New Railway Line: ತುಮಕೂರು-ಚಿತ್ರದುರ್ಗ-ದಾವಣಗೆರೆ ಲೈನ್ ಯೋಜನೆಗೆ ₹650 ಕೋಟಿ ಟೆಂಡರ್ ಆಹ್ವಾನ, ಅಪ್ಡೇಟ್ಸ್
ಬೆಂಗಳೂರು, ಜುಲೈ 26: ಉತ್ತರ ಕರ್ನಾಟಕದಿಂದ-ನೇರವಾಗಿ ರಾಜಧಾನಿ ಬೆಂಗಳೂರಿಗೆ ರೈಲು ಸಂಪರ್ಕ ಕಲ್ಪಿಸುವ ಮಹತ್ತರ ಯೋಜನೆಯಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ರಾಯದುರ್ಗ, ತುಮಕೂರು ಸೇರಿದಂತೆ ವಿವಿಧೆಡೆ ಭೂಮಿ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಮೊದಲೇ ಹೇಳಿದಂತೆ ವಿದ್ಯುದೀಕರಣ ಮತ್ತು ವಿದ್ಯುತ್ ಸಾಮಾನ್ಯ ಸೇವೆಗಳು ಒಳಗೊಂಡಂತೆ ಚೈನೇಜ್‌ಗಾಗಿ (ರೈಲ್ವೆ ಮಾರ್ಗದಲ್ಲಿ ದೂರ ಗುರುತು ವ್ಯವಸ್ಥೆ) 600 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ.
ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಮಾರ್ಗ ಯೋಜನೆಯಲ್ಲಿ ಸಿವಿಲ್ ಮತ್ತು ಟ್ರ್ಯಾಕ್ ಕೆಲಸಗಳು ಬರದಿಂದ ಸಾಗಿವೆ. ಈ ಮಾರ್ಗದಲ್ಲಿ ಸಿಗ್ನಲ್ ಮತ್ತು ದೂರಸಂಪರ್ಕ ಕೆಲಸಗಳು ತಾವರೆಕೆರೆ (ಹೊರತುಪಡಿಸಿ) ಮತ್ತು ಹಿರಿಯೂರು (ಹೊರತುಪಡಿಸಿ) ನಿಲ್ದಾಣಗಳ ನಡುವಿನ ರೈಲ್ವೆ ವಿದ್ಯುದೀಕರಣ ಮತ್ತು ವಿದ್ಯುತ್ ಸಾಮಾನ್ಯ ಸೇವೆಗಳು ನಡೆಸಲು ಟೆಂಡರ್ ಕರೆಯಲಾಗಿದೆ.

ರೈಲ್ವೆ ವಿದ್ಯುದೀಕರಣ ಮತ್ತು ವಿದ್ಯುತ್ ಸಾಮಾನ್ಯ ಸೇವೆ ಸೇರಿ ಚೈನೇಜ್ 66.400 ಮತ್ತು ಚೈನೇಜ್ 90.000 (23.600 ಕಿಲೋ ಮೀಟರ್ ನಡುವಿನ ಹೊಸ ರೈಲು ಮಾರ್ಗಕ್ಕಾಗಿ ಕರೆದ ಟೆಂಡರ್‌ಗಳು ಇವಾಗಿವೆ. ಈ 23.6 ಕಿಲೋ ಮೀಟರ್ ಟೆಂಡರ್ ಮೊತ್ತ ಸುಮಾರು 413 ಕೋಟಿ ರೂಪಾಯಿ.
651 ಕೋಟಿ ರೂ. ಮೊತ್ತದ ಟೆಂಡರ್
ಇನ್ನೂ ಊರುಕೆರೆ ಮತ್ತು ಕೊರಟಗೆರೆ ನಿಲ್ದಾಣ ಹೊರತುಪಡಿಸಿ ಚೈನೇಜ್ 12/800 ಮತ್ತು ಚೈನೇಜ್ 30/500 ನಡುವಿನ ಹೊಸ ರೈಲು ಮಾರ್ಗ ನಿರ್ಮಾಣಕ್ಕಾಗಿ ಸಿವಿಲ್ ಕೆಲಸಗಳು, ಸಿಗ್ನಲ್ ಮತ್ತು ದೂರಸಂಪರ್ಕ ಕೆಲಸಗಗಳಿಗಾಗಿ ಮತ್ತೊಂದು ಟೆಂಡರ್ ಕರೆಯಲಾಗಿದೆ. ಈಗಾಗಲೇ ರಾಯದುರ್ಗ ಮತ್ತು ತುಮಕೂರು ಭಾಗಗಳಲ್ಲಿ ಭೂಮಿ ಸ್ವಾಧೀನ ಕಾರ್ಯ ಮುಗಿದಿದೆ. ಈ ಮಾರ್ಗದಲ್ಲಿ ವಿದ್ಯುತ್ ಸಾಮಾನ್ಯ ಸೇವೆಗಳು, ವಿದ್ಯುದೀಕರಣಕ್ಕಾಗಿ ಟೆಂಡರ್ ಕರೆಯಲಾಗಿದೆ. ಇದರ ಒಟ್ಟು ಅಂದಾಜು ವೆಚ್ಚ 238 ಕೋಟಿ ರೂಪಾಯಿ ಆಗಿದೆ. ಒಟ್ಟು 651 ಕೋಟಿ ರೂಪಾಯಿ ಮೊತ್ತದ ರೈಲ್ವೆ ಟೆಂಡರ್ ಇದಾಗಿದೆ.
ಬೆಂಗಳೂರಿನಿಂದ ತುಮಕೂರು, ಅರಸಿಕರೆ, ಕಡೂರು, ಬಿರೂರು, ಚಿಕ್ಕಜಾಜೂರು, ದಾವಣಗೆರೆ ಮಾರ್ಗವಾಗಿ ಹಾಲಿ ರೈಲುಗಳೂ ಉತ್ತರ ಕರ್ನಾಟಕದ ಭಾಗಗಳು, ಪುಣೆ ಮಾರ್ಗವಾಗಿ ಮುಂಬೈ, ಇದೇ ಮಾರ್ಗವಾಗಿ ದೆಹಲಿಗೆ ರೈಲುಗಳು ಚಲಿಸುತ್ತವೆ. ಬೆಂಗಳೂರು ಮತ್ತು ಉತ್ತರ ಕರ್ನಾಟಕ ಜಿಲ್ಲೆಗಳಿಗೆ ನಿತ್ಯ ಲಕ್ಷಾಂತರ ಜನರು ಓಡಾಡುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರ ನೇರ ರೈಲು ಮಾರ್ಗ ವ್ಯವಸ್ಥೆ ರೂಪಿಸಿ, ನಿರ್ಮಿಸುತ್ತಿದೆ.
ಈ ಹೊಸ ನೇರ ರೈಲು ಮಾರ್ಗವು ತುಮಕೂರು-ಚಿತ್ರದುರ್ಗ-ದಾವಣಗೆರೆ ಮಧ್ಯ ಸಂಪರ್ಕ ಕೊಂಡಿಯಾಗಲಿದೆ. 2027ಕ್ಕೆ ಯೋಜನೆ ಪೂರ್ಣಗೊಳ್ಳಲಿದೆ. ಜೋಡಿ ಹಳಿ ಮಾರ್ಗದಿಂದ ಬೆಂಗಳೂರಿನಿಂದ ಹುಬ್ಬಳ್ಳಿ-ಧಾರವಾಡಕ್ಕೆ ರೈಲು ಸಂಚಾರ ಅವಧಿ ತಗ್ಗಲಿದೆ. ಸಮಯ ಉಳಿತಾಯವಾಗಲಿದೆ. ಅತ್ಯುತ್ತಮ ಸಾರಿಗೆ ಸಾರ್ವಜನಿಕರಿಗೆ ಲಭ್ಯವಾಗುತ್ತದೆ.












Click it and Unblock the Notifications