ಯೋಗ ನನ್ನ ಅತ್ಯಂತ ಪ್ರಿಯ ಸಂಗತಿಗಳಲ್ಲೊಂದು: ಎಚ್ ಡಿ ಕುಮಾರಸ್ವಾಮಿ
Recommended Video

ಬೆಂಗಳೂರು, ಜೂನ್ 21: 'ವಿಶ್ವ ಯೋಗ ದಿನಾಚರಣೆ'ಯ ದಿನದ ಶುಭಾಶಯಗಳು. ಯೋಗ ಎನ್ನುವುದು ದೇಹ ಹಾಗೂ ಮನಸ್ಸನ್ನು ಸದಾ ಕ್ರಿಯಾಶೀಲವಾಗಿಡುವ ಮಾರ್ಗ' ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗದಿನದ ನಿಮಿತ್ತ, ಯೋಗದ ಮಹತ್ವದ ಕುರಿತು ಅವರು ಮಾತನಾಡುತ್ತಿದ್ದರು. "ಯೋಗ ನಮ್ಮಲ್ಲಿರುವ ತಾಮಸವನ್ನು ಕಡಿಮೆ ಮಾಡಿ ಬೆಳಕಿನ ಭಾವವನ್ನು ಹೆಚ್ಚಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಮ್ಮನ್ನು ನಾವು ಕ್ರಿಯಾಶೀಲವಾಗಿಟ್ಟುಕೊಳ್ಳಲು, ಶಾಂತ ಮನಸ್ಸನ್ನು ಹೊಂದಲು ಯೋಗ ಅಗತ್ಯ" ಎಂದು ಯೋಗದ ಅಗತ್ಯವನ್ನು ತಿಳಿಸಿದರು.
"ಯೋಗ ಎನ್ನುವುದು ನನಗೆ ಪ್ರಿಯಯಾದ ಸಂಗತಿಗಳಲ್ಲೊಂದು. ನನ್ನ ಕುಟುಂಬ ಈ ಮೊದಲಿನಿಂದಲೂ ಯೋಗಾಭ್ಯಾಸ ನಡೆಸುತ್ತಾ ಬಂದಿದೆ. ನನ್ನ ತಂದೆ ಹಾಗೂ ನನ್ನ ಪತ್ನಿ ಸಹಾ ಯೋಗಪ್ರಿಯರು. ಸ್ವಾಮಿ ವಿವೇಕಾನಂದರು 'ಅಭ್ಯಾಸದಿಂದ ಯೋಗ ಸಾಧ್ಯ. ಯೋಗದಿಂದ ಜ್ಞಾನ, ಜ್ಞಾನದಿಂದ ಪ್ರೀತಿ, ಪ್ರೀತಿಯಿಂದ ಸಂತೋಷ ಪ್ರಾಪ್ತವಾಗುತ್ತದೆ' ಎಂದಿದ್ದರು. ಅಂತಹ ಸಂತೋಷವನ್ನು ಪಡೆಯಲು ಯೋಗ ಅಗತ್ಯವಾಗಿದೆ" ಎಂದರು.

"ಯೋಗ ಭಾರತ ಜಗತ್ತಿಗೆ ನೀಡಿರುವ ಕೊಡುಗೆ. ಇದನ್ನು ವಿಶ್ವಸಂಸ್ಥೆಯೂ ಸಹಾ ಗುರುತಿಸಿ ಅದನ್ನು ಪ್ರಚುರಪಡಿಸಲೆಂದೇ 'ವಿಶ್ವ ಯೋಗ ದಿನಾಚರಣೆಯನ್ನು' ಆಚರಿಸುವ ವ್ಯವಸ್ಥೆ ಮಾಡಿತು. 2015 ರಿಂದ ಆರಂಭವಾದ ಈ ದಿನಾಚರಣೆ ಜಗತ್ತಿನ ಅನೇಕ ದೇಶಗಳಿಗೆ ಸ್ಫೂರ್ತಿ ತುಂಬಿದೆ. ಅಷ್ಟೇ ಅಲ್ಲ, ಭಾರತದ ಯೋಗ ಪರಂಪರೆಯ ಹಿರಿಮೆಯ ಬಗ್ಗೆಯೂ ಕಣ್ಣೋಟ ನೀಡಿದೆ" ಎಂದು ಯೋಗದ ಮಹತ್ವವನ್ನು ತಿಳಿಸಿದರು.
"ಯೋಗದ ಮಹತ್ವವನ್ನು ಜಗತ್ತಿಗೆ ಅರಿವು ಮಾಡಿಸುವ ಉದ್ಧೇಶದಿಂದ ಮೈಸೂರಿನಲ್ಲಿ ಪ್ರತೀ ವರ್ಷ ಯೋಗದಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಪ್ರಯತ್ನ ನಡೆಯುತ್ತಿದೆ. ಅಂತೆಯೇ ಈ ವರ್ಷವೂ ಸಂಘ ಸಂಸ್ಥೆಗಳು ಒಗ್ಗೂಡಿ ಗಿನ್ನೆಸ್ ದಾಖಲೆ ಸ್ಥಾಪನೆಗೆ ಮುಂದಾಗಿದ್ದಾರೆ. ಅವರ ಪ್ರಯತ್ನ ಯಶಸ್ವಿಯಾಗಲಿ" ಎಂದು ನಾನು ಹಾರೈಸಿದರು.
'ಯೋಗ ದಿನಾಚರಣೆಯ ದಿನ ಮಾತ್ರವಲ್ಲದೆ ಪ್ರತೀ ದಿನ ಯೋಗಕ್ಕೆ ನಿಮ್ಮನ್ನು ಅರ್ಪಿಸಿಕೊಳ್ಳಿ' ಎಂದು ಮನವಿಮಾಡಿದರು.












Click it and Unblock the Notifications