'ಸದ್ಯಕ್ಕೆ ರಾಜಕೀಯ ನಿವೃತ್ತಿ ಹೊಂದಲ್ಲ: 24X7 ರಾಜಕಾರಣಿ'
ಬೆಂಗಳೂರು, ಮೇ. 18: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ, ಹಾಸನ ಕ್ಷೇತ್ರದ ಸಂಸದ ಎಚ್.ಡಿ.ದೇವೇಗೌಡ ಅವರು ಭಾನುವಾರ 83ನೇ ವಸಂತಕ್ಕೆ ಕಾಲಿರಿಸಿದ್ದಾರೆ. ದೇಶದ 24X7 ರಾಜಕಾರಣಿಗಳ ಪೈಕಿ ಅಗ್ರ ಪಂಕ್ತಿಯಲ್ಲಿ ಗುರುತಿಸಬಹುದಾದ ದೇವೇಗೌಡ ಅವರ ಹೋರಾಟದ ಬದುಕು ಯುವ ರಾಜಕಾರಣಿಗಳಿಗೆ ಮಾದರಿ. 'ಸದ್ಯಕ್ಕೆ ನಾನು ರಾಜಕೀಯ ನಿವೃತ್ತಿ ಹೊಂದುವುದಿಲ್ಲ' ಎಂದು ಗೌಡರು ಘೋಷಿಸಿದ್ದಾರೆ.
ಈ ಬಾರಿ ಹುಟ್ಟುಹಬ್ಬದ ಪ್ರಯುಕ್ತ ದೇವೇಗೌಡರು ಕುಟುಂಬ ಸಮೇತ ಪವಿತ್ರ ಧಾರ್ಮಿಕ ಕ್ಷೇತ್ರವಾದ ತಿರುಪತಿಗೆ ತೆರಳಿ ತಿಮ್ಮಪ್ಪನ ದರ್ಶನ ಪಡೆದಿದ್ದು ವಿಶೇಷ. ದೇವೇಗೌಡರ ಪತ್ನಿ ಚನ್ನಮ್ಮ ದೇವೇಗೌಡ, ಪುತ್ರಿ ಸೇರಿದಂತೆ ಕುಟುಂಬ ಸದಸ್ಯರು ತಿರುಪತಿಗೆ ತೆರಳಿ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆದು ಪುನೀತರಾದರು. ಬಳಿಕ ಬೆಂಗಳೂರಿಗೆ ಮಧ್ಯಾಹ್ನ ನಂತರ ಆಗಮಿಸಿದರು.

ರಾಜಕೀಯ ನಿವೃತ್ತಿ ಇಲ್ಲ: ಮೋದಿ ಒಳ್ಳೆ ಕೆಲಸ ಮಾಡಿದರೆ ಖಂಡಿತವಾಗಿಯೂ ಅಭಿನಂದಿಸುತ್ತೇನೆ. ರೈತರು ಹಾಗೂ ಅಲ್ಪಸಂಖ್ಯಾತರ ಹಿತ ಕಾಯುವುದು ಮುಖ್ಯ, ಲೋಕಸಭೆ ಒಳಗೂ ಹೊರಗೂ ನನ್ನ ಹೋರಾಟ ಜಾರಿಯಲ್ಲಿರುತ್ತದೆ. ಸದ್ಯಕ್ಕೆ ರಾಜಕೀಯ ನಿವೃತ್ತಿ ಇಲ್ಲ ಮುಂದಿನ ವಿಧಾನಸಭೆ ಚುನಾವಣೆವರೆಗೂ ಸಕ್ರಿಯವಾಗಿರುವೆ, ಜೆಡಿಎಸ್ ಅಧಿಕಾರಕ್ಕೆ ತರಲು ಯತ್ನಿಸುವೆ, ಲೋಕಸಭೆ ಚುನಾವಣೆ ವ್ಯಾಮೋಹ ಇನ್ನಿಲ್ಲ ಎಂದು ದೇವೇಗೌಡ ಅವರು ಹೇಳಿದರು.
ಬಿಳಿ ಪಂಚೆ, ಜುಬ್ಬ, ಹಣೆಯ ಮೇಲೆ ಕುಂಕುಮ, ಸರಳ ಆಹಾರ ಪದ್ಧತಿ, ಸರಳ ಜೀವನ ಶೈಲಿ ಜತೆಗೆ ಅಗಾಧವಾದ ಹೋರಾಟದ ಹಿನ್ನೆಲೆಯುಳ್ಳ ದೇವೇಗೌಡ ಅವರು ರಾಷ್ಟ್ರಮಟ್ಟದ ರಾಜಕಾರಣಿಯಾಗಿ ಬೆಳೆದ ದೇವೇಗೌಡರಿಗೆ ಸದ್ಯಕ್ಕೆ ಚುನಾವಣೆ ಸೋಲು ಅರಗಿಸಿಕೊಳ್ಳಲು ಸ್ವಲ್ಪ ಸಮಯಬೇಕಾಗಿದೆ. ತೃತೀಯ ರಂಗ, ಸರ್ಕಾರ ರಚನೆ, ಹೆಚ್ಚಿನ ಸೀಟು ನಿರೀಕ್ಷೆಯಲ್ಲಿದ್ದ ಜೆಡಿಎಸ್ ಲೆಕ್ಕಾಚಾರ ತಲೆಕೆಳಗಾಗಿದೆ.
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಎಚ್.ಡಿ.ರೇವಣ್ಣ, ಪಕ್ಷದ ಮುಖಂಡರು, ಶಾಸಕರು, ಅಭಿಮಾನಿಗಳು ಸೇರಿದಂತೆ ಮತ್ತಿತರರು ಹುಟ್ಟುಹಬ್ಬದ ಶುಭ ಕೋರಿದರು.
ಗೌಡರ ಹುಟ್ಟುಹಬ್ಬದ ಪ್ರಯುಕ್ತ ಅಖಿಲ ಕರ್ನಾಟಕ ಒಕ್ಕಲಿಗರ ಹಿತರಕ್ಷಣಾ ಕೇಂದ್ರ ಸಮಿತಿ ಹಾಗೂ ಪಕ್ಷದ ಮುಖಂಡರು ಬೆಂಗಳೂರಿನ ಮಾಗಡಿರಸ್ತೆಯಲ್ಲಿರುವ ಕುಷ್ಠರೋಗ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು, ಕಂಬಳಿ ವಿತರಿಸಿದರು. ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಿಸಿದರೆ, ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್‌ಗಳನ್ನು ವಿತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿದರು. ಇದೇ ರೀತಿ ರಾಜ್ಯದ ನಾನಾ ಭಾಗಗಳಲ್ಲಿ ದೇವೇಗೌಡರ ಹುಟ್ಟುಹಬ್ಬವನ್ನು ಆಚರಿಸಿದ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.












Click it and Unblock the Notifications