ಮಾಗಡಿ ರಸ್ತೆ-ಮೈಸೂರು ರಸ್ತೆ ಮೆಟ್ರೋ ಸಂಚಾರಕ್ಕೆ ಒಪ್ಪಿಗೆ ಸಿಕ್ಕಿತು
ಬೆಂಗಳೂರು, ನವೆಂಬರ್ 08 : ಮಾಗಡಿ ರಸ್ತೆ-ಮೈಸೂರು ರಸ್ತೆ (ನಾಯಂಡಹಳ್ಳಿ) ನಡುವೆ ನಮ್ಮ ಮೆಟ್ರೋ ರೈಲು ಸಂಚಾರ ಆರಂಭವಾಗಲು ದಿನಗಣನೆ ಆರಂಭವಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಸಂಚಾರಕ್ಕೆ ಒಪ್ಪಿಗೆ ನೀಡಿದ್ದು, ಉದ್ಘಾಟನಾ ದಿನಾಂಕ ನಿಗದಿ ಮಾಡುವ ಕಾರ್ಯ ಮಾತ್ರ ಬಾಕಿ ಇದೆ.
ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಕರೋಲಾ ಅವರು ಈ ಕುರಿತು ಮಾಹಿತಿ ನೀಡಿದ್ದು, 'ಮಾಗಡಿ ರಸ್ತೆ-ನಾಯಂಡಹಳ್ಳಿ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ನಮ್ಮ ಮೆಟ್ರೋ ರೈಲು ಸಂಚಾರ ಆರಂಭಿಸಲು ರೈಲು ಸುರಕ್ಷತಾ ಆಯುಕ್ತರು ಒಪ್ಪಿಗೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ. [ನಮ್ಮ ಮೆಟ್ರೋ 2ನೇ ಹಂತದ ಕಾಮಗಾರಿ ವಿವರಗಳು]

'ಈ ಮಾರ್ಗವು ರೈಲು ಓಡಾಟಕ್ಕೆ ಸಂಪೂರ್ಣವಾಗಿ ಸಿದ್ಧವಾಗಿದೆ. ದೀಪಾವಳಿಯ ಬಳಿಕ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜೊತೆ ಚರ್ಚಿಸಿ ಉದ್ಘಾಟನೆಗೆ ಸೂಕ್ತ ದಿನಾಂಕ ನಿಗದಿಗೊಳಿಸಲಾಗುತ್ತದೆ' ಎಂದರು.[ನಮ್ಮ ಮೆಟ್ರೋ ಸುರಂಗ ಮಾರ್ಗದಲ್ಲಿ ಸಂಚರಿಸಲು ಸಿದ್ಧರಾಗಿ]
6 ನಿಲ್ದಾಣಗಳಿವೆ : ಮಾಗಡಿ ರಸ್ತೆ-ಮೈಸೂರು ರಸ್ತೆ ನಡುವಿನ 6.4 ಕಿ.ಮೀ ಮಾರ್ಗದಲ್ಲಿ ಮಾಗಡಿ ರಸ್ತೆ, ಹೊಸಹಳ್ಳಿ, ವಿಜಯನಗರ, ಅತ್ತಿಗುಪ್ಪೆ, ದೀಪಾಂಜಲಿ ನಗರ, ಮೈಸೂರು ರಸ್ತೆ ನಿಲ್ದಾಣಗಳಿವೆ.

ಈಗಾಗಲೇ ನಮ್ಮ ಮೆಟ್ರೋ ರೈಲು ಎಂ.ಜಿ.ರಸ್ತೆ ಬೈಯಪ್ಪನಹಳ್ಳಿ ಮತ್ತು ಸಂಪಿಗೆ ರಸ್ತೆ ನಾಗಸಂದ್ರ ನಡುವೆ ಸಂಚಾರ ನಡೆಸುತ್ತಿದೆ. ಈ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾದರೆ ಮೆಟ್ರೋ ಯೋಜನೆಯ ಮೂರನೇ ಮಾರ್ಗ ಉದ್ಘಾಟನೆಯಾದಂತಾಗುತ್ತದೆ.












Click it and Unblock the Notifications