ಐಎಂಎ ಪ್ರಕರಣ: ಜಮೀರ್ ಅಹ್ಮದ್ ಗೆ ಸಿಬಿಐ ನೊಟೀಸ್
ಬೆಂಗಳೂರು, ಅಕ್ಟೋಬರ್ 01: ಬಹುಕೋಟಿ ವಂಚನೆಯ ಐಎಂಎ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಅವರಿಗೆ ಸಿಬಿಐ ನೊಟೀಸ್ ಜಾರಿ ಮಾಡಿದೆ.
ಪ್ರಕರಣವನ್ನು ರಾಜ್ಯ ಬಿಜೆಪಿ ಸರ್ಕಾರವು ಸಿಬಿಐಗೆ ವಹಿಸಿತ್ತು. ಪ್ರಕರಣ ವಹಿಸಿಕೊಂಡ ಸಿಬಿಐ ಜಮೀರ್ ಅವರಿಗೆ ಸೆಪ್ಟೆಂಬರ್ 19 ರಂದೇ ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ನೀಡಿತ್ತು. ಅದರಂತೆ ವಿಚಾರಣೆಗೆ ಹಾಜರಾಗಿದ್ದರು ಜಮೀರ್ ಅಹ್ಮದ್.
ಈಗ ಮತ್ತೆ ಸಿಬಿಐ ಜಮೀರ್ ಅವರಿಗೆ ನೊಟೀಸ್ ನೀಡಿದ್ದು, ಮತ್ತೆ ವಿಚಾರಣೆಗೆ ಬರುವಂತೆ ಕೋರಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಿಗೂ ನೊಟೀಸ್ ನೀಡಲಾಗಿದೆ ಎನ್ನಲಾಗಿದೆ.

ಜಮೀರ್ ಅಹ್ಮದ್ ಖಾನ್ ಹಾಗೂ ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ನಡುವೆ ಆಸ್ತಿ ಮಾರಾಟದ ವ್ಯವಹಾರ ನಡೆದಿತ್ತು. ಅದರ ಬಗ್ಗೆ ಸಿಬಿಐ ಈ ಹಿಂದೆ ಪ್ರಶ್ನೆ ಮಾಡಿತ್ತು. ಕಡಿಮೆ ಬೆಲೆಗೆ ಆಸ್ತಿ ಮಾರಾಟವಾಗಿದೆ ಎಂಬುದು ಸಿಬಿಐ ಗುಮಾನಿಗೆ ಕಾರಣವಾಗಿದೆ ಎನ್ನಲಾಗಿದೆ.
ಐಎಂಎ ಪ್ರಕರಣದಲ್ಲಿ ಅನರ್ಹ ಶಾಸಕ ರೋಷನ್ ಬೇಗ್‌ಗೂ ಸಿಬಿಐ ನೊಟೀಸ್ ಕಳುಹಿಸಿದೆ. ಆದರೆ ಅವರಿನ್ನೂ ವಿಚಾರಣೆಗೆ ಹಾಜರಾಗಿಲ್ಲ ಎನ್ನಲಾಗಿದೆ.












Click it and Unblock the Notifications