50 ರೂ. ವಿಚಾರಕ್ಕೆ ಜಗಳ, ಕೊಲೆ; ಆರೋಪಿ ಬಂಧನ
ಬೆಂಗಳೂರು, ನವೆಂಬರ್ 07 : 50 ರೂ. ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಗಾಂಜಾ ಖರೀದಿಗಾಗಿ ಹಣ ಕೇಳಲಾಗಿತ್ತು.
ದೇವರಜೀವನ ಹಳ್ಳಿ ಪೊಲೀಸರು ಡಿ. ಜಿ. ಹಳ್ಳಿಯ ನಿವಾಸಿ ಸಯ್ಯದ್ ವಾಸೀಂ (19) ಕೊಲೆ ಪ್ರಕರಣದ ಆರೋಪಿ ಶಬೀರ್ (20) ಬಂಧಿಸಿದ್ದಾರೆ. ಬೇಕರಿಯಲ್ಲಿ ವಾಸೀಂ ಕೆಲಸ ಮಾಡುತ್ತಿದ್ದು, ಶಬೀರ್ ಮರದ ಕೆಲಸ ಮಾಡಿಕೊಂಡಿದ್ದ, ಇಬ್ಬರು ಪರಿಚಿತರು.
ಮಂಗಳವಾರ ರಾತ್ರಿ ಗಾಂಜಾ ಖರೀದಿ ಮಾಡಲು 50 ರೂ. ಕೊಡುವಂತೆ ವಾಸೀಂ ಬಳಿ ಶಬೀರ್ ಕೇಳಿದ್ದ. ಈ ವಿಚಾರದಲ್ಲಿ ಇಬ್ಬರ ನಡುವೆ ರಸ್ತೆಯಲ್ಲೇ ಜಗಳವಾಗಿತ್ತು. ಸ್ಥಳೀಯರು ಜಗಳ ಬಿಡಿಸಿದ್ದರು.

ಬುಧವಾರ ಮಧ್ಯಾಹ್ನ 12.30ರ ಸುಮಾರಿಗೆ ಡಿ. ಜಿ. ಹಳ್ಳಿಯ ಮೋದಿ ರಸ್ತೆಯಲ್ಲಿ ವಾಸೀಂ ನಡೆದು ಹೋಗುತ್ತಿದ್ದಾಗ ಶಬೀರ್ ಪುನಃ ಜಗಳ ಆರಂಭಿಸಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಶಬೀರ್ ವಾಸೀಂ ಎದೆಗೆ ಚೂಪಾದ ವಸ್ತುವನ್ನು ಚುಚ್ಚಿದ್ದಾನೆ.
ಕ್ಷಿಪ್ರ ಕಾರ್ಯಾಚರಣೆ ನಡೆಸಿದ ದೇವರಜೀವನಹಳ್ಳಿ ಪೊಲೀಸರು ರಾತ್ರಿ ಶಬೀರ್ ಬಂಧಿಸಿದ್ದಾರೆ. ಆರೋಪಿ ವಿಚಾರಣೆ ನಡೆಸಲಾಗುತ್ತಿದ್ದು, ಗಾಂಜಾ ಪೂರೈಕೆ ಮಾಡುತ್ತಿದ್ದವರು ಯಾರು? ಎಂದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications