Infosys: ಪ್ರಮುಖ ಇನ್ಫೋಸಿಸ್ ಪ್ರಶಸ್ತಿಗೆ ಆಯ್ಕೆಯ ವಯೋಮಿತಿ ಪರಿಷ್ಕರಣೆ
ಬೆಂಗಳೂರು, ಮೇ 15: ಐಟಿ ದಿಗ್ಗಜ ಕಂಪನಿಗಳಲ್ಲಿ ಒಂದಾಗಿರುವ ಭಾರತದ ಇನ್ಫೋಸಿಸ್ ಕಂಪನಿಯು ತನ್ನ ಇನ್ಫೋಸಿಸ್ ಸೈನ್ಸ್ ಫೌಂಡೇಶನ್ (ISF) ವತಿಯಿಂದ ಸಂಶೋಧಕರನ್ನು ಉತ್ತೇಜಿಸುವ ಸಲುವಾಗಿ 'ಇನ್ಫೋಸಿಸ್ ಪ್ರಶಸ್ತಿ' ನೀಡುತ್ತಿದೆ. ಇದೀಗ ಈ ಪ್ರಶಸ್ತಿಗೆ ಆಯ್ಕೆ ಮಾಡುವ ಸಂಶೋಧಕರ ವಯಸ್ಸಿನ ಮಿತಿ ಪರಿಷ್ಕರಣೆ ಮಾಡುವುದಾಗಿ ತಿಳಿಸಿದೆ.
ಇನ್ಫೋಸಿಸ್ ಪ್ರಶಸ್ತಿಗೆ ಹೊಸ ದಿಕ್ಕನ್ನು ಕಲ್ಪಿಸುವ ಕುರಿತು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ (ISF) ಬುಧವಾರ ಘೋಷಿಸಿದೆ. ವೃತ್ತಿಯ ಮಧ್ಯಭಾಗದಲ್ಲಿ ಇರುವವರನ್ನು ಗುರುತಿಸಿ ಅವರನ್ನು ಗೌರವಿಸುವ ಬದಲು ಇನ್ನು ಮುಂದೆ ಈ ಪ್ರಶಸ್ತಿಯು ವೃತ್ತಿಯ ಆರಂಭದ ಹಂತಗಳಲ್ಲಿ ಇರುವವರನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಲಿದೆ ಎಂದು ಫೌಂಡೇಷನ್ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ತಿಳಿಸಿದ್ದಾರೆ.

ಭವಿಷ್ಯದಲ್ಲಿ ಸಾಧನೆ ಮಾಡಬಲ್ಲರು ಎನ್ನುವವರನ್ನು ಗೌರವಿಸುವ ಹಾಗೂ ಸಾಮರ್ಥ್ಯ ಇರುವವರನ್ನು ಗೌರವಿಸುವ ಗುರಿ ಹೊಂದಲಾಗಿದೆ. ದೀರ್ಘಾವಧಿಯ ಧನಾತ್ಮಕ ಪರಿವರ್ತನೆಗಳನ್ನು ಕಾಣುವ ಉದ್ದೇಶದಿಂದ ಪ್ರಶಸ್ತಿಗೆ ಆಯ್ಕೆಯಾಗುವವರ ಗರಿಷ್ಠ ವಯೋಮಿತಿಯನ್ನು 40 ವರ್ಷಕ್ಕೆ ಪರಿಷ್ಕರಿಸಲಾಗುತ್ತಿದೆ ಎಂದರು.
ಇನ್ಫೋಸಿಸ್ ಗುರಿಯಲ್ಲಿ ಬದಲಾವಣೆ ಇಲ್ಲ
ಮಾನವ ಕುಲಕ್ಕೆ ಪ್ರಯೋಜನ ತಂದುಕೊಡುವ ಅತ್ಯುತ್ತಮ ಸಂಶೋಧನೆಗಳನ್ನು ಗುರುತಿಸುವುದು ಮತ್ತು ಯುವ ಸಂಶೋಧಕರಿಗೆ, ವಿಜ್ಞಾನಿಗಳಾಗುವ ಬಯಕೆ ಹೊಂದಿರುವವರಿಗೆ ಮಾದರಿ ವ್ಯಕ್ತಿಗಳನ್ನು ಸೃಷ್ಟಿಸಿಕೊಡುವ ಇನ್ಫೋಸಿಸ್ ಪ್ರಶಸ್ತಿಯ ಮೂಲಭೂತ ಗುರಿಯಲ್ಲಿ ಯಾವ ಬದಲಾವಣೆ ಇರುವುದಿಲ್ಲ.
ಸಮನ್ವಯ ಮತ್ತು ಸಂಶೋಧನೆಯ ಲಭ್ಯತೆಯನ್ನು ಹೆಚ್ಚಿಸುವ ಉದ್ದೇಶಕ್ಕೆ ಬಲ ತಂದುಕೊಡುವ ನಿಟ್ಟಿನಲ್ಲಿ ಐಎಸ್‌ಎಫ್, ಇನ್ಫೋಸಿಸ್ ಪ್ರಶಸ್ತಿ ಪಡೆಯುವ ಸಂದರ್ಭದಲ್ಲಿ ಭಾರತದ ಹೊರಗಡೆ ನೆಲೆಸಿರುವ ವ್ಯಕ್ತಿಗಳು ಭಾರತದಲ್ಲಿ ತಮ್ಮ ಆಯ್ಕೆಯ ಸಂಸ್ಥೆಯಲ್ಲಿ ಒಂದಿಷ್ಟು ಕಾಲ ಕಳೆಯಬೇಕೆಂದು ತಿಳಿಸುತ್ತದೆ ಎಂದು ಹೇಳಿದರು.
ಸಂಶೋಧಕರು ದೇಶದಲ್ಲಿ 30 ದಿನ ಕಳೆಯಬೇಕು
ಭಾರತದ ಹೊರಗಡೆ ಇರುವ ಹಾಗೂ ಪ್ರಶಸ್ತಿಗೆ ಪಾತ್ರರಾಗುವ ವ್ಯಕ್ತಿಗಳು ಭಾರತದ ಸಂಸ್ಥೆಯಲ್ಲಿ 30 ದಿನಗಳನ್ನು (ಗರಿಷ್ಠ ಎರಡು ಭೇಟಿಗಳಲ್ಲಿ) ಕಳೆಯಬೇಕು ಎಂಬ ಮನವಿ ಮಾಡಲಾಗುತ್ತದೆ. ಅವರು ಈ ಸಂಸ್ಥೆಗಳಲ್ಲಿನ ಸಂಶೋಧನಾ ತಂಡಗಳ ಜೊತೆ ಮಾತುಕತೆ ನಡೆಸುವಂತೆ ಆಗಲು, ಅಲ್ಲಿ ಸಮಾನಮನಸ್ಕರ ಒಂದು ಜಾಲವನ್ನು ರೂಪಿಸಲು ಇದು ನೆರವಾಗುತ್ತದೆ.

ಈ ಬಗೆಯ ಸಹಭಾಗಿತ್ವಗಳು ಎರಡೂ ಕಡೆಯವರಿಗೆ ಪ್ರಯೋಜನ ತಂದುಕೊಡುವ, ದೀರ್ಘಾವಧಿಯ ಪಾಲುದಾರಿಕೆಗಳಾಗಿ ಪರಿವರ್ತನೆ ಕಾಣುತ್ತವೆ ಎಂಬುದು ಇನ್ಫೋಸಿಸ್ ಸೈನ್ಸ್ ಫೌಂಡೇಷನ್‌ನ ಆಶಯ. ಇನ್ಫೋಸಿಸ್ ಪ್ರಶಸ್ತಿಯು ಗುರುತಿಸುವ ವಿಭಾಗಗಳು ಬಹುತೇಕ ಮೊದಲಿನಂತೆಯೇ ಇರಲಿವೆ.
ಆದರೆ ಇನ್ನು ಮುಂದೆ ಅರ್ಥಶಾಸ್ತ್ರವು ಒಂದು ಪ್ರತ್ಯೇಕ ವಿಭಾಗವಾಗಿ ಗುರುತಿಸಿಕೊಳ್ಳಲಿದೆ. ಈ ಮೊದಲು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶಸ್ತಿಯನ್ನು ಸಮಾಜ ವಿಜ್ಞಾನ ವಿಭಾಗದಲ್ಲಿ ನೀಡಲಾಗುತ್ತಿತ್ತು.
ಈ ವರ್ಷದಿಂದ ಆರು ವಿಭಾಗಗಳಲ್ಲಿ ಪ್ರಶಸ್ತಿ
ಪ್ರಸಕ್ತ 2024ನೇ ಸಾಲಿನಿಂದ ಇನ್ಫೋಸಿಸ್ ಪ್ರಶಸ್ತಿಯನ್ನು ನೀಡುವ ಆರು ವಿಭಾಗಗಳು ಹೀಗೆ ಇರಲಿವೆ: ಅರ್ಥಶಾಸ್ತ್ರ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ, ಮಾನವಿಕ ಮತ್ತು ಸಮಾಜ ವಿಜ್ಞಾನ, ಜೀವ ವಿಜ್ಞಾನ, ಗಣಿತ ವಿಜ್ಞಾನ ಹಾಗೂ ಭೌತವಿಜ್ಞಾನ ವಿಭಾಗದಲ್ಲಿ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.
15 ವರ್ಷಗಳ ಹಿಂದೆ ಪ್ರಶಸ್ತಿ ಪ್ರದಾನ ಆರಂಭಿಸಿಲಾಗಿದ್ದು, ಈವರೆಗೆ ವಿವಿಧ ಜ್ಞಾನಶಾಖೆಗಳಿಗೆ ಸೇರಿದ ಒಟ್ಟು 92 ಮಂದಿ ಅದ್ಭುತ ಪ್ರತಿಭಾವಂತರನ್ನು ಗುರುತಿಸಿ ಸನ್ಮಾನಿಸಲಾಗಿದೆ. ಸಂಸ್ಥೆ ಇನ್ನೂ ಹಲವು ಮಹತ್ತರ ಆಶಯಗಳನ್ನು ಹೊಂದಿದೆ ಎಂದು ಅವರು ತಿಳಿಸಿದರು.












Click it and Unblock the Notifications