ಬೆಂಗಳೂರಿನಿಂದ ಅಮ್ಮ ತಮಿಳುನಾಡಿಗೆ ಸ್ಥಳಾಂತರ?
ಬೆಂಗಳೂರು, ಅ.9 : ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಜಯಲಲಿತಾ ಅವರನ್ನು ತಮಿಳುನಾಡಿಗೆ ಸ್ಥಳಾಂತರ ಮಾಡಲಾಗುತ್ತದೆಯೇ?. ತಮಿಳುನಾಡು ಸರ್ಕಾರ ಈ ಬಗ್ಗೆ ಮನವಿ ಸಲ್ಲಿಸಿದರೆ ಪರಿಶೀಲಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಜಯಚಂದ್ರ ಅವರು, ತಮಿಳುನಾಡು ಸರ್ಕಾರ ಜಯಲಲಿತಾ ಅವರನ್ನು ಸ್ಥಳಾಂತರ ಮಾಡುವ ಕುರಿತು ಮನವಿ ಸಲ್ಲಿಸಿದರೆ ಆ ರಾಜ್ಯದ ಜೈಲಿಗೆ ಸ್ಥಳಾಂತರಿಸುವ ಸಾಧ್ಯತೆ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿದರು. ಜಯಲಲಿತಾ ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ, ಸುಪ್ರೀಂ ಆದೇಶದಂತೆ ವಿಚಾರಣೆ ಬೆಂಗಳೂರಿನಲ್ಲಿ ನಡೆಯುತ್ತಿದೆ ಎಂದರು.

ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿ, ಬಂದೀಖಾನೆ ಪೊಲೀಸ್ ಮಹಾನಿರ್ದೇಶಕರು ಮೊದಲು ಪತ್ರ ಬರೆದು ಜಯಲಲಿತಾ ಅವರನ್ನು ಸ್ಥಳಾಂತರ ಮಾಡುವಂತೆ ಮನವಿ ಸಲ್ಲಿಸಬೇಕು. ಅದನ್ನು ರಾಜ್ಯದ ಬಂದೀಖಾನೆ ಪೊಲೀಸ್ ಮಹಾ ನಿರ್ದೇಶಕರು ಒಪ್ಪಿದ ನಂತರ ಹೈಕೋರ್ಟ್ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಸಚಿವರು ತಿಳಿಸಿದರು. [ಜಯಾ ಕೇಸ್ ಚೆನ್ನೈಗೆ ವರ್ಗಾಯಿಸಿ ಅಂದ್ರು ದೇವೇಗೌಡ್ರು]
ಜಯಲಲಿತಾ ಅವರ ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೂ ಕರ್ನಾಟಕ ರಾಜ್ಯಕ್ಕೂ ಸಂಬಂಧವಿಲ್ಲ. ಸುಪ್ರೀಂಕೋರ್ಟ್ ಆದೇಶದಂತೆ ಇಲ್ಲಿ ವಿಚಾರಣೆ ನಡೆದಿದೆ. ತೀರ್ಪು ಹೊರಬಂದ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅವರನ್ನು ಇಡಲಾಗಿದೆ. ಆದ್ದರಿಂದ ಅಗತ್ಯ ರಕ್ಷಣೆಯನ್ನು ರಾಜ್ಯ ಸರ್ಕಾರ ನೀಡುತ್ತಿದೆ ಎಂದು ಜಯಚಂದ್ರ ಸ್ಪಷ್ಟಪಡಿಸಿದರು. [ಕಾವೇರಿ ನೀವೇ ಇಟ್ಕೊಳ್ಳಿ, ಜಯಾಲಲಿತಾ ನಮಗೆ ಕೊಡಿ]
ಜಯಲಲಿತಾ ಪ್ರಕರಣದ ವಿಚಾರಣೆಯನ್ನು ತಮಿಳುನಾಡಿಗೆ ವರ್ಗಾವಣೆ ಮಾಡಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಳೆದವಾರ ಒತ್ತಾಯಿಸಿದ್ದರು. ಜಯಲಲಿತಾ ಬೆಂಗಳೂರಿನಲ್ಲಿರುವ ತನಕ ಅವರ ಬೆಂಬಲಿಗರು ಇಲ್ಲಿಗೆ ಆಗಮಿಸುತ್ತಾರೆ. ಆದ್ದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ದೇವೇಗೌಡರು ಹೇಳಿದ್ದರು.












Click it and Unblock the Notifications