ದಿಲ್ಲಿ ಡೈರಿಯ ಪುಟಗಳು ಪುಸ್ತಕ ಈ ಭಾನುವಾರ
ಬೆಂಗಳೂರು, ಮಾ. 27 : ಹೆಚ್ಚೂಕಡಿಮೆ ಮೂರು ದಶಕಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಕವಯಿತ್ರಿ ರೇಣುಕಾ ನಿಡಗುಂದಿ ಅವರು ದೇಶದ ಹೆಮ್ಮೆಯ ಮಗಳು ದಿಲ್ಲಿಯ ಚಿತ್ರಣವನ್ನು ಪುಸ್ತಕ ರೂಪದಲ್ಲಿ ಮಾರ್ಚ್ 30ರಂದು ಬೆಂಗಳೂರಿನಲ್ಲಿ ನಿಮ್ಮ ಮುಂದಿಡಲಿದ್ದಾರೆ. ಆ ಪುಸ್ತಕದ ಹೆಸರು 'ದಿಲ್ಲಿ ಡೈರಿಯ ಪುಟಗಳು'.
ಅಹರ್ನಿಶಿ ಪ್ರಕಾಶನ ಬಿಡುಗಡೆ ಮಾಡುತ್ತಿರುವ ಈ ಪುಸ್ತಕದಲ್ಲಿ, 1985ರ ಮರಗಟ್ಟುವ ಚಳಿಗಾಲದ ಒಂದು ದಿನ ರೈಲು ನಿಲ್ದಾಣದಲ್ಲಿ ಕಾಲಿಟ್ಟ ಘಳಿಗೆಯಿಂದ ಇಲ್ಲಿಯವರೆಗೆ ತಾವು ಕಂಡ ಜಗತ್ತಿನ ತೊಳಲಾಟಗಳನ್ನು, ತವಕತಲ್ಲಣಗಳನ್ನು, ಸಮೃದ್ಧ ಜೀವನವನ್ನು, ರೇಣುಕಾ ನಿಡಗುಂದಿ ಅವರು ನವಿರಾದ ಕಥೆಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಇಂಥ ಕಥೆಗಳನ್ನು ಓದುವುದೇ ಒಂದು ಸೊಗಸು.
ಚಾಮರಾಜನಗರದ ಸಾಹಿತ್ಯ ಪರಿಷತ್ ಆವರಣದಲ್ಲಿರುವ ಕೃಷ್ಣರಾಜ ಪರಿಷನ್ಮಂದಿರದಲ್ಲಿ, ಮಾ.30 ಭಾನುವಾರ, ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಪುಸ್ತಕ ಪ್ರಸವ ಕಾರ್ಯಕ್ರಮದಲ್ಲಿ ಚಿಂತಕರಾದ ಡಾ. ಸಿ.ಎನ್. ರಾಮಚಂದ್ರನ್, ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನಮಟ್ಟು, ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ಮುಂತಾದವರು ಭಾಗವಹಿಸುತ್ತಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

ಪುಸ್ತಕಕ್ಕೆ ರಹಮತ್ ತರೀಕೆರೆ ಅವರು ಮುನ್ನುಡಿ ಬರೆದಿದ್ದರೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಮುನ್ನ ರೇಣುಕಾ ನಿಡಗುಂದಿ ಅವರು ಬರೆದಿರುವ ಬೆನ್ನುಡಿಯನ್ನು ಒಮ್ಮೆ ಓದಿಬಿಡಿ.
"ನಾನು ದೆಹಲಿಯ ನೆಲದಲ್ಲಿ ಮೊದಲು ಕಾಲಿಟ್ಟಾಗ 1985 ಫೆಬ್ರವರಿ ತಿಂಗಳ ಕಟಕಟಿಸುವ ಚಳಿ. ಹಾಕಿದ್ದ ಒಂದು ಸ್ವೆಟರ್ ಆ ಚಳಿಯನ್ನು ತಾಳುತ್ತಿರಲಿಲ್ಲ. ಶಾಲು ಮೊದಲೇ ಇಲ್ಲ. ರಾತ್ರಿ ನವದೆಹಲಿಯ ರೇಲ್ವೆ ಸ್ಟೇಷನ್ ಇಳಿದು ಮುರ್ನಿಕಾಗೆ ಹೋಗುವ 615 ನಂಬರಿನ ಬಸ್ ಹಿಡಿದು ಕೂತಾಗ ಈ ಅಪರಿಚಿತ ಊರು ಇಷ್ಟು ವರ್ಷಗಳ ಕಾಲ ನನ್ನನ್ನು ಎಲ್ಲೂ ಹೋಗದಂತೆ ಹಿಡಿದಿಡುತ್ತದೆಂಬುದು ಕನಸು ಮನಸಿನಲ್ಲೂ ಇದ್ದಿಲ್ಲ. ಬದುಕಿನ ಕುರಿತು ಯಾವ ಉದ್ದಿಶ್ಯ, ಕನಸುಗಳೂ ಇದುರಿರಲಿಲ್ಲ. ಪತಿಯ ಉದ್ಯೋಗ ನಿಮಿತ್ತ ಬಂದೆವು
ಅಷ್ಟೇ. ರಸ್ತೆ ಈಚೆ ಮುರ್ನಿಕಾ ಎಂಬ ಹಳ್ಳಿ, ರಸ್ತೆಯಾಚೆ ಮಹಾನಗರದ ಔಟರ್ ರಿಂಗ್ ರೋಡ್. ಹಿಂದುಗಡೆ ಜೆಎನ್‌ಯು. ಪಕ್ಕದಲ್ಲಿ ವಸಂತ್ ವಿಹಾರ್. ಜಾಟ್ ಗುಜ್ಜರ್ ರ ಶ್ರೀಮಂತರ ಒರಟುತನ, ಎಮ್ಮೆ ಸಾಕುವುದು, ಹಾಲು ಹೈನು, ಪುಟ್ಟ ಪುಟ್ಟ ಮನೆಗಳನ್ನು ಕಟ್ಟಿ ಪರ ಊರುಗಳಿಂದ ಬಂದವರಿಗೆ ಬಾಡಿಗೆ ಕೊಟ್ಟು ತಮಗೆಲ್ಲ ದೊಡ್ಡ ದೊಡ್ಡ ಬಂಗಲೆಗಳನ್ನು ಕಟ್ಟಿಕೊಂಡವರು. ದುಡಿಯಬೇಕಿಲ್ಲದ ಜಾಟ್ ಗಂಡಸರು ಇಡೀದಿನ ಇಸ್ಪೀಟ್ ಆಡುತ್ತ, ಹೊರಸಿನ ಮೇಲೆ ಕೂತು ಹುಕ್ಕಾ ಸೇದುತ್ತ, ಮಕ್ಕಳು ಕ್ರಿಕೆಟ್ ಆಡುತ್ತ, ದುಃಖ ಮುಚ್ಚಿಕೊಂಡ ಹೆಂಗಸರು ಸೆಗಣಿ ಕುಳ್ಳು ಬಡಿದು ಪಾರ್ಕು, ಫುಟ್ ಪಾತ್ ಎನ್ನದೆ ಒಣಗಲು ಇಟ್ಟಿರುವ ದೃಶ್ಯವೇ ದಿಲ್ಲಿ. ಆಗಾಗ ಟೆರೇಸಿಗೆ ಆಗಮಿಸಿ ಮುದಗೊಳಿಸುತ್ತಿದ್ದ ನವಿಲುಗಳ ಊರು 'ದಿಲ್ಲಿ'".
ಹಾಗೆಯೆ, ದೆಹಲಿ ಬರಹಗಳ ಗುಚ್ಚಕ್ಕೆ ಆಪ್ತವಾದ ಅನಿಸಿಕೆ ಬರೆದುಕೊಟ್ಟ ಆರ್.ಭರತಾದ್ರಿ ಅವರ ಮಾತುಗಳು... ನಿಮ್ಮ ಓದಿಗಾಗಿ ಇಲ್ಲಿದೆ...
"ರೇಣುಕಾ ನಿಡಗುಂದಿ ಅವರ ಲೇಖನಗಳು ಪುಸ್ತಕರೂಪದಲ್ಲಿ ಬರುತ್ತಿರುವುದು ಸಂತಸದ ಸಂಗತಿ. ಈ ಲೇಖನಗಳು ದೆಹಲಿಯಲ್ಲಿನ ಅವರ ಸ್ಪಂದನಗಳು ; ಆಗಾಗ್ಗೆ ಹೊರ ಒಳ ಸುಳಿವುಗಳಲ್ಲಿ ಸಿಕ್ಕಿಹಾಕಿಕೊಂಡಾಗ ಮೂಡಿಬಂದ ತೊಳಲಾಟಗಳು ; ಕಾಣದ ಊರಿನಲ್ಲಿ ಏನನ್ನೋ ಕಾಣುವ ತವಕಗಳು. ದೆಹಲಿ- ಕೇವಲ ನಗರವಲ್ಲ, ಶತಶತಮಾನಗಳ ನೆನಪುಗಳ ಕಣಜ. ಇಲ್ಲಿನ ಇತಿಹಾಸವೂ ರೋಚಕ ಹಾಗೂ ಭಯಾನಕ.
ದೆಹಲಿಯ ಭೂಮಿ ಕುಡಿದಿರುವಷ್ಟು ನೆತ್ತರನ್ನು ಬಹುಶಃ ದೇಶದ ಯಾವ ನಗರಗಳೂ ಕುಡಿದಿಲ್ಲ. ಹಾಗೇ ಸೂಫಿಸಂತರ ಪ್ರೇಮದಿಂದಲೂ ಈ ನೆಲ ತನ್ನದೇ ಆದ ಸೊಗಡನ್ನು ಪಡೆದಿದೆ. ಪ್ರಭುತ್ವ ದೆಹಲಿಯ ಪ್ರಮುಖ ವ್ಯಕ್ತಿತ್ವ. ಈ ಪ್ರಭುತ್ವದ ಆಕರ್ಷಣೆಯಿಂದಲೇ ಇಲ್ಲಿ ಮಾರಣಹೋಮ ನಡೆದಿದೆ, ನಡೆಯುತ್ತಿದೆ. ಇಲ್ಲಿನ ಜನರೂ ಅಷ್ಟೇ, ಎಲ್ಲೋ ಬಾಂಬ್ ಸ್ಪೋಟವಾಯಿತೆಂದರೆ ಕ್ಷಣಕಾಲ ಗಾಭರಿಯಾಗಿ ನಂತರ 'ಠೀಕ್ ಹೈ' ಎಂದು ಮಾಮೂಲಾಗಿಬಿಡುತ್ತಾರೆ. ಸಾವು ಇವರನ್ನು ಕಾಡುವುದಿಲ್ಲ. ನೋವು ಇವರನ್ನು ಬಾಧಿಸುವುದಿಲ್ಲ.
ಆದರೆ ಈ ನೆಲಕ್ಕೆ ಅಪರೂಪವಾಗಿ ಬೀಳುವ ಮಳೆ ಅರ್ಭಟಿಸಿತೆಂದರೆ 'ಬಾರಿಶ್, ತೇಜ್ ಬಾರಿಶ್' ಎಂದು ದಿಕ್ಕಾಪಾಲಾಗಿ ಓಡುತ್ತಾರೆ! ಕ್ರೌರ್ಯ, ದರ್ಪ ಹಾಗೂ ದೌಲತ್ತುಗಳನ್ನು ಸದಾ ಈ ಊರಿನಲ್ಲಿ ನೋಡಬಹುದು. ಆದರೆ ಸ್ವಲ್ಪ ಆಸ್ಥೆಯಿಂದ, ಪ್ರೀತಿಯಿಂದ, ತೆರೆದ ಮನದಿಂದ ಹೆಜ್ಜೆಯಿಟ್ಟರೆ ದೆಹಲಿಯೊಳಗಣ ಅಕ್ಕರೆಯ ದೆಹಲಿಯನ್ನೂ ನೋಡಬಹುದು ; ಇಲ್ಲಿನ ನೋವಿಗೆ ಸ್ಪಂದಿಸಬಹುದು ; ಇಲ್ಲಿನ ಆತಂಕಗಳಿಗೆ ಪ್ರೇಮದ ಸ್ಪರ್ಶ ಮಾಡಬಹುದು ; ಇಲ್ಲಿನ ರೋಚಕತೆಗೆ ಬೆರಗಾಗಬಹುದು.
ಬಹುಶಃ ಕೆಲವೇ ಕೆಲವರು ಕೈಗೊಳ್ಳುವ ಈ 'ಪಯಣ'ದಲ್ಲಿ ಪಯಣಿಗರಾಗಿ ರೇಣುಕಾ ನಿಡಗುಂದಿ ತಮ್ಮ ಅಪೂರ್ವ ಗ್ರಹಿಕೆಯನ್ನು ಅತ್ಯುತ್ತಮ ರೀತಿಯಲ್ಲಿ ದಾಖಲಿಸಿದ್ದಾರೆ. ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು."
ಪುಸ್ತಕ ಬಿಡುಗಡೆ ವಿವರ ಇನ್ನೊಮ್ಮೆ
ಪುಸ್ತಕ : ದಿಲ್ಲಿ ಡೈರಿಯ ಪುಟಗಳು
ಕರ್ತೃ : ರೇಣುಕಾ ನಿಡಗುಂದಿ
ಸ್ಥಳ : ಕೃಷ್ಣರಾಜ ಪರಿಷನ್ಮಂದಿರ, ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು.
ದಿನಾಂಕ : 30ನೇ ಮಾರ್ಚ್, 2014
ಸಮಯ : ಬೆಳಿಗ್ಗೆ 10.30 (ಉಪಾಹಾರ ಇರುತ್ತದಾ? ಗೊತ್ತಿಲ್ಲ)












Click it and Unblock the Notifications