ಬಿಬಿಎಂಪಿ ವಿರುದ್ಧ ಪೊಲೀಸರಿಗೆ ದೂರು ಕೊಟ್ಟ ಕೆಎಎಸ್ ಅಧಿಕಾರಿ ಮಥಾಯಿ!
ಬೆಂಗಳೂರು, ನವೆಂಬರ್ 10 : ಕೆಎಎಸ್ ಅಧಿಕಾರಿ ಕೆ.ಮಥಾಯಿ ಬಿಬಿಎಂಪಿ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೇತನದಿಂದ ಕಡಿತ ಮಾಡಿದ ಸಾಮಾನ್ಯ ಭವಿಷ್ಯ ನಿಧಿ ಹಣವನ್ನು ಭವಿಷ್ಯ ನಿಧಿ ಖಾತೆಗೆ ವರ್ಗಾವಣೆ ಮಾಡಿಲ್ಲ ಎಂದು ಅವರು ಆರೋಪಿಸಿದ್ದಾರೆ.
2014ರ ನವೆಂಬರ್‌ನಿಂದ 2016ರ ಏಪ್ರಿಲ್ ತನಕ ಕೆ.ಮಥಾಯಿ ಪಾಲಿಕೆಯ ಸಹಾಯಕ ಆಯುಕ್ತ (ಜಾಹೀರಾತು ವಿಭಾಗ)ರಾಗಿ ಕೆಲಸ ಮಾಡಿದ್ದರು. ಈ ಸಮಯದಲ್ಲಿ ಅವರ ವೇತನದಿಂದ ಪ್ರತಿ ತಿಂಗಳು ಜಿಪಿಎಫ್ ರೂಪದಲ್ಲಿ 15 ಸಾವಿರ ರೂ. ಕಡಿತ ಮಾಡಲಾಗಿತ್ತು.

ಆದರೆ, ಬಿಬಿಎಂಪಿ ಭವಿಷ್ಯ ನಿಧಿ ಖಾತೆಗೆ ಆ ಹಣವನ್ನು ಜಮಾ ಮಾಡಿಲ್ಲ. ಇದರ ಬಗ್ಗೆ ವಿಚಾರಿಸಿದರೆ ಪಾಲಿಕೆ ಅಧಿಕಾರಿಗಳು ಹಾರಿಕೆಯ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ, ದೂರು ನೀಡಲಾಗಿದೆ.
'ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು. ಹಾಗೆಯೇ ನನ್ನ ವೇತನದಿಂದ ಕಡಿತ ಮಾಡಿರುವ 2.50 ಲಕ್ಷದ ಜೊತೆ ಶೇ 8ರಷ್ಟು ಬಡ್ಡಿ ಮೊತ್ತ 60 ಸಾವಿರವನ್ನು ತ್ವರಿತವಾಗಿ ಜಮೆ ಮಾಡಬೇಕು' ಎಂದು ಕೋರಿದ್ದಾರೆ.
ದೂರನ್ನು ಸ್ವೀಕಾರ ಮಾಡಿರುವ ಹಲಸೂರು ಗೇಟ್ ಪೊಲೀಸರು ಐಪಿಸಿ ಸೆಕ್ಷನ್ 406 (ನಂಬಿಕೆ ದ್ರೋಹ) ದಡಿ ಎಫ್‌ಐಆರ್ ದಾಖಲು ಮಾಡಿದ್ದು, ಪಾಲಿಕೆಯ ಹಣಕಾಸು ವಿಭಾಗದ ಅಧಿಕಾರಿಗಳಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ.












Click it and Unblock the Notifications