ಬೆಂಗಳೂರು ಮೂಲಸೌಕರ್ಯಗಳ ಬಗ್ಗೆ ಮೋಹನ್‌ದಾಸ್ ಪೈ ಟೀಕೆ; ಹೈದರಾಬಾದ್‌ಗೆ ಬನ್ನಿ ಎಂದ ಟಿಡಿಪಿ ನಾಯಕ
ಭಾರಿ ಮಳೆಯಿಂದಾಗಿ ಬೆಂಗಳೂರು ಮತ್ತೆ ಸುದ್ದಿಯಲ್ಲಿದೆ. ಹಿಂಗಾರು ಮಳೆ ಅಬ್ಬರಕ್ಕೆ ನಗರದಲ್ಲಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದೆ. ನೀರು ತುಂಬಿದ ರಸ್ತೆಗಳಿಂದ ನಗರದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿತ್ತು, ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸಾರ್ವಜನಿಕರು ಪರದಾಡುವಂತಾಗಿದೆ. ಮಾಜಿ ಇನ್ಫೋಸಿಸ್ ಸಿಎಫ್‌ಒ ಟಿ.ವಿ ಮೋಹನ್ ದಾಸ್ ಪೈ ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಟೀಕಿಸಿದ್ದು, ಸರ್ಕಾರ, ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ ಎಂದು ಕಿಡಿಕಾರಿದ್ದರು, ಇದನ್ನೇ ಅವಕಾಶವಾಗಿಸಿಕೊಂಡ ಆಂಧ್ರ ಪ್ರದೇಶ ಐಟಿ ಸಚಿವ, ಹೈದರಾಬಾದ್‌ಗೆ ಬನ್ನಿ ಎಂದು ಐಟಿ ಕಂಪನಿಗಳಿಗೆ ಆಫರ್ ಕೊಟ್ಟಿದ್ದಾರೆ.
ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮೋಹನ್ ದಾಸ್ ಪೈ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ವಿಶೇಷವಾಗಿ ರಸ್ತೆಗಳು ಮತ್ತು ಹೊರವರ್ತುಲ ರಸ್ತೆ (ORR) ಗಳ ಅವ್ಯವಸ್ಥೆಯನ್ನು ಸರಿಪಡಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಐಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸಂಪುಟದ ವಿರುದ್ಧ ಟೀಕೆ ವ್ಯಕ್ತಪಡಿಸಿದರು.

"ರಸ್ತೆಗಳು, ಚರಂಡಿಗಳು, ಹೊರ ವರ್ತುಲ ರಸ್ತೆಯಲ್ಲಿ ಟ್ರಾಫಿಕ್ ಕುರಿತಂತೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಪ್ರಿಯಾಂಕ್ ಖರ್ಗೆ ಅವರು ಯಾವ ಕ್ರಮ ಕೂಡ ತೆಗೆದುಕೊಳ್ಳದೇ ಇರುವುದು ಜನರ ಕೋಪಕ್ಕೆ ಕಾರಣವಾಗುತ್ತಿದೆ. ಬಹು ರಾಷ್ಟ್ರೀಯ ಕಂಪನಿಗಳು ಬೆಂಗಳೂರು ಬಿಟ್ಟು ಹೊರಗಿನ ಆಯ್ಕೆಯಗಳನ್ನು ನೋಡುತ್ತಿವೆ. ಕಳೆದ 20 ವರ್ಷಗಳಿಂದಲೂ ಸರಿಯಾದ ಮೂಲಸೌಕರ್ಯಗಳಿಲ್ಲದೆ, ಸರ್ಕಾರ ನಿರ್ಲಕ್ಷ್ಯ ತೋರುವ ಮೂಲಕ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋಹನ್ ದಾಸ್ ಪೈ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕ ಮತ್ತು ಮಂಗಳಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಲೋಕೇಶ್, ಆಂಧ್ರಪ್ರದೇಶಕ್ಕೆ ಸ್ಥಳಾಂತರಗೊಳ್ಳಲು ಅಥವಾ ಕಚೇರಿಗಳನ್ನು ವಿಸ್ತರಣೆ ಮಾಡಲು ಮನವಿ ಮಾಡಿದ್ದಾರೆ.
ಮೋಹನ್ ದಾಸ್ ಪೈ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ನಾರಾ ಲೋಕೇಶ್, "ನಮಸ್ಕಾರ ಟಿವಿ ಮೋಹನ್‌ದಾಸ್‌ಪೈ ಸರ್, ಗೌರವಾನ್ವಿತ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಹೊಸ, ವ್ಯಾಪಾರ ಸ್ನೇಹಿ ನೀತಿಗಳನ್ನು ಆಂಧ್ರಪ್ರದೇಶಕ್ಕೆ ಪರಿಚಯಿಸಲಾಗಿದ್ದು, ಎಂಎನ್‌ಸಿಗಳಿಗೆ ರಾಜ್ಯಕ್ಕೆ ಬರುವಂತೆ ಆಹ್ವಾನ ನೀಡುತ್ತಿದ್ದೇನೆ. ನಾವು ಹೊಸ ಉದ್ಯಮಗಳನ್ನು ಸ್ವಾಗತಿಸಲು ಕಾಯುತ್ತಿದ್ದೇವೆ, ರಾಜ್ಯದ ಕಲ್ಯಾಣ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾಲುದಾರರಾಗುವವರಿಗೆ ವಿಶ್ವ ದರ್ಜೆಯ ಮೂಲಸೌಕರ್ಯವನ್ನು ನೀಡಲು ಸಿದ್ಧರಿದ್ದೇವೆ." ಎಂದು ಟ್ವೀಟ್ ಮಾಡಿದ್ದಾರೆ.
ಮೋಹನ್ ದಾಸ್ ಪೈ ಹೇಳಿದ್ದೇನು?
ನಾರಾ ಲೋಕೇಶ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಮೋಹನ್ ದಾಸ್ ಪೈ, "ಮಾಜಿ ಸಿಎಂ ಜಗನ್‌ಮೋಹನ್ ರೆಡ್ಡಿ ಬಳಿಕ ಆಂಧ್ರದ ಮೇಲೆ ನಂಬಿಕೆ ಕಡಿಮೆಯಾಗಿದೆ. ಭರವಸೆ ಮೂಡಲು ಅಮರಾವತಿಯಲ್ಲಿ ಕೆಲಸ ಆರಂಭಿಸಬೇಕಿದೆ. ಹೊರಗಿನ ಕಂಪನಿಗಳು ಸುಲಭವಾಗಿ ಅಲ್ಲಿಗೆ ಸ್ಥಳಾಂತರಗೊಳ್ಳುವುದಿಲ್ಲ. ಮೊದಲು ಸಂಪರ್ಕವನ್ನು ಸುಧಾರಿಸಬೇಕಿದೆ. ಇನ್ನಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿ" ಎಂದು ಸಲಹೆ ಕೊಟ್ಟಿದ್ದಾರೆ.












Click it and Unblock the Notifications