ಸಿದ್ದು ಕನಸಿನ ಮಟನ್ ಭಾಗ್ಯ ಶೀಘ್ರವೇ ನನಸು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ 'ಮಟನ್ ಭಾಗ್ಯ' ಶೀಘ್ರವೇ ನನಸಾಗಲಿದೆ. ಕೆಎಂಎಫ್ ನಂದಿನಿ, ಹಾಪ್ ಕಾಪ್ಸ್ ಮಳಿಗೆಗಳಂತೆ ಮಟನ್ ಶಾಪ್ ಗಳು ರಾಜ್ಯದೆಲ್ಲೆಡೆ ಆರಂಭಗೊಳ್ಳಲಿವೆ.
ಬೆಂಗಳೂರು, ಮೇ 30: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಿನ 'ಮಟನ್ ಭಾಗ್ಯ' ಶೀಘ್ರವೇ ನನಸಾಗಲಿದೆ. ಕೆಎಂಎಫ್ ನಂದಿನಿ, ಹಾಪ್ ಕಾಪ್ಸ್ ಮಳಿಗೆಗಳಂತೆ ಮಟನ್ ಶಾಪ್ ಗಳು ರಾಜ್ಯದೆಲ್ಲೆಡೆ ಆರಂಭಗೊಳ್ಳಲಿವೆ.
ಕೆಎಂಎಫ್ ನಂದಿನಿ ಬ್ರ್ಯಾಂಡ್ ನಂತೆ ಕುರಿ ಮಾಂಸ ಎಲ್ಲೆಡೆ ಸಿಗುವಂತೆ ಮಾಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ಯೋಜನೆ ರೂಪಿಸಿರುವ ಯೋಜನೆ ಕರ್ನಾಟಕ ಸರ್ಕಾರ ಸಂಪೂರ್ಣ ಒಪ್ಪಿಗೆ ನೀಡಿ ಎರಡು ವರ್ಷ ಕಳೆದ ಬಳಿಕ ಯೋಜನೆ ಅನುಷ್ಠಾನಗೊಳ್ಳುವ ಹಂತ ತಲುಪಿದೆ.
ಆನ್ ಲೈನ್ ಗೆ ಶೀಘ್ರ: ಈ ಮಟನ್ ಸ್ಟಾಲ್ ಗಳು ಆನ್ ಲೈನ್ ನಲ್ಲೂ ಲಭ್ಯವಾಗಲಿದ್ದು, ಗ್ರಾಹಕರ ಮನೆ ಮನೆಗೆ ಮಟನ್ (ಬೇಕಾದ ಅಳತೆ ಗಾತ್ರದಲ್ಲಿ ಕತ್ತರಿಸಿದ ತುಂಡುಗಳು) ತಲುಪಿಸಲಾಗುತ್ತದೆ. ಸುಮಾರು 1.5 ಕೋಟಿ ಗೂ ಅಧಿಕ ಕುರಿ ಹಾಗೂ ಮೇಕೆಗಳನ್ನು 8 ಲಕ್ಷಕ್ಕೂ ಅಧಿಕ ರೈತರು ಪಾಲನೆ ಮಾಡುತ್ತಿದ್ದಾರೆ.

ಕುರಿ ಮಾಂಸ ಮಾರಾಟಕ್ಕೆ ಸಹಕಾರಿ ವ್ಯವಸ್ಥೆ
* ರಾಜ್ಯದಲ್ಲಿರುವ ಸುಮಾರು 300ಕ್ಕೂ ಅಧಿಕ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘಗಳನ್ನು ಒಗ್ಗೂಡಿಸಿ, ನೋಂದಣಿಗೆ ಚಾಲನೆ ನೀಡಲು ಮುಂದಾಗಿದೆ.
* ಈ ಸಂಘಗಳ ಅಭಿವೃದ್ಧಿಗೆ ಸರ್ಕಾರದಿಂದ 25 ಕೋಟಿ ರು ಅನುದಾನ ಸಿಕ್ಕಿದೆ.
* ಸುಮಾರು 18ಕ್ಕೂ ಅಧಿಕ ಆಂಬ್ಯುಲೆನ್ಸ್ ಗಳನ್ನು ರಸ್ತೆಗಿಳಿಸಲಾಗಿದ್ದು, ಕುರಿ/ಮೇಕೆಗಳ ಆರೋಗ್ಯ ರಕ್ಷಣೆಗೆ ಕ್ರಮ ಜರುಗಿಸಲು ಒತ್ತಾಯ.

ಹುಲ್ಲುಗಾವಲ ಅಭಿವೃದ್ಧಿ
ಪಶುಪಾಲನೆ, ಕುರಿಗಾಹಿಗಳಿಗಳಿಗೆ ಅವಶ್ಯವಿರುವ ಹುಲ್ಲುಗಾವಲನ್ನು ಅಭಿವೃದ್ಧಿ ಪಡಿಸುತ್ತೇವೆ ಮತ್ತು ಅವುಗಳ ಒತ್ತುವರಿ ತಡೆಯಲು ಕ್ರಮ ಕೈಗೊಳ್ಳಲು ಸೂಚನೆ ನೀಡುತ್ತೇನೆ. ಕುರಿಗಾಹಿಗಳ ಕುರಿ ರಕ್ಷಣೆಗೆ ಗನ್ ನೀಡಲು ಯೋಜನೆಯೂ ಇದೆ. ಸತ್ತ ಕುರಿಗಳ ಜೊತೆಗೆ ರೋಗದಿಂದ ಸತ್ತ ಕುರಿಗಳಿಗೂ ಪರಿಹಾರ ಧನ ನೀಡಲಾಗುವುದು ಎಂದು ಚೇರ್ಮನ್ ಕೃಷ್ಣ ಹೇಳಿದ್ದಾರೆ

ಕಸಾಯಿಖಾನೆಗೂ ಅನುದಾನ
ಎರಡು ಸುಸಜ್ಜಿತ ಕಸಾಯಿಖಾನೆ ನಿರ್ಮಾಣಕ್ಕೆ 7.25ಕೋಟಿರು, ಹಾಲಿ ಇರುವ ಕಸಾಯಿಖಾನೆಗಳ ಅಭಿವೃದ್ಧಿ, ಪ್ರತಿ ಮಟನ್ ಶಾಪ್ ಗಳಿಗೆ 1.25 ರು. ದೊಡ್ಡ ದೊಡ್ಡ ಮಟನ್ ಶಾಪ್ ಗಳಿಗೆ 5 ಲಕ್ಷ ರು ಅನುದಾನವನ್ನು ಪ್ರಸಕ್ತ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ.

ಸುವರ್ಣ ಕುರಿ ತಳಿ ಬೇಡಿಕೆ
ನಿಂಬಾಳ್ಕರ್ ಕೃಷಿ ಸಂಶೋಧನಾ ಕೇಂದ್ರದಿಂದ ಹುಟ್ಟಿಕೊಂಡ ನಾರಿ ಸುವರ್ಣ ಕುರಿ ತಳಿ ಬೇಡಿಕೆ ಪಡೆದುಕೊಳ್ಳುತ್ತಿದೆ. ಡೆಕ್ಕನಿ, ಕೆಂಗುರಿ, ಹಾಸನ್ ತಳಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಮಂಡ್ಯ, ಚಿತ್ರದುರ್ಗ, ಹಾವೇರಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಳಿ ಅಭಿವೃದ್ಧಿ ಕೇಂದ್ರಗಳಿವೆ












Click it and Unblock the Notifications