ಜಾಲಹಳ್ಳಿ ಕ್ರಾಸ್ ಅಂಡರ್ ಪಾಸ್ ಕಾಮಗಾರಿ: ಶೀಘ್ರದಲ್ಲೇ ಸಂಚಾರದಲ್ಲಿ ಬದಲಾವಣೆ ಸಾಧ್ಯತೆ
ಐದು ವರ್ಷಗಳಿಂದ ಹಲವು ಕಾರಣಗಳಿಂದ ನೆನೆಗುದಿಗೆ ಬಿದ್ದಿದ್ದ ಜಾಲಹಳ್ಳಿ ಕ್ರಾಸ್ ಅಂಡರ್ ಪಾಸ್ ನಿರ್ಮಾಣ ಕಾಮಗಾರಿ ಆರಂಭವಾಗಿದ್ದು, ಈ ಮಾರ್ಗದಲ್ಲಿ ಸಂಚಾರ ಬದಲಾವಣೆ ಮಾಡುವ ಸಾಧ್ಯತೆ ಇದೆ. ಕಳೆದ 5 ವರ್ಷದ ಹಿಂದೆಯೇ ಇಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಕಾಮಗಾರಿ ಶುರುವಾಗಬೇಕಿತ್ತು, ಆದರೆ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾದ ಕಾರಣ ಕಾಮಗಾರಿ ತಡವಾಗಿ ಆರಂಭವಾಗಿದೆ.
ಇಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆ ಕಡೆಯಿಂದ ಕಾಮಗಾರಿ ಆರಂಭಿಸಲಾಗಿದೆ. ಇನ್ನು ಕೆಲವು ದಿನಗಳಲ್ಲಿ ತುಮಕೂರು ರಸ್ತೆ ಜಂಕ್ಷನ್‌ನಲ್ಲಿ ಕಾಮಗಾರಿ ಆರಂಭವಾಗುವ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಟ್ರಾಫಿಕ್ ಬಿಸಿ ಇನ್ನಷ್ಟು ಹೆಚ್ಚಾಗಿ ಕಾಡಲಿದೆ.

ರಾಷ್ಟ್ರೀಯ ಹೆದ್ದಾರಿ 4, ತುಮಕೂರು ರಸ್ತೆಯಲ್ಲಿ ಹೆಚ್ಚಿನ ವಾಹಗಳು ಓಡಾಡುವ ಕಾರಣ ಸಂಚಾರ ದಟ್ಟಣೆ ಈಗಲೇ ಹೆಚ್ಚಾಗಿದ್ದು, ಕಾಮಗಾರಿ ಸಂದರ್ಭದಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ. ಗೊರಗುಂಟೆಪಾಳ್ಯ ಫ್ಲೈ ಓವರ್ ಮೇಲೆ ಭಾರಿ ವಾಹನಗಳ ಓಡಾಟಕ್ಕೆ ನಿಷೇಧ ಇರುವ ಕಾರಣ, ಜಾಲಹಳ್ಳಿ ಕ್ರಾಸ್ ಜಂಕ್ಷನ್‌ನಲ್ಲಿ ಕೂಡ ಹೆಚ್ಚಿನ ದಟ್ಟಣೆಯಾಗುತ್ತಿದೆ.
57 ಕೋಟಿ ವೆಚ್ಚ, ಭೂಸ್ವಾಧೀನಕ್ಕೆ 140 ಕೋಟಿ ರುಪಾಯಿ
ಎರಡನೇ ಸ್ಟೇಜ್ ಪೀಣ್ಯ ಕೈಗಾರಿಕಾ ಪ್ರದೇಶ ರಿಂಗ್ ರಸ್ತೆ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸುಬ್ರಾತೋ ಮುಖರ್ಜಿ ರಸ್ತೆಯಲ್ಲಿ ಪ್ರತಿನಿತ್ಯ ಭಾರಿ ಟ್ರಾಫಿಕ್ ಉಂಟಾಗುತ್ತಿದ್ದು ವಾಹನ ಸವಾರರು ಪರದಾಡುವಂತಾಗಿದೆ. 2016-17ರ ಸಾಲಿನಲ್ಲಿ ಕರ್ನಾಟಕ ಸರ್ಕಾರ 57 ಕೋಟಿ ರುಪಾಯಿ ವೆಚ್ಚದಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಯೋಜಿಸಿತ್ತು.
ಆದರೆ ಅಂಡರ್ ಪಾಸ್ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾದ ಕಾರಣ ಕಾಮಗಾರಿ ಆರಂಭ ಮುಂದೂಡುತ್ತಲೇ ಬಂದಿತ್ತು. 48 ಆಸ್ತಿ ಮಾಲೀಕರು ಭೂಮಿಯನ್ನು ಕೊಡಲು ಒಪ್ಪದ ಕಾರಣ ಕಾಮಗಾರಿ ನೆನೆಗುದಿಗೆ ಬಿದ್ದಿತ್ತು. ಆದರೆ, ಸದ್ಯ 10,432.78 ಚದರ ಅಡಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ 140 ಕೋಟಿ ರೂಪಾಯಿ ಪರಿಹಾರ ನೀಡಿದೆ.
ಕನಿಷ್ಟ ಎರಡು ವರ್ಷದಲ್ಲಿ ಪೂರ್ಣ
ಇನ್ನು ಕಾಮಗಾರಿ ಮುಗಿಸಲು ಕನಿಷ್ಠ ಒಂದೂವರೆಯಿಂದ ಎರಡು ವರ್ಷಗಳ ಸಮಯ ಬೇಕು ಎಂದು ಹೇಳಲಾಗಿದೆ. ಅಂಡರ್ ಪಾಸ್ ನಿರ್ಮಾಣವಾದ ಬಳಿಕ ಹಲವು ವರ್ಷಗಳ ಸಂಚಾರ ಸಮಸ್ಯೆಗೆ ಮುಕ್ತಿ ಸಿಗಲಿದೆ. ಆದರೆ ಕಾಮಗಾರಿ ಮುಗಿಯುವವರೆಗೆ ಟ್ರಾಫಿಕ್ ಕಿರಿಕಿರಿಯನ್ನು ಭರಿಸಬೇಕಾಗುತ್ತದೆ.
ಹೆದ್ದಾರಿ ಪ್ರಾಧಿಕಾರದಿಂದ ವಾಹನ ಸಂಚಾರಕ್ಕೆ ಬದಲೀ ಮಾರ್ಗ ವ್ಯವಸ್ಥೆ ಮಾಡಲು ಸೂಚನೆ ನೀಡಲಾಗಿದೆ. ಬದಲೀ ಮಾರ್ಗ ವ್ಯವಸ್ಥೆಯಾದ ಬಳಿಕ ಜಂಕ್ಷನ್‌ನಲ್ಲಿ ಕಾಮಗಾರಿ ಆರಂಭವಾಗಲಿದೆ. ಬಸ್‌ಗಳಿಗೆ ಗೊರಗುಂಟೆಪಾಳ್ಯ ಫ್ಲೈಓವರ್ ನಲ್ಲಿ ಚಲಿಸಲು ಅವಕಾಶ ನೀಡುವ ಸಾಧ್ಯತೆ ಕೂಡ ಇದೆ. ಆದರೆ, ಲಾರಿ ಮತ್ತು ಭಾರಿ ವಾಹನಗಳಿಗೆ ಅವಕಾಶ ನೀಡುವು ಸಾಧ್ಯತೆ ಇಲ್ಲ, ಸಂಚಾರ ದಟ್ಟಣೆ ನಿಯಂತ್ರಿಸಲು ಪರ್ಯಾಯ ಮಾರ್ಗಗಳನ್ನು ಬಳಸಿದರೆ ಉತ್ತಮ ಎಂದು ಹೇಳಲಾಗಿದೆ.












Click it and Unblock the Notifications