ದಲಿತರಿಗಾಗಿ ವಿಶೇಷ ಭೋಜನ ಕೂಟ ಆಯೋಜಿಸಿದ ಬಿಎಸ್ ವೈ
33 ದಲಿತ ಕುಟುಂಬಗಳಿಗೆ ಬಿಎಸ್ ವೈ ಅವರ ಬೆಂಗಳೂರು ನಿವಾಸದಲ್ಲಿ ಭೋಜನ ಕೂಟ ಏರ್ಪಾಟು. ಆಗಸ್ಟ್ 28ರಂದು ನಡೆಯಲಿರುವ ಭೋಜನ ಕೂಟಕ್ಕೆ ಆಯ್ದ 33 ಕುಟುಂಬಗಳಿಗೆ ಆಹ್ವಾನ.
ಬೆಂಗಳೂರು, ಆಗಸ್ಟ್ 26: ನಗರದ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಆ. 28ರಂದು ದಲಿತರಿಗಾಗಿ ವಿಶೇಷ ಭೋಜನ ಕೂಟವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏರ್ಪಡಿಸಿದ್ದಾರೆ.
ಯಾರಿಗೆ ಆಹ್ವಾನ
ಇತ್ತೀಚೆಗೆ ರಾಜ್ಯಾದ್ಯಂತ ಬಿಜೆಪಿ ಜನಸಂಪರ್ಕ ಅಭಿಯಾನದಡಿ ರಾಜ್ಯ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಯಡಿಯೂರಪ್ಪ, 'ಬಿಜೆಪಿ ನಡಿಗೆ, ದಲಿತರ ಮನೆಗೆ' ಎಂಬ ವಿಶೇಷ ಅಭಿಯಾನದಡಿ ನಾನಾ ಜಿಲ್ಲೆಗಳಲ್ಲಿ ದಲಿತರ ಮನೆಗಳಿಗೆ ಹೋಗಿದ್ದರು. ಆ ವೇಳೆ, ಸುಮಾರು ವಿವಿಧ ಊರುಗಳಿಗೆ ಸೇರಿದ ದಲಿತರ 33 ಕುಟುಂಬದಲ್ಲಿ ಆತಿಥ್ಯ ಸ್ವೀಕರಿಸಿದ್ದರು.

ಇದೀಗ, ಅದೇ ಕುಟುಂಬಗಳನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿರುವ ಅವರು, ತಾವು ಸ್ವೀಕರಿಸಿದ್ದ ಆತಿಥ್ಯಕ್ಕೆ ಕೃತಜ್ಞತೆ ರೂಪದಲ್ಲಿ ಪ್ರತಿ- ಆತಿಥ್ಯ ನೀಡಲಿದ್ದಾರೆ.
ಸವಾಲು ಸ್ವೀಕರಿಸಿದ ಬಿಎಸ್ ವೈ
ರಾಜ್ಯ ಪ್ರವಾಸದ ವೇಳೆ, ದಲಿತರ ಮನೆಗಳಿಗೆ ಯಡಿಯೂರಪ್ಪ ಅವರು ಭೇಟಿ ಮಾಡಿದ್ದಾಗ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇತರ ರಾಜಕೀಯ ನಾಯಕರು, ''ಯಡಿಯೂರಪ್ಪನವರಿಗೆ ನೀವು ದಲಿತರ ಮನೆಗಳಿಗೆ ಹೋದಂತೆ, ದಲಿತರನ್ನೂ ನಿಮ್ಮ ಮನೆಗೆ ಕರೆಯಿಸಿ ಆತಿಥ್ಯ ನೀಡಬಲ್ಲಿರಾ?'' ಎಂದು ಸವಾಲು ಹಾಕಿದ್ದರು. ಆ ಟೀಕೆ, ಸವಾಲುಗಳಿಗೆ ಬಿಎಸ್ ವೈ ಈಗ ಉತ್ತರ ನೀಡಿದ್ದಾರೆ.












Click it and Unblock the Notifications