Muda scam: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು
ಬೆಂಗಳೂರು ಆಗಸ್ಟ್ 8: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಿಸಲಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಸ್ನೇಹಮಯಿ ಕೃಷ್ಣ ಎಂಬುವವರು ದೂರು ದಾಖಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಯನ್ನು 82ನೇ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ನಡೆಸಲಿದ್ದು ಇವತ್ತು ದಾಖಲೆಗಳ ಪರಿಶೀಲನೆ ನಡೆಯಲಿದೆ.

ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ವಾದ ಮಂಡನೆ ಮಾಡಿದ್ದೇವೆ ಶುಕ್ರವಾರ ಮತ್ತಷ್ಟು ವಿಚಾರಗಳನ್ನು ಕೋರ್ಟ್ ಮುಂದೆ ಪ್ರಸ್ತುತಪಡಿಸಲಿದ್ದೇವೆ ಎಂದು ವಕೀಲ ವಂಸತ್ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಮ್ಮ, ಮಲ್ಲಿಕಾರ್ಜುನ, ನಿಂಗಾ ಮತ್ತು ಇನ್ನಿತರರ ವಿರುದ್ಧ ದೂರು ದಾಖಲಾಗಿದೆ.
ದೂರನ್ನು ನೀಡಿದ ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು, 'ಶಾಸಕರು-ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ'ಯ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ದಾಖಲಿಸಿದ್ದಾರೆ.

ದೂರನ್ನು ಪಡೆದಿರುವ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ದಾಖಲೆಗಳ ಪರಿಶೀಲನೆಗೆ ಒಪ್ಪಿಸಿದ್ದು ಪ್ರಕರಣ ನಾಳೆ ವಿಚಾರಣೆಗೆ ಬರುವ ನಿರೀಕ್ಷೆ ಇದೆ. ಫಿರ್ಯಾದುದಾರರ ಪರವಾಗಿ ಹೈಕೋರ್ಟ್‌ನ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗರ್ ಗುರುವಾರ ಮಧ್ಯಾಹ್ನ ಒಂದು ಗಮಟೆಗೆ ದೂರು ದಾಖಲಿಸಿದ್ದಾರೆ. ಹೈಕೋರ್ಟ್ ವಕೀಲ ವಸಂತ ಕುಮಾರ್ ವಕಾಲತ್ತು ವಹಿಸಿದ್ದಾರೆ.
ಸಿಎಂಗೆ ಮತ್ತೊಂದು ಕಂಠಕ ಶುರು
ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಆರೋಪ ಎದುರಿಸುತ್ತಿರುವ ಸಿಎಂ ಸಿದ್ದರಾಮಯ್ಯಗೆ ಇದೀಗ ಮತ್ತೊಂದು ಕಂಠಕ ಶುರುವಾಗಿದೆ. ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಳ್ಳು ಎಂಬಂತೆ ಹಳೆ ಪ್ರಕರಣಗಳು ಮತ್ತೆ ಚಿರುರೊಡೆಯಲು ಆರಂಭಿಸಿವೆ.
ಹಳೆಯ ಕೇಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ರಾಹುಲ್ ಗಾಂಧಿ ವಿರುದ್ಧ ಇಡಿ ವಿಚಾರಣೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಾನೂನು ಬಾಹಿರ ಪ್ರತಿಭಟನೆ ನಡೆಸಲಾಗಿದೆ ಎಂದು ಆರೋಪಿಸಿ ಬೆಂಗಳೂರಿನ ವಿಲ್ಸನ್ ಗಾರ್ಡನ್ ಪೊಲೀಸರು ಕೇಸ್ ಹಾಕಿದ್ದರು.
ಈ ಕೇಸ್ ಸಂಬಂಧ ಇದೀಗ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಕೋರ್ಟ್ ಸಮನ್ಸ್ ನೀಡಿದೆ. ಬೆಂಗಳೂರಿನ 42ನೇ ಎಸಿಎಂಎಂ ಕೋರ್ಟ್ ಇಬ್ಬರಿಗೂ ಸಮನ್ಸ್ ನೀಡಿದ್ದು, ಇದೇ ಆಗಸ್ಟ್ 29ರಂದು ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರಿಗೆ ಮತ್ತೊಂದು ತಲೆ ಬಿಸಿ ಶುರುವಾಗಿದೆ.
ಈ ಪ್ರತಿಭಟನೆ ಕಾನೂನು ಬಾಹಿರ ಎಂದು 2022ರಲ್ಲಿ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರು ಸದ್ಯ ಇಬ್ಬರೂ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿದೆ.
ಸಿಎಂ ವಿರುದ್ಧ ಮುಡಾ ಹಗರಣ ಸೃಷ್ಟಿ
ರಾಜ್ಯಪಾಲರು ಸಿಎಂ ಸಿದ್ದರಾಂಯ್ಯ ವಿರುದ್ಧ ಪ್ರಾಸಿಕ್ಯೂಷನ್ ನೀಡಿದರೆ ಕಾನೂನು ಹೋರಾಟ ನಡೆಸುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಹಗರಣವನ್ನು ಸೃಷ್ಟಿಸಲಾಗಿದೆ. ರಾಜಭವನ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರಕಾರ ರಾಜ್ಯಪಾಲರ ಮೇಲೆ ಒತ್ತಡ ಹೇರುತ್ತಿದೆ. ಪ್ರಾಸಿಕ್ಯೂಷನ್ ನೀಡಲು ಈ ಪ್ರಕರಣದಲ್ಲಿ ಮೆಟಿರಿಯಲ್ ಇಲ್ಲ. ಒಂದು ವೇಳೆ ನೀಡಿದರೆ ರಾಜಕಾರಣ ಎಂಬುದು ಸಾಬೀತಾಗಲಿದೆ. ಇದಕ್ಕಾಗಿ ನಾವು ಕಾನೂನು ಹೋರಾಟ ನಡೆಸಲು ಸಿದ್ಧರಾಗಿದ್ದೇವೆ ಎಂದು ಸ್ಪಷ್ಟಪಡಿಸಿದರು.












Click it and Unblock the Notifications