ವಿಧಾನಸಭಾ ಚುನಾವಣೆ: ಜೆಡಿಎಸ್ ತೊರೆಯುವ ಬಗ್ಗೆ ಎಟಿ ರಾಮಸ್ವಾಮಿ ಘೋಷಣೆ ಸಾಧ್ಯತೆ
ಮಾಜಿ ಸಚಿವ, ಬಿಜೆಪಿ ನಾಯಕ ಎ ಮಂಜು ಅರಕಲಗೂಡಿನಿಂದ ಸ್ಪರ್ಧಿಸುವ ಬಗ್ಗೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಸುಳಿವು ನೀಡಿದ್ದಾರೆ
ಬೆಂಗಳೂರು, ಫೆಬ್ರವರಿ. 27: ಈ ಬಾರಿ ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಶಾಸಕರನ್ನೇ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಪಕ್ಷ ತೊರೆಯುವ ಸಾಧ್ಯತೆಯಿದ್ದು, ಇಂದು ಅಧಿಕೃತವಾಗಿ ಘೊಷಣೆ ಮಾಡುವ ನಿರೀಕ್ಷೆಯಿದೆ.
ಮಾಜಿ ಸಚಿವ, ಬಿಜೆಪಿ ನಾಯಕ ಎ ಮಂಜು ಅರಕಲಗೂಡಿನಿಂದ ಸ್ಪರ್ಧಿಸುವ ಬಗ್ಗೆ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ ಸುಳಿವು ನೀಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಧಿಕೃತ ಅಭ್ಯರ್ಥಿ ನಾನೇ ಎಂದು ಮಾಜಿ ಸಚಿವ ಎ.ಮಂಜು ಹೇಳಿದ್ದಾರೆ. ಈ ಹಿನ್ನೆಲೆ ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪಕ್ಷ ತೊರೆಯುವ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

ಕಳೆದ ಕೆಲ ದಿನಗಳಿಂದ ಎ.ಟಿ.ರಾಮಸ್ವಾಮಿ ಪಕ್ಷ ಬಿಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಈ ಬ್ಗಗೆ ಅವರೇ ಬಹಿರಂಗವಾಗಿ ಜೆಡಿಎಸ್ ನಾಯಕರ ವಿರುದ್ಧ ಹರಿಹಾಯ್ದಿದ್ದಾರೆ. ಸ್ವಾರ್ಥ ರಾಜಕಾರಣಕ್ಕಾಗಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಹಾಲಿ ಶಾಸಕ ಆರೋಪಿಸಿದ್ದರು. ಹೀಗಾಗಿ ಅವರು ಪಕ್ಷ ಬಿಡುತ್ತಾರೆ ಎಂಬ ಹಿನ್ನೆಲೆಯಲ್ಲಿಯೇ ಮಾಜಿ ಶಾಸಕ ಎ.ಮಂಜುಗೆ ಟಿಕೆಟ್ ಬಗ್ಗೆ ವದಂತಿಗಳು ಆರಂಭವಾಗಿದ್ದವು.
ಈ ಹಿಮದೆ ಮಾತನಾಡಿದ್ದ ಎ.ಟಿ ರಾಮಸ್ವಾಮಿ, "ಇನ್ನೂ ಮುಂದಿನ ರಾಜಕೀಯ ನಡೆ ಕುರಿತು ನಾನು ಯೋಚಿಸಿಲ್ಲ. ಯಾವ ಪಕ್ಷಕ್ಕೆ ಸೇರಬೇಕು ಎಂದು ಸ್ವಂತ ತೀರ್ಮಾನಿಸಿಲ್ಲ. ಕ್ಷೇತ್ರದ ಜನತೆ ಮತ್ತು ಕಾರ್ಯಕರ್ತರು ನನಗೆ ಏನು ಸೂಚಿಸುತ್ತಾರೋ ಅದನ್ನು ಸ್ವೀಕರಿಸುತ್ತೇನೆ" ಎಂದು ಹೇಳಿದ್ದರು. ಆದರೆ, ಬಿಜೆಪಿ ನಾಯಕ ಎ.ಮಂಜು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿರುವ ಕಾರಣ ಬಿಜೆಪಿ ಇವರಿಗೆ ಗಾಳ ಹಾಕಿದೆ ಎಂಬ ಮಾತುಗಳು ಕೇಳಿಬಂದಿವೆ.

ಹಾಸನ ಜಿಲ್ಲೆಯಲ್ಲಿ ಶಿವಲಿಂಗೇಗೌಡರ ಬಳಿಕ ಜೆಡಿಎಸ್ ತೊರೆಯುತ್ತಿರುವ ಮತ್ತೊಬ್ಬ ಪ್ರಭಾವಿ ನಾಯಕ ಎ. ಟಿ ರಾಮಸ್ವಾಮಿ. ಇವರನ್ನ ಬಿಜೆಪಿ ಪಕ್ಷಕ್ಕೆ ಕರೆತರಲು ಬಿಜೆಪಿ ನಾಯಕರು ಒಲವು ತೋರಿದ್ದು, ರಾಷ್ಟ್ರೀಯ ನಾಯಕರು ರಾಜ್ಯಕ್ಕೆ ಆಗಮಿಸಿದ ವೇಳೆ ಎ ಟಿ ರಾಮಸ್ವಾಮಿ ಅವರನ್ನ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಗಾಳ ಹಾಕಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ರಾಮಸ್ವಾಮಿ ಕೂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ.
ಇನ್ನು, ಅರಕಲಗೂಡಿನಿಂದ ನಾನೇ ಜೆಡಿಎಸ್ ಅಭ್ಯರ್ಥಿ ಎಂದಿರುವ ಎ.ಮಂಜು, "ಈ ಹಿಂದಿನ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ವಿರುದ್ಧ ಹೋರಾಡಿದ್ದೇನೆ. ಆದರೆ ನನಗೆ ಗೌಡರ ಕುಟುಂಬದೊಂದಿಗೆ ಯಾವುದೇ ವೈಯಕ್ತಿಕ ಮನಸ್ತಾಪ, ದ್ವೇಷವಿಲ್ಲ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಚರ್ಚಿಸಿ ಟಿಕೆಟ್ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಈ ಕ್ಷೇತ್ರದಿಂದ ಚುನಾವಣೆ ಎದುರಿಸುತ್ತೇನೆ. ಈ ವಿಧಾನಸಭಾ ಚುನಾವಣೆ ತಮಗೆ ಕೊನೆಯ ಚುನಾವಣೆಯಾಗಿದ್ದು, ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ" ಎಂದಿದ್ದಾರೆ.
ಒಟ್ಟಾರೆ, ರಾಜ್ಯವಾಳುವ ಆಸೆಯಲ್ಲಿರುವ ಎಚ್.ಡಿ.ಕುಮಾರಸ್ವಾಮಿ ತಮ್ಮ ಪಕ್ಷದ ಪ್ರಮುಖ ನಾಯಕರನ್ನು ಕಳೆದುಕೊಳ್ಳುತ್ತಿರುವುದು ಚುನಾವಣೆಯಲ್ಲಿ ಒಂಥರಾ ಹಿನ್ನಡೆ ಎನ್ನಲಾಗುತ್ತಿದೆ. ಆದರೂ, ಬಿಜೆಪಿ ಮಾಜಿ ಶಾಸಕ ಎ.ಮಂಜು ಜೆಡಿಎಸ್ ಸೇರುತ್ತಿರುವುದು ಸ್ವಾರ್ಥಕ್ಕಾಗಿ. ಇಂತಹ ಸ್ವಾರ್ಥ ರಾಜಕಾರಣಕ್ಕಾಗಿ ನನ್ನನ್ನು ಬಲಿಪಶು ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.












Click it and Unblock the Notifications