ಐದು ಗ್ಯಾರಂಟಿಯ ಕಾಂಗ್ರೆಸ್ ಸರ್ಕಾರ ರೈತರಿಗೆ ದ್ರೋಹ ಮಾಡಿದೆ: ಬಿಜೆಪಿ
ಬೆಂಗಳೂರು, ಜೂನ್ 02: ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದಿದ್ದ ಕಾಂಗ್ರೆಸ್, ಇದೀಗ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ. ಹಾಲಿನ ಪ್ರೋತ್ಸಾಹ ಧನ ಕಡಿತ ಮಾಡಿರುವುದಕ್ಕೆ ಕರ್ನಾಟಕ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಹೈನುಗಾರರ ಪ್ರೋತ್ಸಾಹಧನ ಕಡಿತಗೊಳಿಸುವ ಮೂಲಕ ಅನ್ನದಾತರಿಗೂ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ.
ರೈತರಿಗೆ ಆಸರೆಯಾಗುವ ಹಾಲಿನ ಪ್ರೋತ್ಸಾಹ ಧನವನ್ನು ಕಡಿತಗೊಳಿಸುವ ರೈತವಿರೋಧಿ ಆದೇಶವನ್ನು ಕೂಡಲೆ ಹಿಂಪಡೆಯಬೇಕೆಂದು ಬಿಜೆಪಿ ಎಚ್ಚರಿಸುತ್ತದೆ.

ಬಮುಲ್ ಪ್ರತಿ ಲೀಟರ್ ಹಾಲಿನ ಪ್ರೋತ್ಸಾಹ ಧನ 1.50 ರೂಪಾಯಿ ಕಡಿತ ಮಾಡಿದೆ. ರಾಜ್ಯದ ಅನ್ನದಾತರ ಪರವಾಗಿ ಧ್ವನಿ ಎತ್ತಲು, ಹೋರಾಡಲು ಬಿಜೆಪಿ ಸದಾ ಬದ್ಧವಾಗಿದೆ ಎಂದು ಬಿಜೆಪಿ ಎಚ್ಚರಿಕೆ ನೀಡಿದೆ.
ಬೇಸಿಗೆ ಆರಂಭವಾಗಿದ್ದರಿಂದ ಕಳೆದ ಎರಡು ತಿಂಗಳ ಹಿಂದೆ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (BAMUL) ಪ್ರತಿ ಲೀಟರ್ ಹಾಲಿಗೆ 2. 85 ರೂಪಾಯಿ ವಿಶೇಷ ಪ್ರೋತ್ಸಾಹ ಧನ ಘೋಷಣೆ ಮಾಡಿತ್ತು. ಇದರಿಂದ ಬೇಸಿಗೆ ವೇಳೆ ರಾಸುಗಳಿಗೆ ಹಸಿರು ಮೇವು ಸಿಗದೇ ಹಾಲಿನ ಇಳುವರಿ ಕಡಿಮೆ ಇರುತ್ತದೆ. ಈ ಕಾರಣಕ್ಕೆ ರೈತರಿಗೆ ಅನುಕೂಲವಾಗುವಂತೆ ಸಬ್ಸಿಡಿ ಹೆಚ್ಚಿಸಿತ್ತು.
ಕರ್ನಾಟಕದಲ್ಲಿ ಮಳೆಗಾಲ ಆರಂಭವಾಗುತ್ತಿದೆ. ಇದೀಗ ಬಮುಲ್ ವ್ಯಾಪ್ತಿಯ ವ್ಯಾಪ್ತಿಯ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ ಹಸಿರು ಮೇವಿನ ಲಭ್ಯತೆ ಅಧಿಕವಾಗಿದೆ. ಜಾನುವಾರುಗಳಿಗೆ ಮುಂದಿನ ಬೇಸಿಗೆ ವರೆಗೆ ಸಮೃದ್ಧ ಮತ್ತು ಹಸಿರು ಆಹಾರ ಸಿಗುತ್ತದೆ. ಈ ಸಂಬಂಧ ಬೆಂಗಳೂರು ಜಿಲ್ಲಾ ಸಹಕಾರ ಹಾಲು ಒಕ್ಕೂಟ (BAMUL)1.50 ರೂಪಾಯಿ ಹಾಲಿನ ಪ್ರೋತ್ಸಾಹ ಧನ ಇಳಿಕೆ ಮಾಡಿದ ಆದೇಶ ಹೊರಡಿಸಿದೆ.

ಬಿಜೆಪಿ ವ್ಯಂಗ್ಯ: ಐದು ಗ್ಯಾರಂಟಿ ಜಾರಿ
ಅಧಿಕಾರಕ್ಕೆ ಬಂದ ಕೂಡಲೇ ಕೊಟ್ಟ ಐದೂ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದಿದ್ದ ಕಾಂಗ್ರೆಸ್ ವಿಳಂಬ ಮಾಡುತ್ತಿದೆ ಎಂದು ಬಿಜೆಪಿ ಆರೋಪ ಮಾಡಿತ್ತು. ಇಂದು ಶುಕ್ರವಾರ ಅಂತಿಮ ಹಂತದ ಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ಕಾರದ ಎಲ್ಲ ಪ್ರತಿನಿಧಿಗಳು ಚರ್ಚಿಸಿದ್ದಾರೆ.
ಬಳಿಕ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಸರ್ಕಾರ 'ಯುವನಿಧಿ, ಗೃಹಜ್ಯೋತಿ, ಗೃಹ ಲಕ್ಷ್ಮೀ, ಮಹಿಳೆರಿಗೆ ರಾಜ್ಯಾದ್ಯಂತ ಉಚಿತ ಬಸ್ ಪ್ರಯಾಣ, 200 ಯುನಿಟ್ ವಿದ್ಯುತ್ ಉಚಿತ ಮತ್ತು 10 ಕೇಜಿ ಅಕ್ಕಿ ಉಚಿತ' ಗ್ಯಾರಂಟಿ ಭರವಸೆಗಳನ್ನು ಈಡೇರಿಸಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವು ಇದೆ ಜೂನ್ 11ರಿಂದ ಆರಂಭವಾಗಲಿದೆ. ಗೃಹಲಕ್ಷ್ಮೀ ಯೋಜನೆಯ ಮಾಸಿಕ 2000 ರೂಪಾಯಿ ಲಾಭ ಪಡೆಯಲು ಜೂನ್ 15ರಿಂದ ಜುಲೈ 15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ.












Click it and Unblock the Notifications