ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಶಾಸಕ ಸತೀಶ್ ರೆಡ್ಡಿ ನಾಮಪತ್ರ ಸಲ್ಲಿಕೆ
ಬೆಂಗಳೂರು: ರಾಜಧಾನಿಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಾಸಕ ಸತೀಶ್ ರೆಡ್ಡಿ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸತತ 3 ಬಾರಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿರುವ ಸತೀಶ್ ರೆಡ್ಡಿ, ಇದೀಗ 4ನೇ ಬಾರಿಗೆ ಬಿಜೆಪಿ ಪಕ್ಷದಿಂದ ಅಖಾಡ ಪ್ರವೇಶ ಮಾಡಿದ್ದಾರೆ. ಬಿಜೆಪಿ ಮೊದಲ ಪಟ್ಟಿಯಲ್ಲೇ ಶಾಸಕ ಸತೀಶ್ ರೆಡ್ಡಿಗೆ ಟಿಕೆಟ್ ಕನ್ಫರ್ಮ್ ಮಾಡಲಾಗಿತ್ತು.
ನಾಮಪತ್ರ ಸಲ್ಲಿಕೆ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಕುಟುಂಬ ಸದಸ್ಯರ ಜೊತೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಶಾಸಕ ಸತೀಶ್ ರೆಡ್ಡಿ, ತಾಯಿಯ ಆಶೀರ್ವಾದ ಪಡೆದರು. ನಂತರ ತಮ್ಮ ಅಭಿಮಾನಿಗಳ ಜೊತೆ ಬೈಕ್ ರ‍್ಯಾಲಿಯಲ್ಲಿ ಪಾಲ್ಗೊಂಡರು. ಮೆರವಣಿಗೆ ಮೂಲಕ ಬೊಮ್ಮನಹಳ್ಳಿ ಬಿಬಿಎಂಪಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಲಾಯಿತು. 2008ರಲ್ಲಿ ಕ್ಷೇತ್ರವಾಗಿ ಬೊಮ್ಮನಹಳ್ಳಿ ಅಸ್ತಿತ್ವಕ್ಕೆ ಬಂದ ನಂತರ ಸತತ 3 ಬಾರಿ ಗೆದ್ದಿರುವ ಶಾಸಕ ಸತೀಶ್ ರೆಡ್ಡಿ, ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿಯಾಗಿ ಅಖಾಡ ಪ್ರವೇಶ ಮಾಡಿದ್ದಾರೆ.

2008ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿ ಸ್ಪರ್ಧಿಸಿದ್ದ ಸತೀಶ್ ರೆಡ್ಡಿ 62,993 ಮತ ಪಡೆದಿದ್ದರು. ಅವರ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕುಪೇಂದ್ರ ರೆಡ್ಡಿ 49,353 ಮತ ಪಡೆದಿದ್ದರು. 2013ರಲ್ಲಿ ಸ್ಪರ್ಧಿಸಿದ್ದ ಸತೀಶ್ ರೆಡ್ಡಿ 86,552 ಮತಗಳನ್ನು ಪಡೆದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ನಾಗಭೂಷಣ್ ರೆಡ್ಡಿ 60,700 ಮತ ಪಡೆದು ದೊಡ್ಡ ಅಂತರದ ಸೋಲು ಕಂಡಿದ್ದರು. ಹೀಗೆ ಸತತ 2ನೇ ಚುನಾವಣೆಯಲ್ಲೂ ಭರ್ಜರಿ ಗೆಲುವು ಸಾಧಿಸಿದ್ದರು ಶಾಸಕ ಸತೀಶ್ ರೆಡ್ಡಿ.
ಗೆಲುವಿನ ಅಂತರದಲ್ಲಿ ಗಣನೀಯ ಏರಿಕೆ
ಮತ್ತೊಂದು ಕಡೆ 2018ರಲ್ಲಿ ಸತೀಶ್ ರೆಡ್ಡಿ 111,863 ಮತಗಳನ್ನು ಪಡೆಯುವ ಮೂಲಕ 3ನೇ ಬಾರಿಗೆ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್‌ನ ಸುಷ್ಮಾ ರಾಜಗೋಪಾಲ ರೆಡ್ಡಿ 64,701 ಮತಗಳನ್ನು ಪಡೆದುಕೊಂಡಿದ್ದರು. ಒಟ್ಟು 47,162 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು ಸತೀಶ್ ರೆಡ್ಡಿ. ಹೀಗೆ ಚುನಾವಣೆಯಿಂದ ಚುನಾವಣೆಗೆ ಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿಯ ಗೆಲುವಿನ ಅಂತರ ಕೂಡ ಹೆಚ್ಚಾಗುತ್ತಿದ್ದು, ಕಳೆದ 3 ವಿಧಾನಸಭಾ ಚುನಾವಣೆಯಲ್ಲಿ ತನ್ನ ಬಲ ಪ್ರದರ್ಶನ ಮಾಡಿದೆ ಭಾರತೀಯ ಜನತಾ ಪಕ್ಷ.

ಸತೀಶ್ ರೆಡ್ಡಿ ಭರ್ಜರಿ ಪ್ರಚಾರ
ಅಂದಹಾಗೆ ಬಿಜೆಪಿ ಮೊದಲ ಪಟ್ಟಿಯಲ್ಲೇ ಶಾಸಕ ಸತೀಶ್ ರೆಡ್ಡಿ ಹೆಸರು ಫೈನಲ್ ಆದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ಕೈಗೊಂಡಿರುವ ಸತೀಶ್ ರೆಡ್ಡಿ, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸಾವಿರಾರು ಅಭಿಮಾನಿಗಳ ಜೊತೆ ಭರ್ಜರಿ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ. ಇನ್ನು ನಾಮಪತ್ರ ಸಲ್ಲಿಕೆ ವೇಳೆ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ದರು. ಕ್ಷೇತ್ರದಲ್ಲಿ ನಿರೀಕ್ಷೆ ಮಟ್ಟ ಹೆಚ್ಚಾಗಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
ಸಿನಿಮಾ ತಾರೆಯರ ಎಂಟ್ರಿ?
ಈಗಾಗಲೇ ನಟ ದರ್ಶನ್ ಕೆಲವೇ ತಿಂಗಳ ಅಂತರದಲ್ಲಿ ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟು ಶಾಸಕ ಸತೀಶ್ ರೆಡ್ಡಿ ಪರ ಪರೋಕ್ಷವಾಗಿ ಮತಯಾಚನೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಘೋಷಣೆಗೂ ಮೊದಲೇ ಸತೀಶ್ ರೆಡ್ಡಿ ಪ್ರಚಾರಕ್ಕೆ ಚಾಲನೆ ನೀಡಿದ್ದೂ ಆಗಿತ್ತು. ಇದೀಗ ನಾಮಪತ್ರ ಸಲ್ಲಿಕೆ ಮಾಡಲಾಗಿದ್ದು, ಮಂದೆ ಕನ್ನಡ ಸಿನಿಮಾ ರಂಗದ ಘಟಾನುಘಟಿ ನಟ-ನಟಿಯರು ಬಿಜೆಪಿ ಪರ ಪ್ರಚಾರಕ್ಕೆ ಬರುವ ಸಾಧ್ಯತೆ ಇದೆ. ಇದರೊಂದಿಗೆ ಬೊಮ್ಮನಹಳ್ಳಿ ಕ್ಷೇತ್ರ ಮತ್ತಷ್ಟು ಕಲರ್‌ಫುಲ್ ಆಗೋದು ಪಕ್ಕಾ.












Click it and Unblock the Notifications