ಹಾಸನ ಟಿಕೆಟ್: ಸಂಧಾನ ಸಭೆಯಲ್ಲಿ ದೇವೇಗೌಡರಿಂದ ರೇವಣ್ಣಗೆ ಶಾಕ್, ಕಾರ್ಯಕರ್ತನತ್ತ ಒಲವು, ಟಿಕೆಟ್ ಘೋಷಣೆ ಶೀಘ್ರ
ಬೆಂಗಳೂರು, ಏಪ್ರಿಲ್ 02: ಹಾಸನ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನಿಂದ ಟಿಕೆಟ್ ಹಂಚಿಕೆಯ ಬಿಕ್ಕಟ್ಟು ಶಮನ ಬಹುತೇಕ ಅಂತಿಮ ಹಂತಕ್ಕೆ ಬಂದು ತಲುಪಿದೆ. ಸಂಧಾನ ಸಭೆ ನಡೆಸಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಟಿಕೆಟ್‌ಗೆ ಪಟ್ಟು ಹಿಡಿದಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣನವರಿಗೆ ಬಿಗ್ ಶಾಕ್ ನೀಡಿದ್ದಾರೆ.
ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ದೇವೇಗೌಡರ ಪುತ್ರರಾದ ರೇವಣ್ಣ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಮಧ್ಯೆ ವಾಗ್ವಾದಕ್ಕೆ ಕಾರಣವಾಗಿತ್ತು. ರಾಜ್ಯ ರಾಜಕಾರಣದ ಅಂಗಳದಲ್ಲಿ ಜೆಡಿಎಸ್ ಸಹೋದರರ ವೈಮನಸ್ಸು ಚರ್ಚೆ ಹುಟ್ಟು ಹಾಕಿತ್ತು. ಜೆಡಿಎಸ್ ಪಕ್ಷದೊಳಗಿನ ಶೀತಲ ಸಮರ ಇನ್ನೇನು ತಾರಕಕ್ಕೇರಿತು ಅನ್ನುವಷ್ಟರಲ್ಲಿ ದೇವೇಗೌಡರು ಬೆಂಗಳೂರಿನಲ್ಲಿ ಸಂಧಾನ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ಹಾಸನ ಕ್ಷೇತ್ರದ ಟಿಕೆಟ್ ಅನ್ನು ಸಾಮಾನ್ಯ ಕಾರ್ಯಕರ್ತರಿಗೆ ನೀಡಬೇಕು ಎಂಬುದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ನಿರ್ಧಾರ. ಆದರೆ ತಮ್ಮ ಪತ್ನಿ ಭವಾನಿಗೆ ನೀಡಬೇಕು ಎಂಬುದು ರೇವಣ್ಣನವರ ವಾದ, ಇದರಿಂದಲೇ ಒಳಗೊಳಗೇ ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗಿತ್ತು.
ರೇವಣ್ಣ ಮತ್ತವರ ಅನುಯಾಯಿಗಳು ಹಾಗೂ ಕ್ಷೇತ್ರದ ಜೆಡಿಎಸ್ ಪ್ರಮುಖರ ಜೊತೆಗೆ ಸಭೆ ನಡೆಸಿದ ದೇವೇಗೌಡರು ಕುಮಾರಸ್ವಾಮಿಯವರ ನಿರ್ಧಾರವನ್ನು ಎತ್ತಿಹಿಡಿದಿದ್ದಾರೆ. ಈ ಮೂಲಕ ಮತ್ತೊಬ್ಬ ಪುತ್ರ ಎಚ್.ಡಿ.ರೇವಣ್ಣನವರಿಗೆ ಬಿಗ್ ಶಾಕ್ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ರೇವಣ್ಣಗೆ ಹಿನ್ನಡೆ: ಸ್ವರೂಪ್‌ಗೆ ಟಿಕೆಟ್ ಸಾಧ್ಯತೆ
ಹಾಸನ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಪತ್ನಿ ಭವಾನಿ ಪರವಾಗಿ ಸವಾಲೆಸೆದಿದ್ದ ಹೆಚ್.ಡಿ ರೇವಣ್ಣ ಅವರಿಗೆ ದೇವೇಗೌಡರ ಈ ನಿರ್ಧಾರದಿಂದ ಭಾರೀ ಹಿನ್ನಡೆಯಾಗಿದೆ. ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಕುಟುಂಬದವರಿಗೆ ಟಿಕೆಟ್ ನೀಡುತ್ತಿದ್ದರೆ ಅದು ರಾಜ್ಯ ರಾಜಕಾರಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕುರಿತು ದೇವೇಗೌಡರು ರೇವಣ್ಣ, ಮತ್ತವರ ಮಕ್ಕಳಿಗೆ ತಿಳಿ ಹೇಳಿದ್ದಾರೆ ಎನ್ನಲಾಗಿದೆ. ಈ ನಿರ್ಧಾರದಿಂದ ಕುಮಾರಸ್ವಾಮಿ ಅವರ ನಿಲುವಿಗೆ ಬಲ ಬಂದಂತಾಗಿದೆ.

ಜೆಡಿಎಸ್ ಕಾರ್ಯಕರ್ತರಲ್ಲಿ ಒಬ್ಬರಿಗೆ ಟಿಕೆಟ್ ಘೋಷಿಸುವ ಬಗ್ಗೆ ದೇವೇಗೌಡರು ಸ್ಪಷ್ಟ ಸಂದೇಶವನ್ನು ರೇವಣ್ಣನ ಕುಟುಂಬಕ್ಕೆ ರವಾನಿಸಿದ್ದಾರೆ. ಕಾಯಕರ್ತ ಸ್ವರೂಪ್ ಹಾಸನದ ಟಿಕೆಟ್ ಆಕಾಂಕ್ಷಿ ಎನ್ನಲಾಗಿದೆ. ಹೀಗಾಗಿ ಅವರಿಗೆ ಟಿಕೆಟ್ ನೀಡುವ ಒಲವನ್ನು ದೇವೇಗೌಡರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಶೀಘ್ರವೇ ಹಾಸನ ಟಿಕೆಟ್ ಘೋಷಣೆ
ಟಿಕೆಟ್ ಹಂಚಿಕೆ ವಿಚಾರವಾಗಿ ಜೆಡಿಎಸ್‌ನಲ್ಲಿ ಭಿನ್ನಾಭಿಪ್ರಾಯ ಶುರುವಾಗಿತ್ತು. ಅದರಲ್ಲು ಹಾಸನ ಟಿಕೆಟ್ ವಿಚಾರ ಬರುತ್ತಿದ್ದಂತೆ ಎಚ್.ಡಿ ರೇವಣ್ಣ ಅವರು ಕೆಂಡವಾಗಿದ್ದರು. ತಮ್ಮ ಪತ್ನಿ ಭವಾನಿಗೆ ಟಿಕೆಟ್ ಘೋಷೀಸಬೇಕು ಎಂದು ಪಟ್ಟು ಹಿಡಿದಿದ್ದರು. ಇದಕ್ಕೆ ಕುಮಾರಸ್ವಾಮಿ ಅವರು ಆಕ್ಷೇಪಿಸಿದ್ದರು. ಇದು ಜೆಡಿಎಸ್ ಪಕ್ಷದಲ್ಲಿ ಆಂತರಿಕ ವೈಮನಸ್ಸು, ಒಳ ರಾಜಕೀಯಕ್ಕೆ, ಬಿಕ್ಕಟ್ಟಿಗೆ ನಾಂದಿ ಮಾಡಿಕೊಟ್ಟಿತ್ತು. ಎಚ್‌ಡಿ ಕುಮಾರಸ್ವಾಮಿ ಹಾಗೂ ಹೆಚ್‌ಡಿ ರೇವಣ್ಣ ನಡುವೆ ವೈಮನಸ್ಸು ಉಂಟಾಗಿತ್ತು.
ಇದೇಲ್ಲವನ್ನು ಸೂಕ್ಷ್ಮವಾಗಿ ಅರಿತು ಕುಟುಂಬದವರಿಗೆ ಟಿಕೆಟ್ ನೀಡಿದರೆ ಆಗುವ ನಷ್ಟ ಸೇರಿದಂತೆ ರಾಜಕೀಯ ಸಾಧಕ-ಬಾಧಕಗಳನ್ನು ಮನಗಂಡು ದೇವೇಗೌಡರು ಸಂಧಾನಸಭೆ ನಡೆಸಿದ್ದಾರೆ. ಇದರಿಂದ ಜೆಡಿಎಸ್ ನಿಲುವು ಮತ್ತು ಟಿಕೆಟ್ ಯಾರಿಗೆ ಸಿಗಲಿದೆ ಎಂಬ ಸ್ಪಷ್ಟನೆಯನ್ನು ದೇವೇಗೌಡರು ನೀಡುವಲ್ಲಿ ಸಫಲರಾಗಿದ್ದಾರೆ. ಆದಷ್ಟು ಶೀಘ್ರವೇ ಹಾಸನ ಟಿಕೆಟ್ ಯಾರಿಗೆ ಎಂಬ ಅಧಿಕೃತ ಮಾಹಿತಿ ಬಹಿರಂಗಗೊಳ್ಳಲಿದೆ.












Click it and Unblock the Notifications