ಸಿದ್ದು-ವೇಣುಗೋಪಾಲ್ ಗೆ ಟಾಂಗ್, ಕಾಂಗ್ರೆಸ್ ಒಳಗಿನ ಸಮಸ್ಯೆ ಬಯಲಾಗಿದೆ ಎಂದ ಬಿಎಸ್ ವೈ
ಬೆಂಗಳೂರು, ಜನವರಿ 18: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾದ ಶಾಸಕರ ಸಂಖ್ಯೆ ಮುಖ್ಯ ಅಲ್ಲ. ಶುಕ್ರವಾರ ಮಧ್ಯಾಹ್ನ ಮೂರೂವರೆಗೆ ಆರಂಭವಾಗಬೇಕಿದ್ದ ಸಭೆ ಐದೂವರೆ ಆದರೂ ಒಬ್ಬೊಬ್ಬರನ್ನು ಕರೆಸಿಕೊಂಡು ಸಭೆ ಮಾಡಬೇಕಾದ ದುಃಸ್ಥಿತಿಗೆ ಬಂದಿದೆ ಕಾಂಗ್ರೆಸ್. ಆ ಪಕ್ಷದೊಳಗೆ ಅಸಮಾಧಾನ ಇದೆ ಅನ್ನೋದಿಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪ್ರಶ್ನೆ ಮಾಡಿದರು.
ಮಾಧ್ಯಮಗಳ ಎದುರು ಮಾತನಾಡಿದ ಅವರು, ನಾವು ಬರ ಪರಿಸ್ಥಿತಿಯನ್ನು ಕಡೆಗಣಿಸಿ ರೆಸಾರ್ಟ್ ನಲ್ಲಿ ಇದ್ದೆವು ಅಂತಾರೆ. ಆದರೆ ಕಾಂಗ್ರೆಸ್ ಅವರೇನು ಮಾಡುತ್ತಿದ್ದಾರೆ? ಬಿಜೆಪಿಯ ನೈತಿಕತೆ ಬಗ್ಗೆ ಪ್ರಶ್ನೆ ಮಾಡುವ ವೇಣುಗೋಪಾಲ್ ಹಾಗೂ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಈ ಹಿಂದೆ ಏನು ಮಾಡಿದೆ ಎಂಬುದನ್ನು ತಿಳಿದುಕೊಳ್ಳಲಿ ಎಂದರು.
ದೇಶದಲ್ಲಿ ಆಯಾರಾಂ-ಗಯಾರಾಂ ಸಂಸ್ಕೃತಿ ತಂದವರೇ ಕಾಂಗ್ರೆಸ್ ನವರು ಎಂದು ವಾಗ್ದಾಳಿ ನಡೆಸಿದ ಯಡಿಯೂರಪ್ಪ, ರಾಜ್ಯದಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಜನರನ್ನು ಬೀದಿಗಿಳಿಸಿ, ಹೋರಾಟ ಮಾಡಬೇಕಾಗುತ್ತದೆ. ಕಾಂಗ್ರೆಸ್ ಒಳಗಿನ ಅಸಮಾಧಾನ, ಸಂಕಷ್ಟ ಈಗ ಬಯಲಾಗಿದೆ. ಈಗಲಾದರೂ ಸತ್ಯ ಒಪ್ಪಿಕೊಳ್ಳಲಿ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ಕುಡಿಯುವ ನೀರಿಗೆ ಸಮಸ್ಯೆ ಇದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಈಗಲಾದರೂ ಆ ಕಡೆಗೆ ಗಮನ ನೀಡಲಿ. ರಾಜ್ಯದಾದ್ಯಂತ ಪ್ರವಾಸ ಮಾಡಲಿ ಎಂದರು.

ಇಡೀ ದೇಶ ಅಲ್ಲದೆ ವಿದೇಶಗಳಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಮೆಚ್ಚಿಕೊಂಡಿದ್ದಾರೆ. ಅಂಥ ನಾಯಕರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಬಾರದು. ರಾಜ್ಯದಲ್ಲಿ ಈಗ ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ನಮ್ಮ ಸಂಖ್ಯೆ ನೂರಾ ಆರಾಗಿದೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.












Click it and Unblock the Notifications