KSRTC: ಓಣಂಗೆ ಬೆಂಗಳೂರಿನಿಂದ ತೆರಳುವವರೇ ಗಮನಿಸಿ: 5 ದಿನ ಹೆಚ್ಚುವರಿ ವಿಶೇಷ್ ಬಸ್‌ಗಳ ಕಾರ್ಯಾಚರಣೆ
ಬೆಂಗಳೂರು: ತಿರು ಓಣಂ ಹಬ್ಬದ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ವತಿಯಿಂದ ವಿಶೇಷ ಸಾರಿಗೆ ವ್ಯವಸ್ಥೆ ಒದಗಿಸಿದೆ. ಕೇರಳದಲ್ಲಿ ನಡೆಯುವ ಅತೀ ದೊಡ್ಡ ಹಬ್ಬವಾದ ಓಣಂಗೆ ಯಾರೆಲ್ಲ ರಾಜಧಾನಿಯಿಂದ ತೆರಳುವವರಿದ್ಧೀರಿ ನಿಮಗೆ ಶುಭ ಸುದ್ದಿ ನೀಡಿದೆ. ನಿರೀಕ್ಷಿತ ಹೆಚ್ಚುವರಿ ದಟ್ಟಣೆ ನಿವಾರಣೆಗೆ ಮತ್ತು ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ವಿಶೇಷ ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿದೆ.
ಇದೇ ತಿಂಗಳು ಆಗಸ್ಟ್ 26 ರಂದು ತಿರು ಓಣಂ ಹಬ್ಬದ ಪ್ರಯುಕ್ತ ಕರ್ನಾಟಕ KSRTC ಸಾರ್ವಜನಿಕ ಅನುಕೂಲಕ್ಕಾಗಿ ಆಗಸ್ಟ್ 21 ರಿಂದ 25ರವರೆಗೆ ಬೆಂಗಳೂರಿನಿಂದ ಕೇರಳ ರಾಜ್ಯದ ವಿವಿಧ ಪಟ್ಟಣ/ ಮಾರ್ಗಗಳಿಗೆ ಹಾಲಿ ಕಾರ್ಯಾಚರಿಸುತ್ತಿರುವ ಸಾರಿಗೆಗಳ ಜೊತೆಗೆ ಹೆಚ್ಚುವರಿಗೆ 90 ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ನಂತರ ಕೇರಳ ರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಆಗಸ್ಟ್ 30 ರಂದು ವಿಶೇಷ ವಾಹನಗಳು ಸಂಚಾರ ನಡೆಸಲಿವೆ ಎಂದು ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ. ಯಾವೆಲ್ಲ ಮಾರ್ಗದಲ್ಲಿ, ಎಲ್ಲಿಂದ ಬಸ್‌ಗಳು ಸಂಚರಿಸಲಿವೆ? ಇಲ್ಲಿದೆ ಮಾಹಿತಿ.

ಬೆಂಗಳೂರು ನಿಲ್ದಾಣಗಳಿಂದ ಬಸ್‌ಗಳ ಸಂಚಾರ
ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಸ್ ನಿಲ್ದಾಣದಿಂದ ಕೇರಳ ರಾಜ್ಯಕ್ಕೆ ಅಂದರೆ ಕಣ್ಣೂರು, ಕೋಜಿಕೋಡ್, ಎರ್ನಾಕುಲಂ, ಪಾಲಕ್ಕಾಡ್, ತ್ರಿಶೂರ್, ಕೊಟ್ಟಾಯಂ, ತಿರುವನಂತಪುರಂ ಮುಂತಾದ ಸ್ಥಳಗಳಿಗೆ ವಿಶೇಷ ವಾಹನಗಳು ಸಂಚರಿಸಲಿವೆ. ಪ್ರತಿಷ್ಠಿತ ಸಾರಿಗೆಗಳನ್ನು ಶಾಂತಿನಗರದಲ್ಲಿನ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ಮಾಡಲು ನಿರ್ಧರಿಸಲಾಗಿದೆ.
ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟುಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‌ನ ಹೆಸರನ್ನು ಗಮನಿಸುವಂತೆ ತಿಳಿಸಲಾಗಿದೆ.
ಟಿಕೆಟ್ ಬುಕ್ ಮಾಡಿ, ರಿಯಾಯಿತಿ ಪಡೆಯಿರಿ
ಇ-ಟಿಕೇಟ್ ಬುಕಿಂಗ್‌ನ್ನು ಸಂಸ್ಥೆ ಅಧಿಕೃತ ವೆಬ್‌ಸೈಟ್ www.ksrtc.karnataka.gov.in ಗೆ ಭೇಟಿ ನೀಡುವ ಮೂಲಕ ಸೀಟು ಕಾಯ್ದಿರಿಸಬಹುದು. ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟು ಕಾಯ್ದಿರಿಸಿದಲ್ಲಿ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೇಟ್‌ನ್ನು ಒಟ್ಟಿಗೆ ಕಾಯ್ದಿರಿಸಿದರೆ ಟಿಕೆಟ್ ದರದಲ್ಲಿ ಶೇಕಡ 10 ರಷ್ಟು ರಿಯಾಯಿತಿ ಪಡೆಯಬಹುದು.
ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ಪುದುಚೆರಿಯಲ್ಲಿ ಇರುವ ಪ್ರಮುಖ ನಗರಗಳಲ್ಲಿ ನಿಗಮದ ಮುಂಗಡ ಆಸನಗಳನ್ನು ಕಾಯ್ದಿರಿಸುವ ಕೌಂಟರ್‌ಗಳಿವೆ. ಇವುಗಳ ಮೂಲಕ ಸಹ ಮುಂಗಡವಾಗಿ ಆಸನಗಳನ್ನು ನಿಗಮದ ಸಾರಿಗೆಗಳಿಗೆ ಕಾಯ್ದಿರಿಸಬಹುದಾಗಿದೆ.
ಪ್ರಸ್ತುತ ಈ ಓಣಂ ವಿಶೇಷ ಹೆಚ್ಚುವರಿ ಸಾರಿಗೆಗಳು ಅವುಗಳು ಹೊರಡುವ ಸ್ಥಳ ಹಾಗೂ ವೇಳಾಪಟ್ಟಿ ವಿವರಗಳನ್ನು ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಅಂತರ್‌ಜಾಲ ವ್ಯವಸ್ಥೆಯಲ್ಲಿ ಹಾಗೂ ನಿಗಮದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಟಿಕೆಟ್ ಬುಕ್ ಮಾಡುವವರ ಸ್ಥಳ, ನಿರ್ಗಮನ ಪಾಯಿಂಟ್ ಗಮನಿಸಿ ಬುಕ್ ಮಾಡುವಂತೆ ತಿಳಿಸಲಾಗಿದೆ.


Click it and Unblock the Notifications
