ಜೂ. 27ರಂದು ಬೆಂಗಳೂರು ನಿರ್ಮಾತೃ ಕೆಂಪೇಗೌಡ ಜಯಂತಿ
ಬೆಂಗಳೂರು, ಜೂನ್ 24 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜೂನ್ 27ರಂದು ಬೆಳಿಗ್ಗೆ 11.30 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಬೆಂಗಳೂರು ನಗರ ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ.
ಕಾರ್ಯಕ್ರಮದ ಉದ್ಫಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ.
ಮಾಜಿ ಪ್ರಧಾನ ಮಂತ್ರಿ ಹಾಗೂ ಹಾಸನ ಲೋಕಸಭಾ ಕ್ಷೇತ್ರದ ಸಂಸದ ಎಚ್.ಡಿ. ದೇವೇಗೌಡ, ಕೇಂದ್ರದ ರಾಸಾಯನಿಕ ಹಾಗೂ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತಕುಮಾರ್, ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ, ವಿಧಾನಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ವಿಧಾನಸಭೆ ಉಪಸಭಾಧ್ಯಕ್ಷ ಶಿವಶಂಕರ್ ರೆಡ್ಡಿ ಅವರು ಭಾಗವಹಿಸಲಿದ್ದಾರೆ.

ಅಂದು ಬೆಳಿಗ್ಗೆ 9.30 ಗಂಟೆಗೆ ಸ್ವಾತಂತ್ರ್ಯ ಉದ್ಯಾನವನದಿಂದ ವಿಧಾನಸೌಧಕ್ಕೆ ನಾಡಪ್ರಭು ಕೇಂಪೇಗೌಡರ ಸ್ತಬ್ಧಚಿತ್ರದೊಂದಿಗೆ ಜಾನಪದ ಕಲಾತಂಡಗಳ ಮೆರವಣಿಗೆಯನ್ನು ಹಾಗೂ ಬೆಳಿಗ್ಗೆ 10.30 ಗಂಟೆಗೆ ಸುಗಮ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ತುಮಕೂರು ಜಿಲ್ಲೆಯ ಹರೀಶ್ ಮತ್ತು ತಂಡದವರಿಂದ ಅರೆವಾದ್ಯ, ಬೆಂಗಳೂರು ಜಿಲ್ಲೆಯ ಕೀರ್ತನ್ ಮತ್ತು ತಂಡದವರಿಂದ ನಂದಿಧ್ವಜ, ಮೈಸೂರು ಜಿಲ್ಲೆಯ ಗಣೇಶ್ ಮತ್ತು ತಂಡದವರಿಂದ ನಗಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅರಸ ಕುಮಾರ್ ಮತ್ತು ತಂಡದವರಿಂದ ಕೀಲು ಕುದುರೆ, ತುಮಕೂರು ಜಿಲ್ಲೆಯ ಎಚ್.ಬಿ. ರಾಜೇಗೌಡ ಮತ್ತು ತಂಡದವರಿಂದ ಪೂಜಾ ಕುಣಿತ ಇರಲಿದೆ.
ಚಾಮರಾಜನಗರ ಜಿಲ್ಲೆಯ ಮಾದಶೆಟ್ಟಿ ಮತ್ತು ತಂಡದವರಿಂದ ಕಂಸಾಳೆ, ಚಿತ್ರದುರ್ಗ ಜಲ್ಲೆಯ ಜಿ.ಎಸ್. ಲಿಂಗರಾಜ ಮತ್ತು ತಂಡದವರಿಂದ ಕೀಲು ಕುದುರೆ, ರಾಮನಗರ ಜಿಲ್ಲೆಯ ಶ್ರೀನಿವಾಸ ಮತ್ತು ತಂಡದವರಿಂದ ಸೋಮನ ಕುಣಿತ, ರಾಮನಗರ ಜಿಲ್ಲೆಯ ಶಿವಣ್ಣ ಅಂಕನಹಳ್ಳಿ ಮತ್ತು ತಂಡದವರಿಂದ ಡೊಳ್ಳು ಕುಣಿತ ಹಾಗೂ ಮೈಸೂರು ಜಿಲ್ಲೆಯ ರಾಜಪ್ಪ ಮತ್ತು ತಂಡದವರಿಂದ ವೀರಗಾಸೆ ಕುಣಿತ ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ.
ಸಚಿವ ಸಂಪುಟದ ಸದಸ್ಯರು, ವಿರೋಧ ಪಕ್ಷದ ನಾಯಕರು ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರು, ಬೃಹತ್ ಬೆಂಗಳೂರು ಮಹಾನಗರಪಾಲಿಕೆ ಮಹಾಪೌರರು ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.












Click it and Unblock the Notifications