Bengaluru: ಜಿಟಿ ಜಿಟಿ ಮಳೆಗೆ ಚಿಕನ್ ತಿನ್ಬೇಕು ಅನ್ಸ್ತಾಯಿದಿಯಾ? ಹಾಗಾದರೆ ಚಿಕನ್ ದರ ಹೇಗಿದೆ ಅಂತ ತಿಳ್ಕೊಂಡುಬಿಡಿ
ಬೆಂಗಳೂರು ಜುಲೈ 25: ರಾಜ್ಯದಲ್ಲಿ ಮುಂಗಾರು ಜೋರಾಗಿದೆ. ಮಾಂಸಾಹಾರಿಗಳಿಗಂತೂ ಈ ಸಮಯ ಹೇಳಿ ಮಾಡಿಸಿದ್ದು. ಯಾಕೆಂದರೆ ಜಿಟಿ ಜಿಟಿ ಮಳೆಗೆ ಸ್ಪೈಸಿ ಸ್ಪೈಸಿ ಚಿಕನ್ ತಿಂತಾಯಿದ್ದರೆ ಅದರಲ್ಲಿರೋ ಮಜಾನೇ ಬೇರೆ. ಎಷ್ಟೋ ಜನ ಚುಮು ಚುಮು ಚಳಿ ಮಳೆಗೆ ಬಜ್ಜಿ ಬೋಂಡಾ ಬದಲಿಗೆ ಚಿಕನ್ ಫ್ರೈ, ಕಬಾಬ್, ಲಾಲಿಪಾಪ್ ನಂತಹ ಚಿಕನ್ ಖಾದ್ಯಗಳನ್ನು ಸವಿಯಲು ಇಷ್ಟಾಪಡ್ತಾರೆ. ಆದರೀಗ ಮಾಂಸಾಹಾರಿಗಳು ಚಿಕನ್ ಬೆಲೆ ಕೇಳಿ ನಿರಾಸೆಗೊಂಡಿದ್ದಾರೆ.
ಹೌದು.. ಬೆಂಗಳೂರಿನಲ್ಲಿ ಒಂದು ಕೆಜಿ ಚಿಕನ್ ಬೆಲೆ 240 ರೂಪಾಯಿಗೆ ಬಂದು ತಲುಪಿದೆ. ಕಳೆದ ಒಂದು ತಿಂಗಳ ಹಿಂದೆ 200 ರೂಪಾಯಿ ಒಳಗೆ ಇದ್ದ ಚಿಕನ್ ಬೆಲೆ ಸದ್ಯ 40-50 ರೂಪಾಯಿವರಗೆ ಹೆಚ್ಚಾಗಿರುವುದು ಚಿಕನ್ ಪ್ರಯರಿಗೆ ಬೇಸರ ತಂದಿದೆ. ಹಾಗಾದರೆ ಬೆಂಗಳೂರಿನಲ್ಲಿಂದು ಚಿಕನ್ ಬೆಲೆ ಯಾವ ರೀತಿ ಇದೆ ಎಂದು ನೋಡುವುದಾದರೆ-

ಬೆಂಗಳೂರಿನಲ್ಲಿ ಇಂದು ಚಿಕನ್ ದರ (25 ಜುಲೈ 2023)
| ವೆರೈಟಿ | ಪ್ರಮಾಣ | ಬೆಲೆ |
| ಬೋನ್ ಲೆಸ್ ಚಿಕನ್ | 1 ಕೆಜಿ | ₹ 300.00 |
| ಕೋಳಿ | 1 ಕೆಜಿ | ₹ 240.00 |
| ಚಿಕನ್ ಲಿವರ್ | 1 ಕೆಜಿ | ₹ 120.00 |
| ಹಳ್ಳಿಗಾಡಿನ ಕೋಳಿ | 1 ಕೆಜಿ | ₹ 420.00 |
| ಜೀವಂತ ಕೋಳಿ | 1 ಕೆಜಿ | ₹ 160.00 |
| ಸ್ಕಿನ್ ಲೆಸ್ ಚಿಕನ್ | 1 ಕೆಜಿ | ₹ 260.00 |
ಬೆಂಗಳೂರಿನಲ್ಲಿ ಇಂದು (25 ಜುಲೈ) ಚಿಕನ್ ದರ ಬೋನ್ ಲೆಸ್ ಚಿಕನ್ ಒಂದು ಕೆಜಿಗೆ 300 ರೂಪಾಯಿ ಇದೆ. ಕೋಳಿ ಮಾಂಸಕ್ಕೆ ಕೆಜಿಗೆ 240 ರೂಪಾಯಿ, ಚಿಕನ್ ಲಿವರ್ ಕೆಜಿಗೆ 120 ರೂಪಾಯಿ, ನಾಟಿ ಕೋಳಿ ಕೆಜಿಗೆ 420 ರೂಪಾಯಿ, ಜೀವಂತ ಕೋಳಿ ಕೆಜಿಗೆ 160 ರೂಪಾಯಿ, ಸ್ಕಿನ್ ಲೆಸ್ ಚಿಕನ್ ಕೆಜಿಗೆ 260 ರೂಪಾಯಿ ಇದೆ.
ಬೇಸಿಗೆ ಕಾಲದಲ್ಲಿ ಚಿಕನ್‌ಗೆ ಬೇಡಿಕೆ ಕಡಿಮೆಯಾದ ಕಾರಣ ಬೆಲೆ ಕೂಡ ಕಡಿಮೆಯಾಗಿತ್ತು. ಇದರಿಂದಾಗಿ ಕೋಳಿ ಸಾಕಾಣಿಕೆದಾರರು, ಉದ್ಯಮಿಗಳು ಸಾಕಾಣಿಕೆಯನ್ನು ಕಡಿಮೆ ಮಾಡಿದ್ದರು. ಮೇವಿನ ಕೊರತೆಯಿಂದಾಗಿ ಕುರಿ, ಮೇಕೆ ಸಾಕಾಣಿಕೆ ಪ್ರಮಾಣ ಕೂಡ ಕಡಿಮೆಯಾಗಿತ್ತು. ಆದರೆ, ಈಗ ಮದುವೆ ಸೀಜನ್ ಕೂಡ ಶುರುವಾಗಿದ್ದು, ಜಾತ್ರೆಗಳು ಕೂಡ ನಡೆಯುತ್ತಿರುವ ಕಾರಣ ಚಿಕನ್, ಮಟನ್‌ಗೆ ಭಾರಿ ಬೇಡಿಕೆ ಉಂಟಾಗಿದೆ.

ಕೋಳಿ ಸಾಕಾಣಿಕೆ ಪ್ರಮಾಣ ಕಡಿಮೆ ಇದ್ದು ಬೇಡಿಕೆ ದಿಢೀರ್ ಎಂದು ಹೆಚ್ಚಾದ ಕಾರಣ ಮಾಂಸದ ದರ ಭಾರಿ ಹೆಚ್ಚಳವಾಗಿದೆ. ಮಳೆಗಾಲದಲ್ಲಿ ಕರಾವಳಿಯಲ್ಲಿ ಮೀನುಗಾರಿಕೆಗೆ ಕೂಡ ನಿಷೇಧ ಇರುವ ಕಾರಣ, ಮೀನು ಪೂರೈಕೆ ಕಡಿಮೆಯಾಗಿದ್ದು, ಮಾಂಸಕ್ಕೆ ಬೇಡಿಕೆ ಹೆಚ್ಚಾಗಲು ಕಾರಣಗಳಲ್ಲಿ ಒಂದಾಗಿದೆ. ಇದೇ ಕಾರಣಕ್ಕೆ ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.
ಇನ್ನೂ ತರಕಾರಿಗಳ ಬೆಲೆ ಕೂಡ ದುಬಾರಿಯಾಗಿದೆ. ಯಾವುದೇ ತರಕಾರಿ ಬೆಲೆ ಕೇಳಿದರೂ ಐವತ್ತು ರೂಪಾಯಿ ಮೇಲೆ ಇದೆ. ಮಳೆಯ ಅರ್ಭಟಕ್ಕೆ ತರಕಾರಿ ಇನ್ನಿತರ ಬೆಳೆಗಳು ನಾಶವಾಗಿದ್ದು ತರಕಾರಿಗಳ ಬೆಲೆ ಗಗನಕ್ಕೇರಿದೆ. ಟೊಮೆಟೊ ಕೆಜಿಗೆ 150 ರೂಪಾಯಿ ಗಡಿ ದಾಟಿದೆ. ಹುರುಳಿಕಾಯಿ, ಮೈಸೂರು ಬದನೆ, ಕ್ಯಾರೆಟ್, ನುಗ್ಗೆಕಾಯಿ, ಹಸಿರು ಮೆಣಸಿನಕಾಯಿ, ಕ್ಯಾಪ್ಸಿಕಂ, ಬೆಂಡೆಕಾಯಿ ಎಲ್ಲವೂ 50 ರೂಪಾಯಿಕ್ಕಿಂತಲೂ ಹೆಚ್ಚಾಗಿದೆ.












Click it and Unblock the Notifications