ಕೆಜಿಎಫ್ 2 ಚಿತ್ರಕ್ಕೆ ನಿರಾಳ ನೀಡಿದ ಹೈಕೋರ್ಟ್ ಆದೇಶ
Recommended Video
ಬೆಂಗಳೂರು, ಸೆಪ್ಟೆಂಬರ್ 27: ಬಹುನಿರೀಕ್ಷಿತ ಕೆಜಿಎಫ್ 2 ಚಿತ್ರತಂಡಕ್ಕೆ ನಿರಾಳ ಭಾವ ನೀಡಿದೆ ಹೈಕೋರ್ಟ್ ಆದೇಶ.
ಕೆಜಿಎಫ್ 2 ಚಿತ್ರವನ್ನು ಕೋಲಾರದ ಕೆಜಿಎಫ್ ನಲ್ಲಿ ಚಿತ್ರೀಕರಿಸದಂತೆ ಅರ್ಜಿಯೊಂದು ದಾಖಲಾಗಿತ್ತು. ವಿಚಾರಣೆ ನಡೆಸಿದ ಅಧೀನ ನ್ಯಾಯಾಲಯವು ಚಿತ್ರೀಕರಣಕ್ಕೆ ತಡೆ ನೀಡಿತ್ತು. ಇದು ಚಿತ್ರತಂಡಕ್ಕೆ ಭಾರಿ ಹಿನ್ನಡೆ ಆಗಿತ್ತು.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಕೆಜಿಎಫ್ 2 ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಧೀನ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿದೆ. ಹೈಕೋರ್ಟ್ ಆದೇಶದಂತೆ ಕೆಜಿಎಫ್ 2 ಚಿತ್ರತಂಡವು ಕೆಜಿಎಫ್ ನಲ್ಲಿ ಚಿತ್ರೀಕರಣ ನಡೆಸಬಹುದಾಗಿದೆ.

ಕೆಜಿಎಫ್‌ನ ಸಂರಕ್ಷಿತ ಸೈನೇಡ್ ದಿಬ್ಬದ ಪ್ರದೇಶಗಳಲ್ಲಿ ಚಿತ್ರೀಕರಣ ಮಾಡಿ ಪರಿಸರ ಹಾಳು ಮಾಡುತ್ತಿದ್ದಾರೆ ಎಂದು ಕೆಜಿಎಫ್‌ನ ರಾಷ್ಟ್ರೀಯ ಪ್ರಜಾ ಚಕ್ರವ್ಯೂಹ ಪಕ್ಷದ ಅಧ್ಯಕ್ಷ ಎನ್ ಶ್ರೀನಿವಾಸ್ ಎಂಬುವರು ನ್ಯಾಯಾಲಯ ಮೋರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಚಿತ್ರದ ಚಿತ್ರೀಕರಣಕ್ಕೆ ತಡೆಯಾಜ್ಞೆ ನೀಡಿ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಈಗ ಆದೇಶಕ್ಕೆ ತಡೆ ನೀಡಲಾಗಿದೆ.
ಚಿತ್ರೀಕರಣದ ವೇಳೆ ಸ್ಥಳದಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಹಾನಿ ಮಾಡುವುದಿಲ್ಲ, 25 ದಿನಗಳಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಸ್ಥಳ ಖಾಲಿ ಮಾಡುತ್ತೇವೆ ಎಂದು ನ್ಯಾಯಪೀಠಕ್ಕೆ ನಿರ್ಮಾಪಕರು ವಾಗ್ದಾನ ನೀಡಿದ ಬಳಿಕವಷ್ಟೆ ಚಿತ್ರೀಕರಣಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಕೆಜಿಎಫ್ ಚಿತ್ರೀಕರಣ ಕೆಜಿಎಫ್‌ನ ಸೈನೈಡ್ ದಿಬ್ಬದಲ್ಲಿ ನಡೆದಿತ್ತು. ಕೆಜಿಎಫ್ 2 ಚಿತ್ರೀಕರಣವೂ ಸಹ ಇದೇ ಸ್ಥಳದಲ್ಲಿ ಚಿತ್ರೀಕರಣ ಆಗುವುದಿತ್ತು. ಆದರೆ ನ್ಯಾಯಾಲಯದ ಆದೇಶದಿಂದ ಚಿತ್ರೀಕರಣ ತಂಡ ಕಾಯುವಂತಾಗಿತ್ತು.
ಪ್ರಸ್ತುತ ಕೆಜಿಎಫ್ 2 ಚಿತ್ರೀಕರಣವು ಮುಂಬೈನಲ್ಲಿ ನಡೆಯುತ್ತಿದ್ದು, ಚಿತ್ರದ ಖಳನಾಯಕ ಪಾತ್ರಧಾರಿ ಬಾಲಿವುಡ್‌ನ ಸಂಜಯ್ ದತ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.












Click it and Unblock the Notifications