Karnataka Election: ಬೆಂಗಳೂರಿನಲ್ಲಿ ಕೋಟಿ ಕೋಟಿ ಹಣ, ಹಲವು ಕೋಟಿ ಮೌಲ್ಯದ ವಸ್ತುಗಳ ವಶಪಡಿಸಿಕೊಂಡ ಚುನಾವಣಾಧಿಕಾರಿಗಳು
ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಸಮೀಪವಾಗುತ್ತಿದ್ದು ಚುನಾವಣಾ ಅಖಾಡ ರಂಗೇರುತ್ತಿದೆ. ಎಲ್ಲಾ ಪಕ್ಷಗಳು ಈಗಾಗಲೇ ತಾವು ಗೆದ್ದರೆ ಜನತೆಗೆ ಏನೆಲ್ಲಾ ಕೆಲಸ ಮಾಡ್ತೀವಿ ತಮ್ಮ ಆಶ್ವಾಸನೆಗಳನ್ನು ನೀಡಿದ್ದಾರೆ. ಅದರ, ಜೊತೆಗೆ ಮತದಾನದ ದಿನಾಂಕ ಸಮೀಪವಾದಂತೆ ಅಭ್ಯರ್ಥಿಗಳು ಕೂಡ ಮತದಾರರಿಗೆ ಆಮಿಷಗಳನ್ನು ಒಡ್ಡಲು ಯತ್ನಿಸುತ್ತಾರೆ, ಚುನಾವಣಾಧಿಕಾರಿಗಳು ಇಂತಹ ಅಕ್ರಮದ ವಿರುದ್ಧ ಕಣ್ಣಿಟ್ಟಿದ್ದು ಬೆಂಗಳೂರಿನಲ್ಲೇ ಹಲವು ಕೋಟಿ ಹಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪೊಲೀಸರು, ಚುನಾವಣಾಧಿಕಾರಿಗಳು ಸಖತ್ ಅಲರ್ಟ್ ಆಗಿದ್ದಾರೆ. ಅಕ್ರಮವಾಗಿ ಸಾಗಾಣೆ ಮಾಡುತ್ತಿದ್ದ ಹಣ, ಹೆಂಡ, ಮಾದಕ ದ್ರವ್ಯ, ಚಿನ್ನ, ಬೆಳ್ಳಿಯ ವಸ್ತುಗಳು, ಆಭರಣಗಳು, ವಿವಿಧ ರೀತಿಯ ಉಡುಗೊರೆಗಳು ಮತ್ತು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 22ರವರೆಗೆ 76,30,86,056 ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ 1,873 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ. ಇದುವರೆಗೂ ಬೆಂಗಳೂರಿನಲ್ಲಿ ವಶಪಡಿಸಿಕೊಳ್ಳಲಾದ ಹಣ ಮತ್ತು ಇತರೆ ವಸ್ತುಗಳ ಬಗ್ಗೆ ವಿವರಗಳನ್ನು ಕರ್ನಾಟಕ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ವಶಪಡಿಸಿಕೊಂಡ ನಗದು ಮತ್ತು ವಸ್ತುಗಳ ವಿವರ
ಬೆಂಗಳೂರು ಒಂದರಲ್ಲೇ ಇದುವರೆಗೆ ಚುನಾವಣಾ ಅಕ್ರಮಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು 11,35,88,541 ರುಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು, 25,91,58,127 ರುಪಾಯಿ ಮೌಲ್ಯದ 5,95,684 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆತಂಕಕಾರಿ ವಿಚಾರವೆಂದರೆ, 10,26,86,663 ರುಪಾಯಿ ಮೌಲ್ಯದ 377 ಕೆ.ಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದಾರೆ.
17,09,97,039 ರುಪಾಯಿ ಮೌಲ್ಯದ 291 ಕೆ.ಜಿ. ಚಿನ್ನ ಮತ್ತು ಬೆಳ್ಳಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. 5,74,14,592 ರುಪಾಯಿ ಮೌಲ್ಯದ ವಿವಿಧ ಬಗೆಯ 49937 ಉಡುಗೊರೆಯ ವಸ್ತುಗಳು ವಶಕ್ಕೆ ಪಡೆದುಕೊಂಡಿದ್ದಾರೆ. 5,88,81,040 ರುಪಾಯಿ ಮೌಲ್ಯದ ವಿವಿಧ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಅಂತಿಮ ದಿನಾಂಕ ಮುಕ್ತಾಯವಾಗಿದ್ದು, ನಾಮಪತ್ರ ವಾಪಸ್ ತೆಗೆದುಕೊಳ್ಳಲು ಸೋಮವಾರ ಕೊನೆಯ ದಿನವಾಗಿದೆ. ಸೋಮವಾರದ ನಂತರ ಕಣದಲ್ಲಿ ಯಾರೆಲ್ಲಾ ಉಳಿಯಲಿದ್ದಾರೆ ಎನ್ನುವ ಸ್ಪಷ್ಟತೆ ಸಿಗಲಿದ್ದು, ರಾಜಕೀಯ ಅಖಾಡ ಮತ್ತಷ್ಟು ರಂಗೇರುವ ಸಾಧ್ಯತೆ ಇದೆ. ಇದುವರೆಗೂ ಕೋಟಿ ಕೋಟಿ ಮೌಲ್ಯದ ನಗದು, ವಸ್ತುಗಳು, ಉಡುಗೊರೆಗಳನ್ನು ವಶಪಡಿಸಿಕೊಂಡಿದ್ದು, ಮತದಾನದ ದಿನದವರೆಗೆ ಇನ್ನೂ ನೂರಾರು ಕೋಟಿ ಮೌಲ್ಯದ ಹಣ, ಉಡುಗೊರೆಗಳನ್ನು ವಶಪಡಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications