ಬೆಂಗಳೂರು 'ಸೇನಾ ಮೇಳ' ದಲ್ಲಿ ಪುಳಕಿತರಾದ ವಿದ್ಯಾರ್ಥಿಗಳು
ಬೆಂಗಳೂರು, ಆಗಸ್ಟ್, 14 : ದೈತ್ಯಾಕಾರದ ಟ್ಯಾಂಕರ್ ಏರಿ ಕುಪ್ಪಳಿಸುತ್ತಿದ್ದ ಪುಟಾಣಿ ವಿದ್ಯಾರ್ಥಿಗಳಿಗೆ ದಣಿವಿರಲಿಲ್ಲ. ಪಿಸ್ತೂಲು, ರೈಫಲ್‌ಗಳನ್ನು ಸವರುತ್ತಿದ್ದ ಆ ಪುಟಾಣಿಗಳ ಕುತೂಹಲ ತಣಿದಿರಲಿಲ್ಲ. ತೇಲುವ ಸೇತುವೆ ಮೇಲೆ ಕುಪ್ಪಳಿಸುತ್ತಿದ್ದವರಿಗಂತೂ ಸಮಯದ ಪರಿವೇ ಇರಲಿಲ್ಲ.
ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಭಾರತೀಯ ಸೇನೆ ನಗರದ ಮದ್ರಾಸ್ ಎಂಜಿನಿಯರ್ ಗ್ರೂಪ್ ಕೇಂದ್ರದಲ್ಲಿ ಗುರುವಾರ ಮತ್ತು ಶುಕ್ರವಾರ 'ಸೇನಾ ಮೇಳ' ಆಯೋಜನೆಗೊಳಿಸಿದೆ. ಆ ಸಮಯದಲ್ಲಿ ಇಂತಹ ಮನೋಹರ ದೃಶ್ಯಗಳು ಕಂಡು ಬಂದಿದ್ದು, ಮೇಳದಲ್ಲಿ ಲವಲವಿಕೆ ತುಂಬಿ ತುಳುಕುತ್ತಿತ್ತು.[ಮಂಗಳೂರಿನಲ್ಲಿ ಸೈನಿಕ ಭವನ ಲೋಕಾರ್ಪಣೆ]

ಪ್ರದರ್ಶನದಲ್ಲಿದ್ದ ವಿವಿಧ ಬಗೆಯ ಪಿಸ್ತೂಲ್, ರೈಫಲ್‌ಗಳು, ಕ್ಷಿಪಣಿ ಬಗ್ಗೆ ವಿದ್ಯಾರ್ಥಿಗಳು ಕುತೂಹಲಶೀಲರಾಗಿ ಮಾಹಿತಿ ಪಡೆಯುತ್ತಿದ್ದರು. ಮೇಳದಲ್ಲಿ ಭೂಮಾಪನ ಮಾಡುವ ಸುಧಾರಿತ ಉಪಕರಣಗಳು, ಸಂವಹನ ಸಾಧನಗಳು, ಬಗೆಬಗೆಯ ಪ್ಯಾರಾಚೂಟ್ ಗಳು ನೋಡುಗರಲ್ಲಿ ಬೆರಗು ಹುಟ್ಟಿಸಿದ್ದವು.
ನೆಲ ಬಗೆಯುವ, ಕಲ್ಲು, ಹಿಮಗಡ್ಡೆ ಒಡೆದು ಹಾಕುವ ದೈತ್ಯ ಯಂತ್ರೋಪಕರಣಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಬಗೆ ಬಗೆಯ ಸೇತುವೆ, ಯುದ್ಧ ವಾಹನಗಳು, ಹಿಮ ಮತ್ತು ನೀರಿನಲ್ಲಿ ಸೈನಿಕರು ಬಳಸುವ ವಾಹಕಗಳು ಪ್ರದರ್ಶನಕ್ಕೆ ಮೆರಗು ಹೆಚ್ಚಿಸಿದ್ದವು.[ಅಪ್ರತಿಮ ಪ್ರಾಮಾಣಿಕ ಸೈನಿಕನಿಗೊಂದು ಸೆಲ್ಯೂಟ್]

ಬಾಂಬ್ ಪತ್ತೆ, ಸ್ಥಳಾಂತರ ಮತ್ತು ಎದುರಾಳಿಗಳನ್ನು ನಿಷ್ಕ್ರಿಯಗೊಳಿಸುವ ಸಾಧನಗಳು ಮೇಳದಲ್ಲಿ ಗಮನ ಸೆಳೆದವು. ಜೊತೆಗೆ ಮೇಳಕ್ಕೆ ಹಿನ್ನೆಲೆಯಾಗಿ ಕೇಳಿ ಬರುತ್ತಿದ್ದ ಸೇನೆಯ ಬ್ಯಾಂಡ್ ತಂಡದ ಸಂಗೀತ ಆಹ್ಲಾದಕರ ವಾತಾವರಣ ಸೃಷ್ಟಿಸಿತ್ತು.
ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಕಷ್ಟು ಮಾಹಿತಿ ಕಲೆಹಾಕಿದ್ದಾರೆ. ಸೇನಾ ಕಾರ್ಯವೈಖರಿ ಕಂಡು ಆಶ್ಚರ್ಯಚಕಿತರಾಗಿದ್ದಾರೆ. ವಿದ್ಯಾರ್ಥಿಗಳು ಇದರ ಕುರಿತಾಗಿ ಇನ್ನಷ್ಟು ಹೆಚ್ಚಿನ ತರಬೇತಿ ಪಡೆಯುವ ಉತ್ಸಾಹ ತೋರಿದ್ದಾರೆ ಎಂದು ಶಾಲಾ ಶಿಕ್ಷಕರು ಹೇಳಿದ್ದಾರೆ.












Click it and Unblock the Notifications