ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಯುವತಿ ಸಾವು: ಕಾರು ಚಾಲಕ ಬಂಧನ
ಭಾನುವಾರ, ಮೇ 21ರಂದು ರಾಜಧಾನಿ ಬೆಂಗಳೂರಿನಲ್ಲಿ ಕೇವಲ 1 ಗಂಟೆ ಸುರಿದ ಭಾರೀ ಮಳೆಗೆ ಉಂಟಾದ ಅವಾಂತರಗಳು ಒಂದೆರಡಲ್ಲ, ಒಂದೇ ದಿನ ಇಬ್ಬರು ಸಾವನ್ನಪ್ಪಿದ್ದಾರೆ. ಕೆಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸಿಲುಕಿ ಯುವತಿ ಸಾವನ್ನಪ್ಪಿದರೆ, ರಾಜಕಾಲುವೆಯಲ್ಲಿ ಕೊಚ್ಚಿಹೋಗಿ ಯುವಕನೊಬ್ಬ ಮೃತನಾಗಿದ್ದಾನೆ.
ಇನ್ನು 22 ವರ್ಷದ ಯುವತಿ ಭಾನುರೇಖಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಅಧಿಕಾರಿಗಳು ಹಾಗೂ ಚಾಲಕನ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೀಗ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಮುಳುಗಡೆಯಾಗಿ ಮಹಿಳಾ ಟೆಕ್ಕಿ ಮೃತಪಟ್ಟ ಪ್ರಕರಣದ ಸಂಬಂಧ ಕಾರು ಚಾಲಕ ಹರೀಶ್‌ನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಯುವತಿ ಭಾನುರೇಖಾ ಸಹೋದರ ನೀಡಿದ ದೂರಿನ ಅನ್ವಯ ಕ್ಯಾಬ್ ಚಾಲಕ ಹರೀಶ್ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸೋಮವಾರ ಎಫ್‌ಐಆರ್ ದಾಖಲು ಮಾಡಲಾಗಿತ್ತು.

ಕ್ಯಾಬ್‌ನಲ್ಲಿದ್ದ ಪ್ರಯಾಣಿಕರು ಬೇಡವೆಂದರೂ ಕೇಳದ ಚಾಲಕ ಹರೀಶ್, ನೀರು ತುಂಬಿದ್ದ ಅಂಡರ್‌ಪಾಸ್‌ನಲ್ಲಿ ಕಾರು ಚಲಾಯಿಸಲು ಪ್ರಯತ್ನಿಸಿದ್ದಾನೆ. ಆಗ ಕಾರಿನ ಬಾಗಿಲು ಬಂದ್ ಆದ ಹಿನ್ನೆಲೆ ಪ್ರಯಾಣಿಕರು ಕಾರಿನಿಂದ ಇಳಿಯಲು ಯತ್ನಿಸಿದಾಗ ಚಾಲಕ ಹರೀಶ್, ಬೇಡ ಕಾರು ಆನ್ ಮಾಡಿ ಕರೆದೊಯ್ಯುವುದಾಗಿ ಹೇಳಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯ
ಮೃತ ಯುವತಿಯ ಸಹೋದರ ನೀಡೊಇದ ದೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿಗೆ ಅಂಡರ್‌ಪಾಸ್‌ನಲ್ಲಿ ಮಳೆ ನೀರು ತುಂಬಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಭಾನುರೇಖಾ ಸಾವಿಗೆ ಕ್ಯಾಬ್ ಚಾಲಕ ಹರೀಶ್, ಬಿಬಿಎಂಪಿ ಅಧಿಕಾರಿಗಳು ಕಾರಣ ಎಂದು ಮೃತಳ ಸಹೋದರ ಬಿಬಿಎಂಪಿ ಹಾಗೂ ಕಾರ್ ಚಾಲಕನ ವಿರುದ್ಧ ದೂರು ನೀಡಿದ್ದರು. ಅದರಂತೆ ಕಾರು ಚಾಲಕನ್ನು ಇದೀಗ ಬಂಧಿಸಲಾಗಿದೆ. ಮಳೆ ಬರುತ್ತದೆ ಎಂಬ ಮುನ್ಸೂಚನೆ ಇದ್ದರೂ ಮುನ್ನೆಚ್ಚರಿಕೆ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದೇ ಎಂದು ಕಾದು ನೋಡಬೇಕಿದೆ.
ಘಟನೆ ಏನು?
ಭಾನುವಾರ ಮಧ್ಯಾಹ್ನ ಸುರಿದ ಭಾರೀ ಮಳೆಗೆ ಕೆಆರ್ ಸರ್ಕಲ್‌ನ ಅಂಡರ್‌ಪಾಸ್‌ನಲ್ಲಿ ಸುಮಾರು 5 ಅಡಿಯಷ್ಟು ಎತ್ತರದಲ್ಲಿ ನೀರು ತುಂಬಿತ್ತು. ಈ ವೇಳೆ ಆರು ಮಂದಿ ತುಂಬಿಕೊಂಡು ಪ್ರಯಾಣಿಸುತ್ತಿದ್ದ ಕಾರು ಈ ಅಂಡರ್‌ಪಾಸ್‌ನಲ್ಲಿ ಹೋಗಿ ಸಿಲುಕಿಕೊಂಡಿತು.
ಕೂಡಲೇ ಎಚ್ಚೆತ್ತ ಸ್ಥಳೀಯರು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯ ನಡೆಸಿ ಆರು ಮಂದಿಯನ್ನು ರಕ್ಷಿಸಿದ್ದರು. ಈ ಪೈಕಿ ತೀವ್ರ ಅಸ್ವಸ್ಥಗೊಂಡಿದ್ದ ಭಾನುರೇಖಾ ಎಂಬ ಯುವತಿ ಆಸ್ಪತ್ರೆ ತಲುಪುವುದರೊಳಗೆ ಮೃತಪಟ್ಟಳು. ಘಟನೆ ನಂತರ ಕಾರು ಚಾಲಕ ಪರಾರಿಯಾಗಿದ್ದನು.
ಈ ಘಟನೆ ನಡೆದ ನಂತರ ಅದೇ ನೀರಿನಲ್ಲಿ ಆಟೋವೊಂದು ಮುಳುಗಡೆಯಾಗಿತ್ತು. ಆಟೋ ಚಾಲಕ ಬಚಾವ್ ಆಗಿದ್ದರೆ, ಮಹಿಳೆ ಸಂಕಷ್ಟಕ್ಕೆ ಸಿಲುಕಿದ್ದಳು. ಮಹಿಳೆಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದರು.
ಅಂಡರ್‌ಪಾಸ್‌ಗಳ ಆಡಿಟ್ ನಡೆಸುತ್ತಿದ್ದೇವೆ
ಈ ಕುರಿತು ಮಾತನಾಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, "ಭಾನುವಾರದ ಮಳೆಗೆ ದೊಡ್ಡ ಅವಘಡ ಸಂಭವಿಸಿದೆ. ಆದ್ದರಿಂದ ಬೆಂಗಳೂರಿನ ಎಲ್ಲಾ ಅಂಡರ್‌ಪಾಸ್‌ಗಳ ಆಡಿಟ್ ನಡೆಸುತ್ತಿದ್ದೇವೆ. ವರದಿ ಬಂದ ಬಳಿಕ ಸಂಚಾರ ಮಾಡಲು ಸೂಕ್ತವಿಲ್ಲದಿರುವ ಅಂಡರ್‌ಪಾಸ್‌ಗಳನ್ನು ಮುಚ್ಚುತ್ತೇವೆ," ಎಂದು ತಿಳಿಸಿದರು.
ಆದರೆ, ಬೆಂಗಳೂರಿನಲ್ಲಿ ಇನ್ನೂ 25 ಸೂಕ್ಷ್ಮ ಪ್ರದೇಶಗಳಿದ್ದು, ಆ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಂದರೆ, ಪ್ರವಾಹ ಪರಿಸ್ಥಿತಿ ಉಂಟಾಗಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾಹಿತಿ ನೀಡಿದರು.












Click it and Unblock the Notifications