ನಂಜಾವಧೂತ ಸ್ವಾಮೀಜಿ ಜತೆ ತಡರಾತ್ರಿ ಎಚ್.ಡಿ. ರೇವಣ್ಣ ಮಾತುಕತೆ
Recommended Video

ಬೆಂಗಳೂರು, ಜೂನ್ 8: ನೂತನ ಸಚಿವ ಎಚ್.ಡಿ. ರೇವಣ್ಣ ಅವರು ಪಟ್ಟನಾಯಕನಹಳ್ಳಿ ಶ್ರೀ ಸ್ಫಟಿಕಪುರಿ ಮಹಾಸಂಸ್ಥಾನದ ಶಾಖಾಮಠಕ್ಕೆ ಗುರುವಾರ ತಡರಾತ್ರಿ ಭೇಟಿ ನೀಡಿದರು.
ಬೆಂಗಳೂರಿನ ಉಲ್ಲಾಳದಲ್ಲಿರುವ ಶಾಖಾಮಠಕ್ಕೆ ಬೆಂಬಲಿಗರ ಜತೆ ತೆರಳಿದ ರೇವಣ್ಣ, ಶ್ರೀ ನಂಜಾವಧೂತ ಸ್ವಾಮೀಜಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಸಮಯ ಗೋಪ್ಯ ಮಾತುಕತೆ ನಡೆಸಿದರು.
ಪ್ರಸ್ತುತದ ರಾಜಕೀಯ ವಿದ್ಯಮಾನಗಳ ಕುರಿತು ಸ್ವಾಮೀಜಿ ಮತ್ತು ಎಚ್.ಡಿ. ರೇವಣ್ಣ ಅವರು ಸಮಾಲೋಚನೆ ನಡೆಸಿದರು. ಸ್ವಾಮೀಜಿ ಅವರಿಂದ ಸಲಹೆ ಸೂಚನೆಗಳನ್ನು ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಕಾರಣ ಸರ್ಕಾರವನ್ನು ಕೊನೆವರೆಗೂ ಉಳಿಸಿಕೊಳ್ಳಲು ಪ್ರತಿ ಹಂತದಲ್ಲೂ ಎಚ್ಚರಿಕೆಯ ನಡೆ ಅನುಸರಿಸಲು ಸ್ವಾಮೀಜಿ ಸಲಹೆ ನೀಡಿದರು ಎನ್ನಲಾಗಿದೆ.
ಕೊಡುವ ಮತ್ತು ತೆಗೆದುಕೊಳ್ಳುವ ಮನೋಧರ್ಮವನ್ನು ಪಾಲಿಸಿದರೆ ಮಾತ್ರ ಸಮ್ಮಿಶ್ರ ಸರ್ಕಾರ ಗಟ್ಟಿಯಾಗಿರುತ್ತದೆ. ಆರಂಭದಲ್ಲಿ ಕೆಲವು ಸಮಸ್ಯೆಗಳು ಎದುರಾಗುವುದು ಸಹಜ. ಈ ನಿಟ್ಟಿನಲ್ಲಿ ಉಭಯ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸಾಗುವುದು ಅನಿವಾರ್ಯ ಎಂದು ಸ್ವಾಮೀಜಿ ಹೇಳಿದರು.

ಪ್ರತಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಸಚಿವ ಸಂಪುಟ ರಚನೆ ವಿಚಾರದಲ್ಲಿ, ಖಾತೆ ಹಂಚಿಕೆ ಸಮಯದಲ್ಲಿ ಜನಪ್ರತಿನಿಧಿಗಳ ನಡುವೆ ಅಸಮಾಧಾನ, ಭಿನ್ನಮತ ಹೊಸತಲ್ಲ.
ಈ ಎಲ್ಲ ಗೊಂದಲಗಳನ್ನೂ ನಿಭಾಯಿಸಿಕೊಂಡು ಹೋಗಬೇಕು. ಅಭಿವೃದ್ಧಿಪರ, ರೈತಪರ ಆಡಳಿತ ನಡೆಸುವಂತೆ ಸ್ವಾಮೀಜಿ ಕಿವಿಮಾತು ಹೇಳಿದರು ಎಂದು ಮೂಲಗಳು ಹೇಳಿವೆ.












Click it and Unblock the Notifications