ಕೆಂಗೇರಿಯಲ್ಲಿರುವ ಅನಧಿಕೃತ 'ಪ್ಲಾಸ್ಟರ್ ಆಫ್ ಪ್ಯಾರಿಸ್' ವಿಗ್ರಹ ತಯಾರಿಕಾ ಘಟಕ ಮುಚ್ಚಲು ಆದೇಶ
ಕೆಂಗೇರಿಯಲ್ಲಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ವಿಗ್ರಹ ತಯಾರಿಕಾ ಘಟಕವನ್ನು ಮುಚ್ಚುವಂತೆ ಕರ್ನಾಟಕ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆಎ ಅವರಿಗೆ ಸೂಚಿಸಿದ್ದಾರೆ.
ಕೆಂಗೇರಿಯಲ್ಲಿ ಅಕ್ರಮ ಪಿಒಪಿ ತಯಾರಿಕಾ ಘಟಕ ತಲೆ ಎತ್ತಿದೆ. ಈ ಘಟಕವು ಕಂದಾಯ ಭೂಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನಗರ ಯೋಜನಾ ಅಧಿಕಾರಿಗಳಿಂದ ಯಾವುದೇ ಅನುಮತಿ ಪಡೆದಿಲ್ಲ. ಶ್ರೀನಿವಾಸ್ ಎನ್ನುವವರು ಘಟಕವನ್ನು ನಡೆಸುತ್ತಿದ್ದಾರೆ ಮತ್ತು ರಾಸಾಯನಿಕ ಬಣ್ಣಗಳಿಂದ ಲೇಪಿತ ಪಿಒಪಿ ವಿಗ್ರಹಗಳನ್ನು ಮಾರಾಟ ಮಾಡುವ ಮೂಲಕ ಜಲಮೂಲಗಳನ್ನು ಮಾಲಿನ್ಯಗೊಳಿಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಅಧಿಕಾರಿಗಳು ಆಗಸ್ಟ್ 4 ರಂದು ಘಟಕಕ್ಕೆ ಭೇಟಿ ನೀಡಿದ್ದರು. ಈ ಘಟಕವು ಯಾವುದೇ ಅಧಿಕಾರಿಗಳಿಂದ ಅನುಮತಿ ಪತ್ರವನ್ನು ನೀಡಲು ವಿಫಲವಾಗಿದೆ. ಈ ಘಟಕದ ವಿರುದ್ಧ ಕಾನೂನು ಕ್ರಮ ಜರುಗಿಸಲು ಹಾಗೂ ಸೀಲ್ ಮಾಡಿ ಶಾಶ್ವತವಾಗಿ ಮುಚ್ಚಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕರ್ನಾಟಕದಲ್ಲಿ ಪಿಒಪಿ ವಿಗ್ರಹಗಳ ಮಾರಾಟ ಮತ್ತು ತಯಾರಿಕೆಯ ಮೇಲೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ.
ಅಧಿಕಾರಿಗಳಿಗೆ ಸಚಿವರ ಸೂಚನೆ
ಸಚಿವ ಈಶ್ವರ್ ಖಂಡ್ರೆ ಅವರು ಪಿಒಪಿ ವಿಗ್ರಹಗಳ ಮಾರಾಟ ಮತ್ತು ತಯಾರಿಕೆಯ ವಿರುದ್ಧ ನಿಗಾ ವಹಿಸುವಂತೆ ಕೆಎಸ್‌ಪಿಸಿಬಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪಿಒಪಿ ವಿಗ್ರಹಗಳು ನೀರಿನಲ್ಲಿ ಸಂಪೂರ್ಣವಾಗಿ ಕರಗುವುದಿಲ್ಲವಾದ್ದರಿಂದ ಅವುಗಳ ಬಳಕೆಯ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಕೇಳಿದ್ದಾರೆ.
ಪಿಒಪಿ ವಿಗ್ರಹಗಳು ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ. ರಾಜ್ಯದ ಕೆಲವು ಭಾಗಗಳಿಂದ ಕಲುಷಿತ ನೀರು ಸೇವನೆಯಿಂದ ಸಾವು ಸಂಭವಿಸಿದ ವರದಿಗಳಿವೆ. ಗಣೇಶ ಚತುರ್ಥಿಗೆ ಒಂದೂವರೆ ತಿಂಗಳು ಬಾಕಿ ಇದ್ದು, ಯಾವುದೇ ಪಿಒಪಿ ಮೂರ್ತಿಗಳ ತಯಾರಿಕೆಗೆ ಅವಕಾಶ ನೀಡಬಾರದು ಅಥವಾ ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸಾಂಪ್ರದಾಯಿಕವಾಗಿ ಗಣೇಶನ ಮೂರ್ತಿಗಳನ್ನು ಮಣ್ಣಿನಿಂದ ಮಾಡಲಾಗುತ್ತಿತ್ತು ಎಂದು ಸಚಿವರು ಹೇಳಿದರು. "ಕಳೆದ ಎರಡು-ಮೂರು ದಶಕಗಳಲ್ಲಿ ಪಿಒಪಿ ವಿಗ್ರಹಗಳು ಮಾರುಕಟ್ಟೆಗೆ ಬಂದಿವೆ. ಪಿಒಪಿ ವಿಗ್ರಹಗಳ ಮೇಲೆ ಬಳಸುವ ಬಣ್ಣಗಳು ಜಲಚರಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ಜಲಮೂಲಗಳನ್ನು ಕಲುಷಿತಗೊಳಿಸುತ್ತವೆ," ಎಂದು ಅವರು ಹೇಳಿದ್ದಾರೆ.












Click it and Unblock the Notifications