ಒಕ್ಕಲಿಗ ಭವನದಲ್ಲಿ ಜೆಡಿಎಸ್ ಕಚೇರಿ ಆರಂಭ?
ಬೆಂಗಳೂರು, ಫೆ.4 : ಬೆಂಗಳೂರಿನಲ್ಲಿ ಕಚೇರಿಗಾಗಿ ಜಾಗ ಹುಡುಕುತ್ತಿರುವ ಜೆಡಿಎಸ್ ಪಕ್ಷ ಒಕ್ಕಲಿಗರ ಭವನದಲ್ಲಿ ಕಚೇರಿ ಆರಂಭಿಸಲು ಮುಂದಾಗಿದೆ. ಇದು ಒಕ್ಕಲಿಗರ ಸಂಘದ ಸದಸ್ಯರಲ್ಲಿನ ಅಸಮಾಧಾನಕ್ಕೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಒಕ್ಕಲಿಗರ ಸಂಘದ ಜಾಗದಲ್ಲಿ ಪಕ್ಷದ ಕಚೇರಿ ಪ್ರಾರಂಭಿಸಲು ಅವಕಾಶ ನೀಡಿದರೆ ಜನರಿಗೆ ಹಾಗೂ ಒಕ್ಕಲಿಗ ಜನಾಂಗಕ್ಕೆ ತಪ್ಪು ಸಂದೇಶ ನೀಡದಂತೆ ಆಗುತ್ತದೆ. ಆದ್ದರಿಂದ, ಜೆಡಿಎಸ್ ಜೆಡಿಎಸ್ ಕಚೇರಿ ತೆರೆಯಲು ಅವಕಾಶ ನೀಡಬಾರದು ಎಂದು ಕೆಲವು ಸದಸ್ಯರು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ ಒಕ್ಕಲಿಗರ ಸಂಘದ ನಿರ್ದೇಶಕ ಸಭೆ ನಡೆಯಲಿದ್ದು, ಸಭೆಯಲ್ಲಿ ಕಚೇರಿ ಆರಂಭಿಸಲು ಜೆಡಿಎಸ್ ಪಕ್ಷಕ್ಕೆ ಸ್ಥಳ ನೀಡುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಈಗಾಗಲೇ ಹಡ್ಸನ್ ವೃತ್ತದ ಬಳಿಯ ಒಕ್ಕಲಿಗರ ಭವನಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. [ಕಚೇರಿಗಾಗಿ ಶೆಡ್ ನಿರ್ಮಾಣ]
ಸದಸ್ಯರ ವಾದವೇನು? : ಒಕ್ಕಲಿಗರ ಸಂಘ ಒಂದು ಜನಾಂಗವನ್ನು ಪ್ರತಿನಿಧಿಸುವ ಸಂಸ್ಥೆ. ಅದು ಯಾವುದೇ ಪಕ್ಷಕ್ಕೆ ಸೇರಿದ್ದಲ್ಲ. ಸಮಾಜದ ಉದ್ಧಾರಕ್ಕಾಗಿ ಸಂಘವನ್ನು ಸ್ಥಾಪಿಸಲಾಗಿದೆ. ಆದ್ದರಿಂದ ಪಕ್ಷದ ಕಚೇರಿ ತೆರೆಯಲು ಅವಕಾಶ ನೀಡಬಾರದು ಎಂಬುದು ಕೆಲವು ಸದಸ್ಯರ ವಾದ. [ಜೆಡಿಎಸ್ ಕಾನೂನು ಹೋರಾಟ ಅಂತ್ಯ]
ಸಂಘದ ಕಚೇರಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಲು ಎರಡು ವರ್ಷಗಳ ಹಿಂದೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ಕಟ್ಟಡದಲ್ಲಿದ್ದ ಬಾಡಿದಾರರನ್ನು ಖಾಲಿ ಮಾಡಿಸಲಾಗಿದೆ. ಈಗ ಜೆಡಿಎಸ್ ಕಚೇರಿ ಆರಂಭವಾದರೆ, ಆಸ್ಪತ್ರೆ ನಿರ್ಮಾಣ ಕಾರ್ಯ ವಿಳಂಬವಾಗಲಿದೆ ಎಂದು ಸದಸ್ಯರು ಹೇಳುತ್ತಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಕಾಂಗ್ರೆಸ್ ಪಕ್ಷಕ್ಕೆ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಚೇರಿಯನ್ನು ಜೆಡಿಎಸ್ ಬಿಟ್ಟು ಕೊಡಬೇಕಿದೆ. ಸದ್ಯ ಬೆಂಗಳೂರಿನಲ್ಲಿ ಕಚೇರಿಗಾಗಿ ಜಾಗ ಹುಡುಕುತ್ತಿರುವ ಜೆಡಿಎಸ್ ಒಕ್ಕಲಿಗೆ ಭವನದಲ್ಲಿ ತಾತ್ಕಾಲಿಕವಾಗಿ ಕಚೇರಿ ತೆರೆಯುವ ಸಾಧ್ಯತೆ ಇದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚೌಡಯ್ಯ ಮೆಮೋರಿಯಲ್ ಹಿಂಭಾಗ ಜೆಡಿಎಸ್‌ಗೆ ಕಚೇರಿ ನಿರ್ಮಿಸಲು ಭೂಮಿ ನೀಡಿದೆ. ಆದರೆ, ಬಿಬಿಎಂಪಿ ಕೈಗೊಂಡಿದ್ದ ನಿರ್ಣಯಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದು, ಕಾಮಗಾರಿ ಆರಂಭಿಸದಂತೆ ಆದೇಶ ನೀಡಿದೆ.












Click it and Unblock the Notifications