ನನಗೆ ಕನ್ನಡ ಓದಲು & ಬರೆಯಲು ಬರುತ್ತದೆ, ಯಾರಿಗೂ ಸಾಬೀತು ಮಾಡಲ್ಲ: ಉದ್ಯಮಿ ಕಿರಣ್ ಮಜುಂದಾರ್ ಶಾ
Kiran Mazumdar Shaw: ಕಳೆದ ಒಂದು ತಿಂಗಳಿನಿಂದ ಉದ್ಯಮಿ ಕಿರಣ್ ಮಜುಂದಾರ್ ಶಾ ಹಾಗೂ ಸರ್ಕಾರದ ನಡುವೆ ವಾಕ್ಸಮರ, ಸೋಷಿಯಲ್ ಮೀಡಿಯಾ ಟ್ವೀಟ್ ವಾರ್ ನಡೆದಿತ್ತು. ಈ ನಡುವೆ ಉದ್ಯಮಿ ಕಿರಣ್ ಮಜುಂದಾರ್ ಶಾ ಅವರು ಹೊರ ರಾಜ್ಯದವರು ಹಾಗೂ ಗುಜರಾತ್‌ನಿಂದ ಬಂದಿದ್ದಾರೆ ಎನ್ನುವ ಚರ್ಚೆಗಳು ನಡೆದಿತ್ತು. ಇದೀಗ ಈ ವಿಚಾರವಾಗಿ ಉದ್ಯಮಿ ಕಿರಣ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಉದ್ಯಮಿಗಳಾದ ಮೋಹನ್‌ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ಅವರು ಬೆಂಗಳೂರಿನ ಮೂಲಸೌಕರ್ಯ ಹಾಗೂ ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಪದೇ ಪದೇ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಇಬ್ಬರು ಉದ್ಯಮಿಗಳು ಯಾವ ರಾಜ್ಯಕ್ಕೆ ಸೇರಿದವರು ಹಾಗೂ ಈ ಹಿಂದೆ ರಾಜ್ಯದಲ್ಲಿ ಉದ್ಯೋಗ ನೀತಿ ಹಾಗೂ ಭಾಷೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಗೆ ರಿಯಾಕ್ಟ್ ಮಾಡಿದ್ದರು ಎನ್ನುವುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಅಲ್ಲದೇ ಕಿರಣ್ ಅವರು ನಾನು ಶೇ 100% ಗುಜರಾತಿ ಎಂದು ಹೇಳಿಕೊಂಡಿದ್ದರು ಎನ್ನುವ ಸೋಷಿಯಲ್ ಮೀಡಿಯಾ ಎಕ್ಸ್‌ನ ಪೋಸ್ಟ್ ಸಹ ವೈರಲ್ ಆಗಿತ್ತು.

ಇದೀಗ ತಮ್ಮ ಮೇಲೆ ಕೇಳಿ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಕಿರಣ್ ಮಜುಂದಾರ್ ಶಾ ಅವರು ಟ್ವೀಟ್ ಮಾಡಿದ್ದಾರೆ. ನಾನು ಈ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದೇನೆ. ಏಳು ದಶಕಗಳ ಕಾಲ ಇಲ್ಲಿ ನೆಲೆಸಿದ್ದೇನೆ. ನನ್ನ ಕನ್ನಡ ಸಂಸ್ಕೃತಿಯನ್ನು ಪ್ರೀತಿಸಿದ್ದೇನೆ ಮತ್ತು ಈ ಅದ್ಭುತ ಭಾಷೆಯನ್ನು ಓದಲು ಬರೆಯಲು ಮತ್ತು ಮಾತನಾಡಲು ಬರುತ್ತದೆ. ಕರ್ನಾಟಕದ ಬಗೆಗಿನ ನನ್ನ ನಿಷ್ಠೆಯನ್ನು ಪ್ರಶ್ನಿಸುವ ಯಾರಿಗೂ ನಾನು ಉತ್ತರಿಸಬೇಕಾಗಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಹೆಮ್ಮೆಯ ಕನ್ನಡತಿ ಎಂದು ಅವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಇದೀಗ ಈ ಟ್ವೀಟ್ ಸಹ ಭಾರೀ ಚರ್ಚೆಗೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಜನರಿಂದ ಇದಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನೀವು ನಿಜವಾಗಿಯೂ ಹೆಮ್ಮೆಯ ಕನ್ನಡಿಗನಾಗಿದ್ದರೆ, ದಯವಿಟ್ಟು ಕರ್ನಾಟಕದಲ್ಲಿ ದ್ವಿಭಾಷಾ ನೀತಿಯನ್ನು ಬೆಂಬಲಿಸಿ. ಅದು ನಿಮ್ಮ ಕರ್ನಾಟಕದ ನಿಷ್ಠೆಯನ್ನು ಸಾಬೀತುಪಡಿಸುತ್ತದೆ ಮೇಡಂ ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಇಲ್ಲಿ ಹುಟ್ಟಿ ತಲೆಮಾರುಗಳಿಂದ ವಾಸಿಸುತ್ತಿರುವ ಜನರಿಗೆ ಬೆಂಗಳೂರು ಎಷ್ಟು ಸುಂದರವಾಗಿತ್ತು ಎಂದು ಗೊತ್ತಿದೆ. ಬೆಂಗಳೂರು ಅಭಿವೃದ್ಧಿ ಹಾಗೂ ಸಾಧನೆಯ ಬಗ್ಗೆ ನಾವೆಲ್ಲರೂ ಹೆಮ್ಮೆಪಡುತ್ತೇವೆ. ಆದರೆ ಮೂಲಸೌಕರ್ಯ ಮತ್ತು ಆಡಳಿತದ ವಿಷಯದಲ್ಲಿ ಅದು ವಿಶ್ವದಲ್ಲೇ ಅತ್ಯುತ್ತಮವಾಗಬೇಕೆಂದು ನಾವು ಬಯಸುತ್ತೇವೆ ಎಂದೂ ಮತ್ತೊಬ್ಬ ನೆಟ್ಟಿಗರು ರಿಯಾಕ್ಟ್ ಮಾಡಿದ್ದಾರೆ.












Click it and Unblock the Notifications