4 ದಿನ ಬೆಂಗಳೂರಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ದಾಖಲು!
ಬೆಂಗಳೂರು, ಆಗಸ್ಟ್ 05: ಆಗಸ್ಟ್ ತಿಂಗಳ ಆರಂಭದ ದಿನದಿಂದಲೂ ಬೆಂಗಳೂರಲ್ಲಿ ಮಳೆ ಆಬ್ಬರಿಸಿದೆ. ಆಗಸ್ಟ್ 1 ರಿಂದ 4ರ ತನಕ ನಗರದಲ್ಲಿ ವಾಡಿಕೆಗಿಂತ ಅಧಿಕವಾಗಿ ಮಳೆ ದಾಖಲಾಗಿದೆ. ಈ ತಿಂಗಳು ಪೂರ್ತಿ ಇದೇ ರೀತಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಂಕಿ ಅಂಶ ಪ್ರಕಾರ, ಕಳೆದ ನಾಲ್ಕು ದಿನದಲ್ಲಿ ಗುರುವಾರ ರಾತ್ರಿ 8.30ರವರೆಗೆ ಬೆಂಗಳೂರಿನ ಎಚ್‌ಎಎಲ್ ಒಂದರಲ್ಲೇ ವಾಡಿಕೆ ಮಳೆ 114.9 ಮಿ. ಮೀ. ಆಗಿದ್ದರೆ 125.6 ಮಿ. ಮೀ. ಮಳೆ ದಾಖಲಾಗಿದೆ.
ಕಳೆದ ರಾತ್ರಿ 8.30ರ ದಾಖಲಾತಿ ನೋಡಿದರೆ ಬೆಂಗಳೂರು ನಗರ ಹವಾಮಾನ ಕೇಂದ್ರವು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಡಿಕೆ 141.6 ಮಿ. ಮೀ.ಯಲ್ಲಿ 131.8 ಮಿ. ಮೀ. ಮಳೆ ಬಿದ್ದಿದೆ.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ವ್ಯಾಪ್ತಿಯಲ್ಲಿ ಗುರುರವಾರ ಸಂಜೆವರೆಗೆ ಒಟ್ಟು ನಾಲ್ಕು ದಿನದಲ್ಲಿ 144.3 ಮಿ. ಮೀ. ಮಳೆ ಆಗಿದೆ. ಕೆಐಎ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹವಾಮಾನ ಕೇಂದ್ರ ಸ್ಥಾಪಿಸಿದ್ದರಿಂದ ಈ ಭಾಗದ ಮಾಸಿಕ ಸಾಮಾನ್ಯ ಮಳೆ ಮಾಹಿತಿ ಲಭ್ಯವಾಗಿಲ್ಲ.
ಇನ್ನು ಮುಂಗಾರು ಆರಂಭದ ಜೂನ್ 1 ರಿಂದ ಈವರೆಗೆ ಬೆಂಗಳೂರು ನಗರದಲ್ಲಿ 525 ಮಿ. ಮೀ. ಮಳೆ ದಾಖಲಾಗಿದೆ. ಇದೇ ಅವಧಿಯಲ್ಲಿ ವಾಡಿಕೆ ಮಳೆ 309 ಮಿ. ಮೀ. ಮಳೆ ನಿರೀಕ್ಷಿಸಲಾಗಿತ್ತು.
ನಿರೀಕ್ಷೆಗಿಂತಲೂ ಅತ್ಯಧಿಕ ಮಳೆ ದಾಖಲಾಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಸಾಮಾನ್ಯ ಮಳೆ 286 ಮಿ. ಮೀ.ಗಿಂತಲೂ ಅಧಿಕ ಅಂದರೆ 486 ಮಿ. ಮೀ. ಮಳೆ ಬಿದ್ದಿದ್ದು, ಕೆಐಎನಲ್ಲಿ ವಾಡಿಕೆಗಿಂತ 466 ಮಿ.ಮೀ. ಮಳೆಯಾಗಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆ ಮಳೆಗಾಲದಲ್ಲಿ ಬೆಂಗಳೂರು ನಗರಕ್ಕೆ ಒಟ್ಟು ಸರಾಸರಿ ಮಳೆ 986.8 ಮಿ. ಮೀ. ನಿಂದ 1,077.8 ಮಿ. ಮೀ. ಹೆಚ್ಚಾಗಿದೆ. ನಿರಂತರವಾಗಿ ಉಂಟಾಗುತ್ತಿರುವ ಹವಾಮಾನ ಏರಿಳಿತಗಳಿಂದ ಮಳೆ ಹೆಚ್ಚು ಸುರಿಯುವ ಸಾಧ್ಯತೆ ಇದೆ. ಈಗಾಗಲೇ ಕಳೆದ ನಾಲ್ಕು ದಿನದಿಂದ ಸುರಿದ ಮಳೆಗೆ ಸರ್ಜಾರಪುರ ರಸ್ತೆಯಲ್ಲಿನ ವಸತಿ ಸಮುಚ್ಚಯದ ಜನ ತತ್ತರಿಸಿದ್ದಾರೆ.
ಗಂಟೆಗೆ 100 ಮಿ. ಮೀ. ಮಳೆ; ಬೆಂಗಳೂರಿನಲ್ಲಿ ಈ ಹವಾಮಾನ ವೈಪರೀತ್ಯಕ್ಕೆ ಕಾರಣವೇನು? ಎಂಬುದರ ಕುರಿತು ರಾಜ್ಯ ಸರ್ಕಾರಕ್ಕೆ ಎರಡು ವರ್ಷದ ಹಿಂದೆ ಈ ಹವಾಮಾನ ಬದಲಾವಣೆ ಕುರಿತು ವಿಸ್ತೃತ ವರದಿ ಸಲ್ಲಿಸಿದ್ದ ತಂಡದಲ್ಲಿ ಜಲವಿಜ್ಞಾನ ತಜ್ಞರು ಇದ್ದರು. ಅವರು ಮಳೆ ತೀವ್ರವಾಗಿ ಸುರಿಯುವುದಲ್ಲದೇ ಹಿಂದಿನ ವರ್ಷಗಳಿಗಿಂತ ಭಾರೀ ಮಳೆ ನಗರಕ್ಕೆ ಬರಲಿದೆ ಎಂದು ಮುನ್ಸೂಚನೆ ನೀಡಿದ್ದರು.
ತಜ್ಞರ ಪ್ರಕಾರ ರಾಜ್ಯ ರಾಜಧಾನಿಯಲ್ಲಿ 24 ಗಂಟೆಗಳಲ್ಲಿ 100 ಮಿ. ಮೀ. ಮಳೆ ಬಿದ್ದರೆ ಅದು ಅಷ್ಟಾಗಿ ಹೆಚ್ಚು ಪರಿಣಾಮ ಬೀರುವುದಿಲ್ಲ. ಅದೇ ಒಂದು ಗಂಟೆಗೆ 100 ಮಿ. ಮೀ. ಮಳೆ ಬಿದ್ದರೆ ಅದು ಸಾಕಷ್ಟು ಆವಾಂತರಗಳನ್ನು ಸೃಷ್ಟಿಸಬಹುದು. ಅಲ್ಲದೇ ನಗರೀಕರಣ, ಚರಂಡಿ ಸಮಸ್ಯೆಗಳು, ರಾಜಕಾಲುವೆಯ ಹೂಳು ಹಾಗೂ ಕೆರೆಗಳ ಅತಿಕ್ರಮಣದಿಂದಲೂ ಪ್ರವಾಹ ಉಂಟಾಗುತ್ತಿದೆ.
ಬಿದ್ದ ಮಳೆ ನೀರಿನ ಹರಿವು ಹೆಚ್ಚಾಗಿದೆ; ಇನ್ನು ಬೆಂಗಳೂರಿನಲ್ಲಿ ಆಗಾಗ ಇಲ್ಲವೇ ಕೆಲವು ಕಾಲ ಮಳೆ ಆದರೆ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಅದಕ್ಕೆ ಕಾರಣ ನೋಡಿದರೆ, ಬಿದ್ದ ಮಳೆ ನೀರು ಹರಿಯುವಿಕೆ ಪ್ರಮಾಣ ಹೆಚ್ಚಾಗಿದೆ ಎನ್ನುತ್ತಿದ್ದಾರೆ ತಜ್ಞರು.
ಭೂಮಿ ಮೇಲೆ ಬೀಳುವ ನೀರಿನ ಪ್ರಮಾಣವು ಹಾಗೂ ಬಿದ್ದು ಹರಿದು ಹೋಗುವ ನೀರಿನ ಪ್ರಮಾಣವು ಬಹುತೇಕ ಸಮಾನವಾಗಿದೆ ಕಾರಣ. ಬಿದ್ದ ನೀರು ನೆಲದಲ್ಲಿ ಇಂಗುತ್ತಿಲ್ಲ. ಕೆಲವು ವರ್ಷಗಳ ಹಿಂದೆ ನೀರಿನ ಹರಿವು ಪ್ರಮಾಣ ಶೇ. 40ರಷ್ಟಿತ್ತು. ಈಗ ಅದರ ಪ್ರಮಾಣ ಶೇ. 90ರಷ್ಟಾಗಿದೆ.
ಚರಂಡಿಗಳ ಸೂಕ್ತ ನಿರ್ವಹಣೆ ಇಲ್ಲ. ಕೆಲವೆಡೆ ಅತಿಕ್ರಮಣ ಮಾಡಲಾಗಿದೆ. ಹೂಳು ಸಹ ತುಂಬಿದ್ದು, ನೀರು ಸರಾಗವಾಗಿ ಹರಿದು ಹೋಗಲು ಆಗದೇ ಇರುವುದರಿಂದ ಆವಾಂತರಕ್ಕೆ ಕಾರಣವಾಗುತ್ತಿದೆ.











Click it and Unblock the Notifications