ಪ್ರಣಾಳಿಕೆ ತಯಾರಿಗಾಗಿ ಬೆಂಗಳೂರಿಗೆ ರಾಹುಲ್ ಗಾಂಧಿ
ಬೆಂಗಳೂರು. ಜ.3: 2014ರ ಲೋಕಸಭೆ ಚುನಾವಣೆ ಪ್ರಣಾಳಿಕೆ ಸಿದ್ಧತೆ ಕುರಿತು ಐಟಿ ಉದ್ಯಮಿಗಳು, ಸಾಹಿತಿಗಳು, ಲೇಖಕರು ಮುಂತಾದವರ ಅಭಿಪ್ರಾಯ ಸಂಗ್ರಹಿಸಲು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಜ.11ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂವಾದ ರಾಜಕೀಯ ವಿಚಾರಗಳಿಂದ ಸಂಪೂರ್ಣ ಹೊರತಾಗಿರಲಿದೆ.
ಜ.11ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಹುಲ್ ಗಾಂಧಿ ಚುನಾವಣಾ ಪ್ರಣಾಳಿಕೆ ಕುರಿತು ಸಂವಾದ ನಡೆಸಲಿದ್ದಾರೆ. ಮೊದಲು ಐಟಿ ಉದ್ಯೋಗಿಗಳೊಂದಿಗೆ ರಾಹುಲ್ ಸಂವಾದ ನಡೆಸಲಿದ್ದಾರೆ ಎಂದು ತಿಳಿದು ಬಂದಿತ್ತು. ಆದರೆ, ಆ ಕಾರ್ಯಕ್ರಮದಲ್ಲಿ ಬದಲಾವಣೆ ಮಾಡಲಾಗಿದೆ. ಕೇವಲ ಪ್ರಣಾಳಿಕೆ ರಚನೆ ಕುರಿತು ಮಾತ್ರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. [ಜ.11ರಂದು ಬೆಂಗಳೂರಿಗೆ ರಾಹುಲ್]

ಚುನಾವಣಾ ಪ್ರಣಾಳಿಕೆ ತಯಾರಿ ಕುರಿತು ನಡೆಯಲಿರುವ ಸಭೆಯಲ್ಲಿ ಸಾಹಿತಿಗಳು, ಲೇಖಕರು, ಐಟಿ ಬಿಟಿ ವಲಯದ ಯುವಕರು, ಐಐಎಂಬಿ, ಐಐಎಸ್‌ಸಿ ಸೇರಿದಂತೆ ಪ್ರತಿಷ್ಠಿತ ವಿದ್ಯಾಸಂಸ್ಥೆಗಳ ಉಪನ್ಯಾಸಕರು ಭಾಗವಹಿಸಲಿದ್ದಾರೆ. ಗುರುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಇಂಧನ ಸಚಿವ ಡಿಕೆ ಶಿವಕುಮಾರ್ ಅರಮನೆ ಮೈದಾನದಲ್ಲಿ ಸಂವಾದ ಕಾರ್ಯಕ್ರಮಕ್ಕೆ ಸ್ಥಳ ಪರಿಶೀಲನೆ ನಡೆಸಿದರು.
2014ರ ಲೋಕಸಭೆ ಚುನಾವಣೆಗೆ ಪ್ರಣಾಳಿಕೆ ತಯಾರಿಸಲು ಸಲಹೆ, ಸೂಚನೆಯನ್ನು ಸಂವಾದದ ವೇಳೆ ಪಡೆಯಲಿದ್ದಾರೆ. ಈ ಸಂವಾದವು ರಾಜಕೀಯ ವಿಚಾರಗಳಿಂದ ಸಂಪೂರ್ಣ ಹೊರತಾಗಿರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ, ಹಿರಿಯ ಸಚಿವರನ್ನು ಹೊರತುಪಡಿಸಿದರೆ ಮುಖಂಡರು, ಕಾರ್ಯಕರ್ತರಿಗೆ ಸಂವಾದ ಕಾರ್ಯಕ್ರಮಕ್ಕೆ ಪ್ರವೇಶ ನಿರಾಕರಿಸಲಾಗಿದೆ.
ಅರಮನೆ ಮೈದಾನದಲ್ಲಿ ಸಂವಾದ ಕಾರ್ಯಕ್ರಮದ ಸಿದ್ಧತೆಗಳು ಆರಂಭಗೊಂಡಿದ್ದು, ಸಂವಾದದಲ್ಲಿ ಭಾಗವಹಿಸುವ ನಾನಾ ಕ್ಷೇತ್ರಗಳ ವಿಷಯ ತಜ್ಞರಿಗೆ ಪ್ರದೇಶ ಕರ್ನಾಟಕ ಕಾಂಗ್ರೆಸ್‌ನಿಂದ ಅಧಿಕೃತ ಒಂದೆಡರು ದಿನದಲ್ಲಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications