ಕಾಂಗ್ರೆಸ್ ಅಭ್ಯರ್ಥಿ ಆಸ್ತಿ 439 ಕೋಟಿ, ಸ್ವಂತ ಕಾರು ಇಲ್ಲ!
ಬೆಂಗಳೂರು, ಏಪ್ರಿಲ್ 18; ಕರ್ನಾಟಕ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ನಡೆಯುತ್ತಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಬೆಂಗಳೂರಿನ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್. ಎ. ಹ್ಯಾರಿಸ್ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಮೇ 10ರಂದು ಚುನಾವಣೆ ನಡೆಯಲಿದ್ದು, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.
56 ವರ್ಷದ ಎನ್. ಎ. ಹ್ಯಾರಿಸ್ ಹಾಲಿ ಶಾಂತಿನಗರ ಕ್ಷೇತ್ರದ ಶಾಸಕರು. ಈ ಬಾರಿಯ ಚುನಾವಣೆಯಲ್ಲಿಯೂ ಅವರಿಗೆ ಟಿಕೆಟ್ ನೀಡಲಾಗಿದೆ. ಮುಕ್ತ ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಅವರು ಎಂಎ ಪದವಿ ಪಡೆದಿದ್ದಾರೆ. ತಾವು ನಲಪಾಡ್ ಗ್ರೂಪ್ ಆಫ್ ಕಂಪನಿ ವ್ಯವಸ್ಥಾಪಕ ನಿರ್ದೇಶಕರು ಎಂದು ಚುನಾವಣಾಧಿಕಾರಿಗಳಿಗೆ ಸಲ್ಲಿಕೆ ಮಾಡಿರುವ ಪ್ರಮಾಣ ಪತ್ರದಲ್ಲಿ ಎನ್. ಎ. ಹ್ಯಾರಿಸ್ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆ ಮಾಡುವಾಗ ಅವರು 439 ಕೋಟಿ ಆಸ್ತಿಯ ಒಡೆಯರು ಎಂದು ಘೋಷಣೆ ಮಾಡಿಕೊಂಡಿದ್ದಾರೆ. 2018ರ ಚುನಾವಣೆಯಲ್ಲಿ ಅವರು 190.24 ಕೋಟಿ ಆಸ್ತಿ ಘೋಷಿಸಿಕೊಂಡಿದ್ದರು. 2017-18ರಲ್ಲಿ 7.40 ಕೋಟಿ ವಾರ್ಷಿಕ ಆದಾಯ ಇದೆ ಎಂದು ಹ್ಯಾರಿಸ್ ಘೋಷಿಸಿಕೊಂಡಿದ್ದರು. 2021-22ರಲ್ಲಿ ವಾರ್ಷಿಕ ಆದಾಯ 6.48 ಕೋಟಿ ವಾರ್ಷಿಕ ಆದಾಯ ಇದೆ ಎಂದು ಹೇಳಿದ್ದಾರೆ.
ಎನ್. ಎ. ಹ್ಯಾರಿಸ್ ಬಳಿ 167.10 ಕೋಟಿ ಚರಾಸ್ತಿ ಹಾಗೂ 41.82 ಕೋಟಿ ಸ್ಥಿರಾಸ್ತಿ ಇದೆ ಎಂದು ಹೇಳಿಕೊಂಡಿದ್ದಾರೆ. ಪತ್ನಿ ತಾಹೀರಾ ಹ್ಯಾರಿಸ್ ಹೆಸರಿನಲ್ಲಿ 8.27 ಲಕ್ಷ ಚರಾಸ್ತಿ ಹಾಗೂ 41.82 ಕೋಟಿ ಸ್ಥಿರಾಸ್ತಿ ಇದೆ. ಅಚ್ಚರಿಯ ವಿಚಾರವೆಂದರೆ ಎನ್. ಎ. ಹ್ಯಾರಿಸ್ ಮತ್ತು ತಾಹೀರಾ ಹ್ಯಾರಿಸ್ ಬಳಿ ಸ್ವಂತ ಕಾರುಗಳಿಲ್ಲ.

ಸಾಲ ಮತ್ತು ಪ್ರಕರಣಗಳು; ಎನ್. ಎ. ಹ್ಯಾರಿಸ್ 439 ಕೋಟಿ ಆಸ್ತಿಯನ್ನು ಘೋಷಣೆ ಮಾಡಿಕೊಂಡಿದ್ದರೂ ಸಹ 28.29 ಕೋಟಿ ರೂ. ಸಾಲವನ್ನು ಹೊಂದಿದ್ದಾರೆ. ಅಲ್ಲದೇ ಸಿದ್ದಾಪುರ ಠಾಣೆಯಲ್ಲಿ ಶಾಸಕರ ವಿರುದ್ಧ ಅಕ್ರಮವಾಗಿ ಗುಂಪು ಕಟ್ಟಿಕೊಂಡು ಪ್ರತಿಭಟನೆ ಮಾಡಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಎಂದು ಅಫಿಡೆವಿಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.
ಶಾಂತಿ ನಗರ ಕ್ಷೇತ್ರದಲ್ಲಿ ಎನ್. ಎ. ಹ್ಯಾರಿಸ್ 2008, 2013 ಮತ್ತು 2018ರಲ್ಲಿ ಗೆಲುವು ಸಾಧಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಈ ಬಾರಿಯ ಚುನಾವಣೆಗೆ ಟಿಕೆಟ್ ಪಡೆದಿರುವ ಅವರು 4ನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ ಪುತ್ರ ಮೊಹಮ್ಮದ್ ನಲಪಾಡ್ ವಿವಾದದ ನಡುವೆಯೂ ಅವರು 18,205 ಮತಗಳನ್ನು ಪಡೆದು ಜಯಗಳಿಸಿದ್ದರು. ಆ ಮೂಲಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದೇನೆ ಎಂದು ಸಾಬೀತು ಮಾಡಿದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಶಾಂತಿನಗರಕ್ಕೆ ಶಿವಕುಮಾರ್ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಜೆಡಿಎಸ್ ಪಕ್ಷ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ. 2018ರಲ್ಲಿ ಶ್ರೀಧರ್ ರೆಡ್ಡಿ ಅಭ್ಯರ್ಥಿಯಾಗಿದ್ದರು, 13,569 ಮತಗಳನ್ನುಗಳಿಸಿದ್ದರು.












Click it and Unblock the Notifications