ಕೋಟಕ್ ಮಹೀಂದ್ರಾ ಡೆಪ್ಯೂಟಿ ಮ್ಯಾನೇಜರ್ ಶವವಾಗಿ ಪತ್ತೆ
ಬೆಂಗಳೂರು, ಡಿಸೆಂಬರ್ 05 : ಎರಡು ದಿನದಿಂದ ನಾಪತ್ತೆಯಾಗಿದ್ದ ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಶವವಾಗಿ ಪತ್ತೆಯಾಗಿದ್ದಾರೆ. ದುಷ್ಕರ್ಮಿಗಳು ಅವರನ್ನು ಹತ್ಯೆ ಮಾಡಿ, ರಾಮನಗರ ಬಳಿ ಶವವನ್ನು ಎಸೆದು ಪರಾರಿಯಾಗಿದ್ದಾರೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿನ ಕೋಟಕ್ ಮಹೀಂದ್ರಾ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಅನಿಲ್ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ಈ ಕುರಿತು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವೂ ದಾಖಲಾಗಿತ್ತು.

ರಾಮನಗರ ಬಳಿಯ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಶವ ಪತ್ತೆಯಾಗಿದೆ. ಅನಿಲ್ ಅವರ ಮೇಲೆ ಹಲ್ಲೆ ಮಾಡಿ, ತಲೆ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆ ಮಾಡಲಾಗಿದೆ. ಬೇರೆ ಕಡೆ ಹತ್ಯೆ ಮಾಡಿ ಶವವನ್ನು ತಂದು ಎಸೆದಿರಬಹುದು ಎಂದು ಶಂಕಿಸಲಾಗಿದೆ.
ಅನಿಲ್ ಬೆಂಗಳೂರಿನ ಬನಶಂಕರಿ 3ನೇ ಹಂತದಲ್ಲಿರುವ ಭುವನೇಶ್ವರಿ ನಗರದ ನಿವಾಸಿಯಾಗಿದ್ದರು. ಅನಿಲ್ ಮದುವೆ ನಿಶ್ಚಯವಾಗಿತ್ತು, ಎರಡು ತಿಂಗಳ ಬಳಿಕ ವಿವಾಹಕ್ಕೆ ದಿನಾಂಕ ನಿಗದಿ ಮಾಡಲಾಗಿತ್ತು.
ಕಗ್ಗಲೀಪುರ ಪೊಲೀಸರು ಮೊದಲು ಶವವನ್ನು ನೋಡಿದ್ದು, ನಂತರ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹತ್ಯೆ ಮಾಡಿದವರು ಯಾರು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications