Bengaluru: ಅಕ್ರಮ ಫ್ಲೆಕ್ಸ್, ಬ್ಯಾನರ್‌ಗೆ ₹ 50,000 ದಂಡ- ಕರ್ನಾಟಕ ಹೈಕೋರ್ಟ್ ಕಡಕ್ ಎಚ್ಚರಿಕೆ
ಬೆಂಗಳೂರು, ಆಗಸ್ಟ್ 02: ಅಕ್ರಮ ಫ್ಲೆಕ್ಸ್ ಹಾವಳಿ ತಡೆಯುವಲ್ಲಿ ವಿಫಲವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ರಾಜ್ಯ ಸರ್ಕಾರವನ್ನು ಕರ್ನಾಟಕ ಹೈಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಈ ವಿಚಾರವಾಗಿ ಸರ್ಕಾರಕ್ಕೆ ಕಠಿಣ ಕ್ರಮದ ಎಚ್ಚರಿಕೆ ನೀಡಿರುವ ಹೈಕೋರ್ಟ್, ಇಂತಹ ಚಟುವಟಿಕೆಗಳನ್ನು ತಡೆಯಲು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಆದೇಶಿಸಿದೆ.

2018ರಲ್ಲಿ ನ್ಯಾಯಾಲಯದ ಆದೇಶದ ಹೊರತಾಗಿಯೂ ನಗರದಾದ್ಯಂತ ಅಕ್ರಮ ಫ್ಲೆಕ್ಸ್‌ಗಳು, ಬ್ಯಾನರ್‌ಗಳು ಮತ್ತು ಹೋರ್ಡಿಂಗ್‌ಗಳನ್ನು ತಡೆಯಲು ವಿಫಲವಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಇದೇ ವೇಳೆ, ಬಿಬಿಎಂಪಿ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
'ಅಕ್ರಮ ಬ್ಯಾನರ್‌ಗಳನ್ನು ತಡೆಯಲು ನಿಮಗೆ ಐದು ವರ್ಷಗಳ ಯೋಜನೆ ಬೇಕೇ? ಅನಧಿಕೃತ ಬ್ಯಾನರ್‌ಗಳನ್ನು ತೆಗೆದುಹಾಕಲು ನೀವು ಶುಭ ಮುಹೂರ್ತಕ್ಕಾಗಿ ಕಾಯುತ್ತಿದ್ದೀರಾ?' ಎಂದು ನ್ಯಾಯಮೂರ್ತಿಗಳಾದ ಪ್ರಸನ್ನ ಬಿ ವರಾಳೆ ಮತ್ತು ಎಂಜಿಎಸ್ ಕಮಲ್ ಅವರಿದ್ದ ಹೈಕೋರ್ಟ್ ಪೀಠ ಹೇಳಿದೆ.
ವಿಧಾನಸಭೆ ಚುನಾವಣೆ ವೇಳೆ 60,000 ಅಕ್ರಮ ಫ್ಲೆಕ್ಸ್‌ಗಳಿದ್ದವು. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಕೇವಲ 134 ದೂರುಗಳನ್ನು ಪರಿಗಣಿಸಲಾಗಿದೆ. 40 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಅಕ್ರಮ ಬ್ಯಾನರ್ ಕಟ್ಟಿರುವ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ ಎಂದು ಹೈಕೋರ್ಟ್ ಸರ್ಕಾರವನ್ನು ಪ್ರಶ್ನಿಸಿದೆ.
'ಫ್ಲೆಕ್ಸ್‌ಗಳು ಮತ್ತು ಬ್ಯಾನರ್‌ಗಳು ಬೆಂಗಳೂರು ಬ್ರ್ಯಾಂಡ್‌ಗೆ ಕಪ್ಪು ಚುಕ್ಕೆಯಾಗಿದೆ. ಹೂಡಿಕೆದಾರರಿಗೆ ನೀವು ಯಾವ ಸಂದೇಶವನ್ನು ರವಾನಿಸುತ್ತೀರಿ? ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ನೋಡಲಾಗುತ್ತಿದೆ' ಎಂದು ನ್ಯಾಯಾಲಯ ಹೇಳಿದೆ.
ನಗರದಲ್ಲಿನ ಪ್ರತಿ ಅಕ್ರಮ ಬ್ಯಾನರ್‌ಗೆ 50 ಸಾವಿರ ದಂಡ ವಿಧಿಸಲಾಗುವುದು ಎಂದು ಬಿಬಿಎಂಪಿ ಮತ್ತು ಸರ್ಕಾರಕ್ಕೆ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ನಗರದಲ್ಲಿನ ಅಕ್ರಮ ಹೋರ್ಡಿಂಗ್‌ಗಳ ಮೇಲೆ ತೆಗೆದುಕೊಂಡ ಕ್ರಮಗಳ ಕುರಿತು ಮೂರು ವಾರಗಳಲ್ಲಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಆದೇಶಿಸಿದೆ.
ಬೆಂಗಳೂರಿನಲ್ಲಿ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಫ್ಲೆಕ್ಸ್‌ಗಳನ್ನು ಹಾಕುವುದು ಸರ್ವೇಸಾಮಾನ್ಯವಾಗಿದೆ. ಈ ಬ್ಯಾನರ್‌ಗಳಿಂದ ನಗರದ ಸೌಂದರ್ಯಕ್ಕೆ ಹಾನಿಯಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದಲ್ಲಿನ ಫ್ಲೆಕ್ಸ್‌ಗಳನ್ನು ತೆಗೆದುಹಾಕುವಂತೆ ಈ ಹಿಂದೆಯೂ ಕರ್ನಾಟಕ ಹೈಕೋರ್ಟ್ ಆದೇಶಿಸಿತ್ತು. ಆದರೆ, ಸರ್ಕಾರ ಹಾಗೂ ಬಿಬಿಪಿಎಂ ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ ಎಂಬುದು ಮೇಲ್ನೊಟಕ್ಕೆ ಗೊತ್ತಾಗುತ್ತದೆ.












Click it and Unblock the Notifications