ಬೆಂಗಳೂರು ಮಾರುಕಟ್ಟೆಗೆ ಲಗ್ಗೆ ಇಡಲಿವೆ ಅಕ್ಕಪಕ್ಕದ ಜಿಲ್ಲೆಗಳ ಮಾವು
ಬೆಂಗಳೂರು, ಏಪ್ರಿಲ್ 7: ವಿವಿಧ ಕಾರಣಕ್ಕೆ ಬೆಂಗಳೂರು ನಗರದ ಮಾರುಕಟ್ಟೆಗೆ ಮಾವು ಬರುವುದು ವಿಳಂಬವಾಗಿದೆ. ಆದ್ದರಿಂದ ಜನರಿಗೆ ಸರಿಯಾಗಿ ಈ ಬಾರಿ ಮಾವಿನ ಹಣ್ಣು ಸವಿಯುವ ಅವಕಾಶ ಸಿಕ್ಕಿಲ್ಲ. ಆದರೆ ಏಪ್ರಿಲ್‌ನಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಂದ ಮಾವು ಮಾರುಕಟ್ಟೆಗೆ ಬರಲು ತಯಾರಿ ನಡೆದಿದೆ. ಕೋಲಾರ ಮತ್ತು ರಾಮನಗರ ಜಿಲ್ಲೆಯ ಮಾವು ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಮಾವಿನ ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ.
ಪ್ರತಿ ವರ್ಷ ಮಾರ್ಚ್ 20ರ ಬಳಿಕ ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವು ಆರ್ಭಟ ಜೋರಾಗಿ ಇರುತ್ತಿತ್ತು. ಆದರೆ ಕಳೆದ ವರ್ಷದ ನಿರಂತರ ಮಳೆ, ಹೂವಾಗುವುದು ತಡ ಸೇರಿ ವಿವಿಧ ಕಾರಣಕ್ಕೆ ಮಾರುಕಟ್ಟೆಗೆ ಇನ್ನೂ ಸರಿಯಾಗಿ ಮಾವು ಬಂದಿಲ್ಲ. ಆದ್ದರಿಂದ ಬೇಸಿಗೆಯಲ್ಲಿ ಮಾವಿನ ಹಣ್ಣು ಸವಿಯುವ ಜನರ ಆಸೆಗೆ ತಣ್ಣೀರು ಸುರಿದಂತೆ ಆಗಿದೆ.

ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಅಧಿಕಾರಿಗಳು ಈ ಕುರಿತು ಮಾತನಾಡಿದ್ದು, ಏಪ್ರಿಲ್‌ನಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರದ ಮಾರುಕಟ್ಟೆಗಳಿಗೆ ಅಪಾರವಾದ ಮಾವಿನ ಹಣ್ಣುಗಳು ಬರಲಿವೆ. ಜನರು ನೆಚ್ಚಿನ, ತಾಜಾ ಹಣ್ಣುಗಳನ್ನು ಖರೀದಿ ಮಾಡಬಹುದು ಎಂದು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಇಳುವರಿ ಸ್ಪಷ್ಪ ಕಡಿಮೆ ಇದೆ. ಆದರೆ ರಾಜ್ಯಾದ್ಯಂತ ಉತ್ತಮವಾಗಿ ಫಸಲು ಬಂದಿದೆ. ಏಪ್ರಿಲ್‌ನ ಕಟಾವು ಬಳಿಕ ಮಾರುಕಟ್ಟೆಗೆ 8 ರಿಂದ 9 ಮೆಟ್ರಿಕ್ ಟನ್ ಮಾವಿನ ಹಣ್ಣು ಪೂರೈಕೆಯಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2024ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಬೇಗನೇ ಮಾವಿನ ಗಿಡಗಳಲ್ಲಿ ಹೂಗಳು ಬಂದಿತ್ತು. ಆದರೆ ಕೆಲವು ಜಿಲ್ಲೆಗಳಲ್ಲಿ 2025ರ ಫೆಬ್ರವರಿಯಲ್ಲಿ ಹಲವು ಕಡೆ ಸುರಿದ ಅಕಾಲಿಕ ಮಳೆಯಿಂದಾಗಿ ಕಾಯಿಗಳು ಬೆಳೆದು ಹಣ್ಣಾಗುವುದು ತಡವಾಗಿದೆ.
ಏಪ್ರಿಲ್ ತಿಂಗಳ ಕಟಾವಿನ ನಂತರ ಭಾರೀ ಪ್ರಮಾಣದಲ್ಲಿ ಮಾವು ಮಾರುಕಟ್ಟೆಗೆ ಬರಲಿದೆ. ಇದನ್ನು ಮಾವಿನ ಹಣ್ಣಿನ ಋತು ಎನ್ನಬೇಕೋ?, ಬೇಡವೋ? ಎಂಬ ಬಗ್ಗೆ ಚರ್ಚೆಗಳು ಸಾಗಿವೆ. ಪ್ರತಿ ವರ್ಷ ಹಣ್ಣಿನ ಋತು ಮುಗಿದ ಬಳಿಕ ಮಾರುಕಟ್ಟೆಗೆ 6-7 ಮೆಟ್ರಿಕ್ ಟನ್ ಮಾವು ಬರುತ್ತಿತ್ತು. ಆದರೆ ಈ ವರ್ಷ ಏಪ್ರಿಲ್‌ನಲ್ಲಿ 12 ಮೆಟ್ರಿಕ್ ಟನ್ ತನಕ ಮಾವಿನ ಹಣ್ಣನ್ನು ನಿರೀಕ್ಷೆ ಮಾಡಲಾಗಿದೆ.
ಕೋಲಾರ, ರಾಮನಗರ ಜಿಲ್ಲೆಯಲ್ಲಿ ಈಗ ಮಾವಿನ ಕಟಾವಿಗೆ ಸಿದ್ಧತೆಗಳು ನಡೆಯುತ್ತಿವೆ. ಏಪ್ರಿಲ್ 2ನೇ ವಾರದಿಂದ ಮಾವು ಮಾರುಕಟ್ಟೆಗೆ ಬರಲಿದ್ದು, 3ನೇ ವಾರ ಹೆಚ್ಚು ಹಣ್ಣುಗಳು ಲಗ್ಗೆ ಇಡಲಿವೆ. ಉತ್ತಮ ಗುಣಮಟ್ಟದ ಹಣ್ಣುಗಳ ಕಟಾವಿಗೆ ಈಗಾಗಲೇ ರೈತರಿಗೆ ಸಹ ಸೂಚನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ನಿಯಮಿತದ ಪ್ರಕಾರ ರಾಜ್ಯದ 31 ಜಿಲ್ಲೆಗಳಲ್ಲಿ ಸುಮಾರು 1.49 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಆದರೆ ಮುಖ್ಯವಾಗಿ ಕೋಲಾರ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ, ಧಾರವಾಡ ಮತ್ತು ಬೆಳಗಾವಿಯಲ್ಲಿ ಹೆಚ್ಚು ಮಾವು ಬೆಳೆಯುತ್ತಾರೆ.












Click it and Unblock the Notifications