ಹೋಟೆಲ್‌ಗಳಲ್ಲಿ ಆಹಾರ ಸುರಕ್ಷತೆ ಫೇಲ್; ರಾಜ್ಯಾದ್ಯಂತ ದಾಳಿ ಬೆನ್ನಲ್ಲೇ ಆರೋಗ್ಯ ಇಲಾಖೆ ಖಡಕ್ ರೂಲ್ಸ್ ಜಾರಿ
ಬೆಂಗಳೂರು: ಆಹಾರ ಸುರಕ್ಷತೆ ಮತ್ತು ಎಫ್‌ಎಸ್ ಎಸ್ ಎಐ ನಿಯಮಗಳ ಉಲ್ಲಂಘನೆ ಕಾರಣಕ್ಕೆ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹೋಟೆಲ್, ರೆಸ್ಟೋರೆಂಟ್‌ಗಳ ಮೇಲೆ ದಾಳಿ ಮುಂದುವರಿಸಿದೆ. ಸಾಮಾನ್ಯ ಸೇರಿದಂತೆ ತ್ರಿಸ್ಟಾರ್, ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಬಳಕೆಗೆ ಯೋಗ್ಯವಲ್ಲದ ಮಾಂಸ, ಹಾಲು ಇನ್ನಿತರ ವಸ್ತುಗಳು ಪತ್ತೆಯಾದ ಬೆನ್ನಲ್ಲೆ ಇದೀಗ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇವುಗಳನ್ನು ಪಾಲಿಸದೇ ಹೋದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಆರೋಗ್ಯ ಇಲಾಖೆ ಸಚಿವ ಯು.ಟಿ.ಖಾದರ್ ಅವರು ಎಚ್ಚರಿಕೆ ನೀಡಿದ್ದಾರೆ.
ಕೋಟ್, ಟೈ ಹಾಕಿಕೊಂಡು ದೊಡ್ಡ ದೊಡ್ಡ ಹೋಟೆಲ್‌ಗಳಲ್ಲಿ ನಮ್ಮನ್ನು ಸ್ವಾಗತಿಸುವುದನ್ನು ನೋಡಿ ಬೆರಗಾದವರು ಸಾಕಷ್ಟು ಜನರಿದ್ದಾರೆ. ಆದರೆ ಕಿಚನ್, ದಾಸ್ತಾನು ಕೋಣೆಯನ್ನು ಯಾರು ನೋಡಿರುವುದಿಲ್ಲ. ಊಟಕ್ಕೆ ಏನು ಹಾಕಿ ಕೊಡುತ್ತಾರೆ. ಎಕ್ಸ್‌ಪೈರಿ ಡೇಟ್ ಕುರಿತು ಚಿಂತಿಸದೇ ದೊಡ್ಡ ಹೋಟೆಲ್, ರೆಸ್ಟೋರೆಂಟ್ ಎಂದು ಅಧಿಕ ಹಣ ಪಾವತಿಸಿ ಬರುತ್ತೇವೆ. ಇದೀಗ ಅಂತಹ ಹೋಟೆಲ್‌ಗಳಲ್ಲೇ ಆಹಾರ ಸುರಕ್ಷತೆಗಳ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಇವರೆಲ್ಲ ಗ್ರಾಹಕರನ್ನು ಯಾಮಾರಿಸುತ್ತಿರುವುದು ಅಧಕಾರಿಗಳ ದಾಳಿಯಿಂದ ಗೊತ್ತಾಗಿದೆ.

ಪಾಲಿಸಲೇಬೇಕಾದ ಆರೋಗ್ಯ ಇಲಾಖೆ ಮಾರ್ಗಸೂಚಿಗಳು
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ 2011ರ ನಿಯಾಮಗಳನ್ವಯ ಈ ಕೆಳಕಂಡ ಮಾರ್ಗ ಸೂಚಿಗಳನ್ನು ಸಣ್ಣ ಹೋಟೆಲ್‌ಗಳು, ಧಾಬಾಗಳು, ರೆಸ್ಟೋರೆಂಟ್‌ಗಳು ಹಾಗೂ ಇತರೆ ಆಹಾರ ಸೇವಾ ಕೇಂದ್ರಗಳು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸೂಚಿಸಲಾಗಿದೆ.
* ಆಹಾರ ವ್ಯವಹಾರದ ಪರವಾನಗಿಯನ್ನು ಸಂಸ್ಥೆಯ ಆವರಣದಲ್ಲಿ ಎಲ್ಲರಿಗೂ ಗೋಚರಿಸುವ ಪ್ರಮುಖ ಸ್ಥಳದಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.
* ಆಹಾರ ವ್ಯವಹಾರದ ಪ್ರಕ್ರಿಯೆಗಳು, ಚಟುವಟಿಕೆಗಳು ಅಥವಾ ಇತರೆ ವಿವರಗಳಲ್ಲಿ ಯಾವುದೇ ಬದಲಾವಣೆ/ಮಾರ್ಪಾಡು ಮಾಡಿದಲ್ಲಿ ಸಂಬಂಧಿತ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು.
* ಅಡುಗೆ ಪ್ರದೇಶವನ್ನು ಸದಾ ಸ್ವಚ್ಛವಾಗಿ, ವ್ಯವಸ್ಥಿತವಾಗಿ ನಿರ್ವಹಿಸಬೇಕು.
* ಬಳಸುವ ಕಚ್ಚಾ ಆಹಾರ ಪದಾರ್ಥಗಳು ಉತ್ತಮ ಗುಣಮಟ್ಟದ್ದಾಗಿದ್ದು, ವಿಶ್ವಾಸಾರ್ಹ ಮೂಲದಿಂದ ಖರೀದಿಸಬೇಕು. ಹಣ್ಣು ಮತ್ತು ತರಕಾರಿ ತೊಳೆದೇ ಬಳಸಬೇಕು.
* ಆಹಾರವನ್ನು ಸಮರ್ಪಕವಾಗಿ ತಯಾರಿಸಿ, ಸಂಸ್ಕರಿಸಿ ಮತ್ತು ಸಂಪೂರ್ಣವಾಗಿ ಬೇಯಿಸಬೇಕು.
* ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರ ತಯಾರಿಕೆಯನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕು.
* ಬಳಸಿದ ಅಡುಗೆ ಎಣ್ಣೆಯನ್ನು ಮರುಬಳಕೆ ಮಾಡುವುದನ್ನು ತಪ್ಪಿಸಬೇಕು. ಆಹಾರವನ್ನು ಸಂಪೂರ್ಣವಾಗಿ ಬೇಯಿಸಬೇಕು.
* ಅಡುಗೆಮನೆ ಮತ್ತು ಆಹಾರ ಸೇವಾ ಸಿಬ್ಬಂದಿಯ ವಾರ್ಷಿಕ ವೈದ್ಯಕೀಯ ಆರೋಗ್ಯ/ಫಿಟ್ನೆಸ್ ದಾಖಲೆ ನವೀಕರಿಸಬೇಕು.
* ಬಾಟಲಿ ಪಾನೀಯಗಳು, ಸ್ಟೆರಿಲೈಸ್ ಮಾಡಿದ ಹಾಲು, ಕ್ಯಾನ್ ಆಹಾರ ಮುಂತಾದ ಪ್ಯಾಕೇಜ್ ಮಾಡಿದ ಆಹಾರಗಳ ಪ್ಯಾಕಿಂಗ್/ಸೀಲ್ಗಳು ಹಾನಿಯಾಗದಂತೆ ಸಾಗಣೆ ಸಂದರ್ಭದಲ್ಲಿ ಸರಿಯಾಗಿ ಸಂಗ್ರಹಿಸಬೇಕು.
* ಹೋಟೆಲ್‌ಗಳಿಗೆ ಭೇಟಿ ನೀಡುವ ಸಾರ್ವಜನಿಕರಿಗೆ ಶೌಚಾಲಯದ ಉಚಿತ ಬಳಕೆಗೆ ಅವಕಾಶ ಕಲ್ಪಿಸಬೇಕು.
* ಅಡುಗೆಮನೆ, ಗೋಡೆಗಳು, ನೆಲ ಮತ್ತು ಮೇಲ್ಛಾವಣಿಯನ್ನು ಸ್ವಚ್ಛವಾಗಿ, ಸಮತಟ್ಟಾಗಿ ಮತ್ತು ಉತ್ತಮ ಸ್ಥಿತಿಯಲ್ಲಿ ನಿರ್ವಹಿಸಬೇಕು.
* ಶೀತಲೀಕರಿಸಿದ ಆಹಾರವನ್ನು 4°Cಕ್ಕಿಂತ ಕಡಿಮೆ ತಾಪಮಾನದಲ್ಲಿ ಮತ್ತು ಫ್ರೋಜನ್ ಆಹಾರ ಪದಾರ್ಥಗಳನ್ನು -18°C ತಾಪಮಾನದಲ್ಲಿ ಸಂಗ್ರಹಿಸಬೇಕು.
* ಕಲರ್, ಬಳಸಿದ ಅಡುಗೆ ಎಣ್ಣೆ, ಅವಧಿ ಮೀರಿದ ವಸ್ತುಳನ್ನು ಬಳಸುವಂತಿಲ್ಲ ಎಂಬುದು ಸೇರಿದಂತೆ ಹಲವು ನಿಯಮಗಳನ್ನು ಪಾಲಿಸುವಂತೆ ಸೂಚನೆ ನೀಡಲಾಗಿದೆ.
ಮೇಲ್ಕಂಡ ಆಹಾರ ಸುರಕ್ಷತೆ, ನೈರ್ಮಲ್ಯ, ಸಂಗ್ರಹಣೆ, ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ, ಕೀಟ ನಿಯಂತ್ರಣ ಹಾಗೂ ತಾಪಮಾನ ನಿಯಂತ್ರಣಕ್ಕೆ ಸಂಬಂಧಿಸಿದ ಎಲ್ಲಾ ಕ್ರಮಗಳನ್ನು ಹೋಟೆಲ್‌ಗಳು, ಧಾಬಾಗಳು ಮತ್ತು ಇತರೆ ಆಹಾರ ಸೇವಾ ಸಂಸ್ಥೆಗಳು ಕಡ್ಡಾಯವಾಗಿ ಪಾಲಿಸಬೇಕು. ಅವಧಿ ಮುಗಿದ ಆಹಾರ ಉತ್ಪನ್ನಗಳ ಬಳಕೆ ಅಥವಾ ಸಂಗ್ರಹಣೆ, ಕಳಪೆ ನೈರ್ಮಲ್ಯ, ಆಹಾರ ಕಲುಷಿತಗೊಳ್ಳುವಿಕೆ, ಅಸುರಕ್ಷಿತ ನೀರಿನ ಬಳಕೆ ಅಥವಾ ಆಹಾರ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಕಂಡು ಬಂದಲ್ಲಿ, ನಿಯಮಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ಕೊಟ್ಟಿದೆ.


Click it and Unblock the Notifications
