ಲಾಕ್ ಡೌನ್; ಜನರ ನೆರವಿಗಾಗಿ ಸಹಾಯವಾಣಿ ಆರಂಭಿಸಿದ ನಿಮ್ಹಾನ್ಸ್
ಬೆಂಗಳೂರು, ಏಪ್ರಿಲ್ 17 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. 21 ದಿನಗಳ ಅವಧಿ ಪೂರ್ಣಗೊಂಡಿದೆ. 2ನೇ ಹಂತದಲ್ಲಿ ಮತ್ತೆ 19 ದಿನಗಳಿಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇರುವುದರಿಂದ ಜನರು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮನೆಯಲ್ಲಿಯೇ ಇದ್ದು ಮಾನಸಿಕ ಆರೋಗ್ಯವು ಹದಗೆಡುವ ಸಾಧ್ಯತೆ ಇದೆ.
ಕಚೇರಿ, ಸ್ನೇಹಿತರ ಭೇಟಿ, ಸಿನಿಮಾ, ಶಾಪಿಂಗ್, ಕುಟುಂಬದ ಕಾರ್ಯಕ್ರಮ ಎಂದು ತಿರುಗಾಡಿಕೊಂಡಿದ್ದ ಜನರು ಈಗ ಮನೆಯಲ್ಲಿ ಬಂಧಿಯಾಗಿದ್ದಾರೆ. ಟಿವಿ, ಮೊಬೈಲ್ ಎಂದು ಸಮಯ ಕಳೆಯುತ್ತಿದ್ದಾರೆ.

ಮನೆಯಲ್ಲಿರುವ ಜನರು ವಿವಿಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ವೈದ್ಯರು ಸಲಹೆಗಳನ್ನು ನೀಡುತ್ತಿದ್ದಾರೆ. ವ್ಯಾಯಾಮದಂತಹ ಚಟುವಟಿಕೆ ಮೂಲಕ ದೈಹಿಕ ಆರೋಗ್ಯದತ್ತಲೂ ಗಮನಹರಿಸಿ ಎಂದು ಹೇಳಿದ್ದಾರೆ.
ಲಾಕ್ ಡೌನ್ ಸಮಯದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಸಹ ಜನರಿಗೆ ನೆರವು ನೀಡಲು ಮುಂದಾಗಿದೆ. ಮನೆಯಲ್ಲಿರುವ ಸಂದರ್ಭದಲ್ಲಿ ಎದುರಾಗುವ ಮಾನಸಿಕ ಸಮಸ್ಯೆಗಳಿಗೆ ಸಹಾಯವನ್ನು ಮಾಡಲಿದೆ.
ಕೋವಿಡ್-19 ಸಾಂಕ್ರಾಮಿಕದ ಬಿಕ್ಕಟ್ಟಿನ ಈ ಸಂದರ್ಭದಲ್ಲಿ ಎದುರಾಗುವ ವಿವಿಧ ರೀತಿಯ ಮಾನಸಿಕ ಸಮಸ್ಯೆಗಳಿಗೆ ಸಹಾಯ ಪಡೆಯಲು ನಿಮ್ಹಾನ್ಸ್ ನ ಶುಲ್ಕ ರಹಿತ ದೂರವಾಣಿ ಸಂಖ್ಯೆಯನ್ನು ನೀಡಿದೆ. ಜನರು ಈ ಸಂಖ್ಯೆಗೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಗೆ ತಜ್ಞರಿಂದ ಸಲಹೆಗಳನ್ನು ಪಡೆಯಬಹುದು.
ಕುಟುಂಬದ ಜೊತೆ ಸಮಯ ಕಳೆಯಿರಿ, ಪುಸ್ತಕ ಓದಿ, ಸಂಗೀತ ಕೇಳಿ, ಒಂಟಿತನ ಎದುರಾಗದಂತೆ ಎಚ್ಚರವಹಿಸಿ ಎಂದು ಮನೋವೈದ್ಯರು ಸಲಹೆ ನೀಡಿದ್ದಾರೆ. ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಅನಿವಾರ್ಯವಾಗಿದೆ.
ಜನರು ಸಮಸ್ಯೆಗಳು ಉಂಟಾದರೆ 080 46110007 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.












Click it and Unblock the Notifications