ಬೆಂಗಳೂರು - ಎರ್ನಾಕುಲಂ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬೇಡ ಎಂದ ಕನ್ನಡಿಗರು, ಕಾರಣವೇನು ?
Bengaluru Ernakulam vande Bharat Express: ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದಾಗೂ ಬೆಂಗಳೂರು ಮತ್ತು ಕರ್ನಾಟಕಕ್ಕೆ ಏನು ಮಾಡದ ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರು ಇದೀಗ ಕೇರಳಕ್ಕೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಬೆಂಗಳೂರಿನ ಮೇಲೆ ಇನ್ನಷ್ಟು ಒತ್ತಡ ಹಾಕುತ್ತಿದ್ದಾರೆ ಎನ್ನುವ ಚರ್ಚೆ ಮತ್ತೆ ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಬೆಂಗಳೂರು - ಎರ್ನಾಕುಲಂ ನಡುವೆ ಹೊಸ ವಂದೇ ಭಾರತ್ ರೈಲು ಸೇವೆ ಪ್ರಾರಂಭವಾಗುತ್ತಿರುವುದು.
ಕರ್ನಾಟಕದ ಬೆಂಗಳೂರು ಹಾಗೂ ಕೇರಳದ ಎರ್ನಾಕುಲಂ ನಡುವೆ ಹೊಸ ವಂದೇ ಭಾರತ್ ರೈಲು ಯೋಜನೆ ಪ್ರಾರಂಭವಾಗುತ್ತಿದೆ. ಈ ಬಗ್ಗೆ ರಾಜೀವ್ ಚಂದ್ರಶೇಖರ್ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ವ್ಯಕ್ತಿ ಮೂರು ಅವಧಿಗೆ ಕರ್ನಾಟಕದಿಂದ ರಾಜ್ಯಸಭಾ ಸಂಸದರಾಗಿದ್ದರು. ತೇಜಸ್ವಿ ಸೂರ್ಯ ಅವರ ಗುರು ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

ಇದು ತುಂಬಾ ನಾಚಿಕೆಗೇಡಿನ ಸಂಗತಿ, ಉಡುಪಿ - ಮಂಗಳೂರು - ಬೆಂಗಳೂರು ನಡುವೆ ವಂದೇ ಭಾರತ್ ಅಲ್ಲ. ಕರ್ನಾಟಕಕ್ಕೆ ಏನೂ ಇಲ್ಲ, ಬೆಂಗಳೂರು ಕರ್ನಾಟಕದಲ್ಲಿದೆ ಆದರೆ ಕೇರಳಕ್ಕೆ ರೈಲು ಸಿಗುತ್ತಿದೆ. ಎಷ್ಟು ನಾಚಿಕೆಗೇಡಿನ ಸಂಗತಿ ಎಂದು ಕನ್ನಡಿಗರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ರಾಜೀವ್ ಚಂದ್ರಶೇಖರ್ ಅವರು ತಮ್ಮ ಟ್ವೀಟ್‌ನಲ್ಲಿ ಉಲ್ಲೇಖಿಸಿರುವ ಅಂಶವೂ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ತಮಿಳುನಾಡು,ಆಂಧ್ರ ಪ್ರದೇಶ, ತೆಲಂಗಾಣ,ಕೇರಳ, ಬಿಹಾರ, ರಾಜಸ್ಥಾನ ,ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ, ಉತ್ತರ ಪ್ರದೇಶ ಹಾಗೂ ಗುಜರಾತ್ ಎಂದು ಇನ್ನೂ ಯಾವ ರಾಜ್ಯದಿಂದ ಜನರನ್ನು ತಂದು ಬೆಂಗಳೂರಿಗೆ ತುಂಬಿಲ್ಲ ಹೇಳಿ ಅತ್ಲಾಗಿ ಅವ್ರಿಗೂ ರೈಲು ಬಿಡ್ಸಾನ ಎಂದು ಮತ್ತೊಬ್ಬ ಕನ್ನಡಿಗರು ತಮ್ಮ ಆಕ್ರೋಶವನ್ನು ಹೊರ ಹಾಕಿದ್ದಾರೆ.
ರಾಜೀವ್ ಚಂದ್ರಶೇಖರ್ ಟ್ವೀಟ್‌ನಲ್ಲಿ ಏನಿದೆ ?
ಇನ್ನು ಕೇರಳದ ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು, ಧನ್ಯವಾದಗಳು, ಪ್ರಧಾನಿ ಮೋದಿ! ಎರ್ನಾಕುಲಂನಿಂದ ತ್ರಿಶೂರ್ ಮತ್ತು ಪಾಲಕ್ಕಾಡ್ ಮೂಲಕ ಬೆಂಗಳೂರಿಗೆ ವಂದೇ ಭಾರತ್ ರೈಲು ಸೇವೆಗೆ ಅನುಮೋದನೆ ನೀಡಿದ್ದಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆಗಳು. ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಮಲಯಾಳಿಗಳು, ವಿಶೇಷವಾಗಿ ಐಟಿ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹಳ ದಿನಗಳಿಂದ, ಕೇರಳದಿಂದ - ಬೆಂಗಳೂರಿಗೆ ಹೆಚ್ಚಿನ ರೈಲು ಸೇವೆಗಳಿಗೆ ಬಲವಾದ ಬೇಡಿಕೆ ಇದೆ.
ಈ ವಿಷಯವನ್ನು ರೈಲ್ವೆ ಸಚಿವೆ ಶ್ರೀ ಅಶ್ವಿನಿ ವೈಷ್ಣವ್ ಜಿ ಅವರ ಗಮನಕ್ಕೆ ಒಂದು ತಿಂಗಳ ಹಿಂದೆ ತರಲಾಗಿತ್ತು. ಅವರು ತ್ವರಿತ ಮತ್ತು ಅನುಕೂಲಕರ ನಿರ್ಧಾರಕ್ಕಾಗಿ ನಾನು ಅವರಿಗೆ ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ. ಹೊಸ ಸೇವೆ ನವೆಂಬರ್ ಮಧ್ಯಭಾಗದಲ್ಲಿ ಪ್ರಾರಂಭವಾಗಲಿದೆ ಎಂದು ಅವರು ಭರವಸೆ ನೀಡಿದ್ದಾರೆ. ಪ್ರಸ್ತುತ, ಈ ಮಾರ್ಗವು ಹಬ್ಬದ ಋತುವಿನಲ್ಲಿ ಮತ್ತು ವಿಶೇಷ ಸಂದರ್ಭಗಳಲ್ಲಿ ಭಾರೀ ದಟ್ಟಣೆಯನ್ನು ಅನುಭವಿಸುತ್ತದೆ, ಪರ್ಯಾಯ ಸಾರಿಗೆ ವಿಧಾನಗಳನ್ನು ಹುಡುಕುವವರು ಅತಿಯಾದ ದರವನ್ನು ಪಾವತಿಸಬೇಕಾಗುತ್ತದೆ.
ಈ ಹೊಸ ವಂದೇ ಭಾರತ್ ಸೇವೆಯು ಬೆಂಗಳೂರಿಗೆ ಪ್ರಯಾಣಿಸುವ ಮಲಯಾಳಿಗಳಿಗೆ ದೊಡ್ಡ ಪರಿಹಾರವಾಗಲಿದೆ. ಕೇರಳದ ಒಟ್ಟಾರೆ ಮೂಲಸೌಕರ್ಯ ಅಭಿವೃದ್ಧಿಯನ್ನು ಬೆಂಬಲಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದಕ್ಕಾಗಿ ಮತ್ತೊಮ್ಮೆ ಮೋದಿ ಸರ್ಕಾರಕ್ಕೆ ಹೃತ್ಪೂರ್ವಕ ಧನ್ಯವಾದಗಳು ಎಂದು ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ನಮ್ಮ ಬಿಜೆಪಿ ಸಂಸದರೂ ಇದ್ದಾರೆ ಏನು ಮಾಡುತ್ತಿದ್ದಾರೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications