಾವಿನ ವಿವರ ಹೀಗಿದೆ
ಬೆಂಗಳೂರು, ಜನವರಿ 11: ಬೆಂಗಳೂರು 'ನಮ್ಮ ಮೆಟ್ರೋ' ಕಾಮಗಾರಿ 2007ರಿಂದ ಆರಂಭವಾಗಿದೆ. ಅಲ್ಲಿಂದ ಈ ವರೆಗೆ ಸುಮಾರು ಅವಘಡಗಳು ಸಂಭವಿಸಿವೆ. ಅದರಲ್ಲಿ ಕಾಮಗಾರಿಯಲ್ಲಿ ಕಾರ್ಮಿಕರು, ನಾಗರಿಕರು ಜೀವ ಬಿಟ್ಟಿದ್ದಾರೆ. ಮಂಗಳವಾರವಷ್ಟೇ ಹೆಣ್ಣೂರು ರಸ್ತೆಯಲ್ಲಿ ನಡೆದ ಪಿಲ್ಲರ್ ಕುಸಿತ ದುರಂತದಿಂದ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆ. ಇದರಿಂದ ನಗರದಲ್ಲಿ ನಿತ್ಯ ಓಡಾಡುವವರಲ್ಲಿ ಸುರಕ್ಷಿತೆಯ ಚಿಂತೆ ಕಾಡುತ್ತಿದೆ.
ಘಟನೆ ಕುರಿತು ಮಂಗಳವಾರ ತಡವಾಗಿ ಪ್ರತಿಕ್ರಿಯಿಸಿದ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷ್ ಲಿಮಿಟೆಡ್ (BMRCL) ಕೆ.ಆರ್.ಪುರಂ ಮತ್ತು ಹೆಬ್ಬಾಳ ಮುಖ್ಯ ರಸ್ತೆಯಲ್ಲಿ ಮೆಟ್ರೋ ಹಂತ 2B ಕಾಮಗಾರಿ ವೇಳೆ 218ನೇ ಪಿಲ್ಲರ್ ಬಳಿ ಗೈ ವೈಯರ್‌ಗಳ ಪೈಕಿ ಒಂದು ಸಡಿಲವಾಗಿದ್ದರಿಂದ ದುರಂತ ನಡೆದಿದೆ ಎಂದು ಹೇಳಿಕೊಂಡಿದೆ.
ಈ ಹೇಳಿಕೆಗೂ ಸಾಕಷ್ಟು ಆಕ್ರೋಶ ಕೇಳಿ ಬಂದಿದೆ. ಘಟನೆಯಲ್ಲಿ ಗದಗ ಮೂಲದ ದಂಪತಿ, ತಾಯಿ ತೇಜಸ್ವಿನಿ ಮತ್ತು ಮಗು ವಿಹಾನ್ ಮೃತಪಟ್ಟಿದೆ. ಅದೃಷ್ಟವಶಾತ್ ತಂದೆ ಹಾಗೂ ಇನ್ನೊಂದು ಮಗು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಿಂದ ಮೆಟ್ರೋ ಪಿಲ್ಲರ್ ಪಕ್ಕ, ಕಾಮಗಾರಿ ಸ್ಥಳಗಳ ಸಮೀಪದ ರಸ್ತೆಗಳಲ್ಲಿ ಹಾದು ಹೋಗುವುದು ಜೀವಕ್ಕೆ ಸುರಕ್ಷಿತವೇ ಎಂಬ ಅನುಮಾನ ಮೂಡಿದೆ. ಭರದಿಂದ ಸಾಗುತ್ತಿರುವ ಸುರಂಗ ಕೊರೆಯುವ ಕೆಲಸ, ಪಿಲ್ಲರ್ ಇನ್ನಿತರ ಕಾರ್ಯಗಳ ಅಡಿ ರಸ್ತೆಗಳಲ್ಲಿ ಓಡಾಡುವವರ ಜೀವಕ್ಕೆ ಖಾತ್ರಿ ನೀಡುವ ಅನಿವಾರ್ಯ BMRCLಗೆ ಎದುರಾಗಿದೆ.

2009 ರಿಂದ ವಿವಿಧೆಡೆ ಮೆಟ್ರೋ ಅವಘಡ
ರಾಜ್ಯ ಸರ್ಕಾರ ಸಹಯೋಗದಲ್ಲಿ ಮೆಟ್ರೋ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಅದರ ಜವಾಬ್ದಾರಿಯನ್ನು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷ್ ಲಿಮಿಟೆಡ್ (BMRCL) ನಿರ್ವಹಿಸುತ್ತಿದೆ. ಮೆಟ್ರೋ ಯೋಜನೆ ಆರಂಭವಾದ ನಂತರ 2009 ರಿಂದ ಈವರೆಗೆ ಹಲವು ಅವಘಡ, ದುರಂತಗಳು ನಡೆದಿವೆ. ಇವುಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ನೆಟ್ಟಿಗರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ಆ ಪೈಕಿ ಹಲವುಗಳ ಮಾಹಿತಿ ಇದೆ.

ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸಲು ಮನವಿ
ಹೆಣ್ಣೂರು ರಸ್ತೆಯಲ್ಲಿನ ಕಬ್ಬಿಣದ ಪಿಲ್ಲರ್ ಕುಸಿತ ಕೇವಲ ಒಂದು ಘಟನೆ ಮಾತ್ರವಲ್ಲ. ಮೂರು ತಿಂಗಳ ಹಿಂದಷ್ಟೇ ಬೆಳ್ಳಂದೂರು ಸಮೀಪ ವೆಲ್ಸ್ ಫಾರ್ಗೋ ಪಾರ್ಕ್‌ನ ಮುಂದೆ ಸುಮಾರು 60 ಡಿಗ್ರಿಯಷ್ಟು ಕಬ್ಬಿಣದ ಬಾರುಗಳು ಬೆಂಡ್ ಆಗಿದ್ದನ್ನು ಸಾರ್ವಜನಿಕರು ಗಮನಿಸಿದ್ದಾರೆ. ಇಂತಹ ಸಮಸ್ಯೆ ಎಲ್ಲೆಲ್ಲಿ ಇದೆ ಎಂಬುದುನ್ನು ಗುರುತಿಸಿ ನಮ್ಮ ಮೆಟ್ರೋ ಅಧಿಕಾರಿಗಳು ಪರಿಹರಿಸಬೇಕು. ಸಂಭವನೀಯ ಅನಾಹುತ ತಪ್ಪಿಸಬೇಕು ಎಂದು ನೆಟ್ಟಿಗರು ಕೋರಿದ್ದಾರೆ.
2018ರ ಏಪ್ರಿಲ್‌ನಲ್ಲಿ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಬಳಿ ಮೆಟ್ರೋ ಸೈಟ್‌ನಲ್ಲಿ ಕಾರುಗಳ ಮೇಲೆ ಹೊಂದಿಸಿಟ್ಟಿದ್ದ ಕಬ್ಬಿಣ ಪಂಜರ ಬಿದ್ದಿತ್ತು. ಅಂತೆಯೇ 2009 ರಲ್ಲಿ ಮೆಟ್ರೋ 1 ಕಾಮಗಾರಿಯ ಸಂದರ್ಭದಲ್ಲಿ ಇಂದಿರಾ ನಗರದಲ್ಲಿ ಉಕ್ಕಿನ ಬಲವರ್ಧಗೆ ಹಾಕಿದ್ದ ಲ್ಯಾಪಿಂಗ್ ಜಾರಿ ಬಿದ್ದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದರು.

ಜನರ ಸುರಕ್ಷತೆ ಬಗ್ಗೆ ಖಾರತಿಪಡಿಸಲು ಒತ್ತಾಯ
ಭಾರತೀಯ ವಿಜ್ಞಾನ ಸಂಸ್ಥೆ (IISc) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕರೊಬ್ಬರು ಪ್ರತಿಕ್ರಿಯಿಸಿ, ಭವಿಷ್ಯ ಕಾಮಗಾರಿಗಳಲ್ಲಿ ಎತ್ತರ ಪಿಲ್ಲರ್‌ಗಳು ಬರುವ ಕಡೆಗಳಲ್ಲಿ ದುರ್ಘಟನೆಗಳು ಆಗದಂತೆ ಆಗಾಗ ಪರಿಶೀಲನೆ ಮಾಡಬೇಕು. ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕು ಎಂದು ತಿಳಿಸಿದ್ದಾರೆ. ಕಾಮಗಾರಿಯಲ್ಲಿ ಹಲವು ಅವ್ಯವಹಾರ ನಡೆದಿದೆ. ಹೀಗಾಗಿ ಗುಣಮಟ್ಟವಲ್ಲದ ಕೆಲಸ ನಡೆದಿದೆ. ಹಲವು ಎಂಜಿನಿಯರ್‌ಗಳು ತಾಂತ್ರಿಕವಾಗಿ ಅರ್ಹತೆ ಹೊಂದಿಲ್ಲ ಎಂದು ಬಿಎಂಆರ್‌ಸಿಎಲ್ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಆಪಾದಿಸಿದರು.

ಕಾರ್ಮಿಕರು ಸೇರಿ 15ಕ್ಕೂ ಹೆಚ್ಚು ಮಂದಿ ಸಾವು
2009ರ ಜನವರಿ ಯಲ್ಲಿ ಕಾಮಗಾರಿ ವೇಳೆ ಅಡಿಗೆ ಸಿಲುಕಿದ 20 ವರ್ಷದ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಅದೇ ವರ್ಷ ಮೇ ಹಾಗೂ ಜುಲೈ ತಿಂಗಳಲ್ಲಿ ಮೆಟ್ರೋ ಕಾಮಗಾರಿಗೆ ಪೂರ್ವಭಾವಿಯಾಗಿ ನಡೆದ ಕಟ್ಟಡ ತೆರವು ಕಾರ್ಯಾಚರಣೆಯಲ್ಲಿ ಗೋಡೆ ಕುಸಿತದಿಂದ ಇಬ್ಬರು ಕಾರ್ಮಿಕರ ಸಾವಾಗಿತ್ತು.
2010ರ ಆಗಸ್ಟ್ನಲ್ಲಿ ಮೆಟ್ರೋ ಕಾಮಗಾರಿ ವೇಳೆ ಸಂಭವಿಸಿದ ಅಪಘಾತದಲ್ಲಿ ಮತ್ತೊಬ್ಬ ಕಾರ್ಮಿಕರು, 2011ರ ಮಾರ್ಚ್ ನಲ್ಲಿ ಗುತ್ತಿಗೆದಾರರ ಮಾಲೀಕತ್ವದ ಲಾರಿಗೆ ಸಿಲುಕಿ ಕಾರ್ಮಿಕ ಅಸುನೀಗಿದ್ದರು. ಮರು ವರ್ಷ 2012ರಂದು ಮೆಟ್ರೋ ನಿರ್ಮಾಣದ ವೇಳೆ ಕ್ರೇನ್ ಕೆಳಗೆ ಸಿಲುಕಿಕೊಂಡು 24 ವರ್ಷದ ಕೆಲಸಗಾರ ಮೃತಪಟ್ಟರು. ಡಿಸೆಂಬರ್ 2012: ಮೆಟ್ರೋ ನಿಲ್ದಾಣದ ಶೌಚಾಲಯ ನಿರ್ಮಾಣದ ವೇಳೆ ವಿದ್ಯುತ್ ಶಾಕ್ನಿಂದ 18 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟರು.

ಸ್ಟೀಲ್ ಲೋಡ್ ಸರಿಪಡಿಸುವಾಗ ವ್ಯಕ್ತಿ ಸಾವು
2013ರಲ್ಲಿ ಮೆಟ್ರೋ ನಿಲ್ದಾಣದಲ್ಲಿ ವಿದ್ಯುತ್ ದೀಪ ಅಳವಡಿಸುತ್ತಿದ್ದ ವ್ಯಕ್ತಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದರು. 2015ರಲ್ಲಿ ಸ್ಟೀಲ್ ಲೋಡ್ ಸರಿಪಡಿಸುವಾಗ (ಸ್ಟಡಿ) ಆಯತಪ್ಪಿ ಕಾರ್ಮಿಕ (21 ವರ್ಷ) ಸಾವನ್ನಪ್ಪಿದರು. ಇನ್ನೂ 2019ರ ಜನವರಿ ಮೆಟ್ರೋ ಸ್ಟೇಷನ್ ಗೋಡೆಯ ನಡುವಿನ ಅಂತರದ ಜಾಗದಿಂದ 18 ತಿಂಗಳ ಮಗು ಬಿದ್ದು ಉಸಿರು ಚೆಲ್ಲಿತ್ತು.
2020ರಲ್ಲಿ ಒಟ್ಟು ನಾಲ್ಕು ಮಂದಿ ಕಾರ್ಮಿಕರು ಕೆಲಸದ ವೇಳೆ ಅವಘಡಗಳು ಸಂಭವಿಸಿ ನಿಧರಾದರು.
2021 ಏಪ್ರಿಲ್ ವೇಳೆ ಅಗತ್ಯ ಎಚ್ಚರಿಕೆ ಫಲಕ ಅಳವಡಿಸದ ಕಾರಣಕ್ಕೆ 'ಯುಟಿಲಿಟಿ ಶಾಫ್ಟ್'ಗೆ ಬಿದ್ದು 65 ವರ್ಷದ ವೃದ್ಧರು ತೀರಿಕೊಂಡಿದ್ದರು. ಇದಾದ ಬಳಿಕ 2022ರಲ್ಲಿ ಜನವರಿ 10ರಂದು ಬೆಳಗ್ಗೆ ಹೆಣ್ಣೂರು ರಸ್ತೆಯಲ್ಲಿ ಪಿಲ್ಲರ್ ಕುಸಿದ ತಾಯಿ ಮಗು ಅಸುನೀಗಿದ್ದಾರೆ.












Click it and Unblock the Notifications